ಬೆಂಗಳೂರು: ರಾಜ್ಯ 7ನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನ, ಹಳೆಯ ಪಂಚಣಿ ಯೋಜನೆ (ಒಪಿಎಸ್), ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ನೇತೃತ್ವದ ನಿಯೋಗವು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿತು.
ರಾಜ್ಯ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನೌಕರರ ಸಂಘ ಹಮ್ಮಿಕೊಂಡಿರುವ ಪ್ರತಿಭಟನೆಯ ಮೊದಲ ಹಂತವಾಗಿ ತಹಸೀಲ್ದಾರ್, ಜಿಲ್ಲಾಧಿಕಾರಿಗಳು, ಸ್ಥಳೀಯ ಶಾಸಕರು ಮತ್ತು ಸಚಿವರಿಗೆ ಮನವಿ ಪತ್ರ ನೀಡುವ ಮೂಲಕ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುತ್ತಿದೆ. ಈ ನಡುವೆ ಶುಕ್ರವಾರ, ಬೆಂಗಳೂರು ನಗರದ ಎಲ್ಲಾ ಇಲಾಖೆಗಳ ಸುಮಾರು 3000ಕ್ಕೂ ಹೆಚ್ಚು ನೌಕರರು, ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದರು. ಬಳಿಕ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಸಂಘದ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು.
ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳು
1) ರಾಜ್ಯ 7ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿ ಆದೇಶ ಹೊರಡಿಸುವುದು: ರಾಜ್ಯ 7ನೇ ವೇತನ ಆಯೋಗವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಶಿಫಾರಸ್ಸು ವರದಿಯಲ್ಲಿನ ಫಿಟ್‌ಮೆಂಟ್ ಸೌಲಭ್ಯವನ್ನು ಯಥಾವತ್ತಾಗಿ 01-07-2022ರಿಂದ ಅನ್ವಯವಾಗುವಂತೆ ವೇತನ ನಿಗದಿಪಡಿಸಿ, ದಿ: 01-04-2024 ರಿಂದ ಆರ್ಥಿಕ ಸೌಲಭ್ಯವನ್ನು ನೀಡಿ ಸರ್ಕಾರಿ ಆದೇಶ ಹೊರಡಿಸುವುದು.
2) ಎನ್.ಪಿ.ಎಸ್. ರದ್ದುಪಡಿಸಿ ಹಳೇ ಪಿಂಚಣೆ ಯೋಜನೆಯನ್ನು ಮರು ಜಾರಿಗೊಳಿಸುವುದು: ರಾಜ್ಯದ ಎನ್.ಪಿ.ಎಸ್. ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್.ಪಿ.ಎಸ್. ನೌಕರರನ್ನು ಓ.ಪಿ.ಎಸ್. ವ್ಯಾಪ್ತಿಗೆ ತರುವುದು ಸರ್ಕಾರದ ಜವಾಬ್ದಾರಿ. ಈಗಾಗಲೇ ಪಂಜಾಬ್, ರಾಜಸ್ಥಾನ, ಚತ್ತೀಸ್ ಘಡ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುವಂತೆ ಹಾಗೂ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಕರ್ನಾಟಕದಲ್ಲೂ ಸಹ ಎನ್.ಪಿ.ಎಸ್.
ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು.
3) ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸುವುದು: ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಚಿಕಿತ್ಸೆ ನೀಡುವ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ” (ಕೆ.ಎ.ಎಸ್.ಎಸ್)ಯನ್ನು ಜಾರಿಗೆ ತರಲು ಈ ಹಿಂದಿನ ರಾಜ್ಯ ಸರ್ಕಾರವು 2021-22ರ ಆಯವ್ಯದಲ್ಲಿ ಘೋಷಿಸಿತ್ತು. ಈಗಾಗಲೇ ಸಚಿವ ಸಂಪುಟದ ಅನುಮೋದನೆ ಪಡೆದು ದಿನಾಂಕ: 05-09-2022 ರಂದು ಸರ್ಕಾರಿ ಆದೇಶ ಹೊರಡಿಸಿರುತ್ತದೆ. ಈ ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ವೇತನದಿಂದ ಪ್ರತಿ ತಿಂಗಳು ವೃಂದವಾರು ವಂತಿಗೆ ಕಟಾವಣೆಯಾಗಲಿದ್ದು, ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ. ಯೋಜನೆಯ ಅನುಷ್ಟಾನಾಧಿಕಾರಿಗಳು ತಾಂತ್ರಿಕ ಹಾಗೂ ಇನ್ನಿತರೆ ಕಾರಣಗಳನ್ನು ನೀಡಿ ಈ ಯೋಜನೆಯನ್ನು ಜಾರಿಗೊಳಿಸಲು ಅನಗತ್ಯ ವಿಳಂಬ ಮಾಡುತ್ತಿದ್ದು, ಚಿಕಿತ್ಸೆ ಪಡೆಯಲು ನೌಕರರಿಗೆ ಆರ್ಥಿಕ ಹೊರೆಯಾಗುತ್ತಿರುವುದರಿಂದ ಶೀಘ್ರವಾಗಿ ಈ ಯೋಜನೆಯನ್ನು ಲೋಕಾರ್ಪಣೆ ಮಾಡುವುದು.
ಬೇಡಿಕೆ ಈಡೇರಿಸದಿದ್ದರೆ ಜು. 29ರಿಂದ ಮುಷ್ಕರ; ಸಿ.ಎಸ್.ಷಡಾಕ್ಷರಿ ಎಚ್ಚರಿಕೆ
ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದೇ ಇದ್ದ ಪಕ್ಷದಲ್ಲಿ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಹಾಗೂ ವೃಂದ ಸಂಘಗಳಿಂದ ಜುಲೈ 29-07-2024 ರಿಂದ ರಾಜ್ಯಾದಾದ್ಯಂತ ಅನಿರ್ದಿಷ್ಟಾವಧಿಯವರೆಗೆ ಕರ್ತವ್ಯಕ್ಕೆ ಗೈರುಹಾಜರಾಗದೆ ಮುಷ್ಕರ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಏಳನೇ ವೇತನ ಆಯೋಗ, ಒಪಿಎಸ್ ಸೇರಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಸರ್ಕಾರವು ಜುಲೈ 28ರೊಳಗೆ ಈಡೇರಿಸಬೇಕು. ಇಲ್ಲದಿದ್ದರೆ ನಾವು ಜುಲೈ 29ರಿಂದ ಮುಷ್ಕರ ಆರಂಭಿಸುತ್ತೇವೆ. ಕೆಲಸ ಮಾಡದೆ ಮನೆಯಲ್ಲಿಯೇ ಇರುತ್ತೇವೆ. ಎಲ್ಲವನ್ನೂ ಗಮನಿಸಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ರಾಜ್ಯ ಸರ್ಕಾರವು ಬೇಡಿಕೆ ಈಡೇರಿಸಿದ ಬಳಿಕವೇ ಕೆಲಸಕ್ಕೆ ಹಾಜರಾಗುತ್ತೇವೆ” ಎಂದು ತಿಳಿಸಿದರು.
ಇದನ್ನೂ ಓದಿ | Govt Employees: ಸರ್ಕಾರಿ ನೌಕರರ ಬೇಡಿಕೆ ಈಡೇರಿಸದಿದ್ದರೆ ಜುಲೈ 29ರಿಂದ ಮುಷ್ಕರ; ಸಿ.ಎಸ್.ಷಡಾಕ್ಷರಿ ಎಚ್ಚರಿಕೆ
ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ, ಬಿ.ಬಿ.ಎಂ.ಪಿ. ಅಧಿಕಾರಿ-ನೌಕರರ ಸಂಘದ ಅಧ್ಯಕ್ಷರಾದ ಅಮೃತರಾಜ್, ಕೆ.ಪಿ.ಟಿ.ಸಿ.ಎಲ್. ಅಧಿಕಾರಿ-ನೌಕರರ ಸಂಘದ ಅಧ್ಯಕ್ಷರಾದ ಬಲರಾಂ ಭಜಂತ್ರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಬಿ. ಬಳ್ಳಾರಿ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಡಾ.ಎಲ್. ಭೈರಪ್ಪ ಹಾಗೂ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ, ಟಿ. ಶ್ರೀನಿವಾಸ್, ಖಜಾಂಜಿಗಳಾದ ಡಾ. ಸಿದ್ದರಾಮಣ್ಣ, ಹಿರಿಯ ಉಪಾಧ್ಯಕ್ಷರಾದ ಎಂ.ವಿ. ರುದ್ರಪ್ಪ, ಶ್ರೀ ಎಸ್. ಬಸವರಾಜು, ರಾಜ್ಯ ಕಾರ್ಯದರ್ಶಿಗಳಾದ ಡಾ. ನೆಲ್ಯುದ್ರಿ ಸದಾನಂದ ಹಾಗೂ ರಾಜ್ಯ ಸಂಘದ ರಾಜ್ಯ ಸಂಘದ ಉಪಾಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ರಾಜ್ಯ ಪರಿಷತ್ ಸದಸ್ಯರುಗಳು ಹಾಜರಿದ್ದರು.