ಬೆಂಗಳೂರು: ಏಳನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ರಾಜ್ಯ ಸರ್ಕಾರ ತನ್ನ ಬದ್ಧತೆಯನ್ನು ಈಗಲೇ ಘೋಷಿಸಬೇಕು, ಹಳೆ ಪಿಂಚಣಿ ಪದ್ಧತಿಯನ್ನು ಮರುಜಾರಿ ಮಾಡಬೇಕು ಎಂಬ ಪ್ರಮುಖ ಆಗ್ರಹಗಳನ್ನು ಇಟ್ಟುಕೊಂಡು ಸರ್ಕಾರಿ ನೌಕರರ ಸಂಘ ಕರೆ ನೀಡಿರುವ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಜ್ಯಾದ್ಯಂತ ಆಡಳಿತ ಯಂತ್ರ ಸಂಪೂರ್ಣ ಸ್ತಬ್ಧವಾಗಿದೆ.
ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಜತೆ ಮಂಗಳವಾರ ತಡರಾತ್ರಿವರೆಗೂ ಮಾತುಕತೆ ನಡೆದರೂ ಸಮಸ್ಯೆಗೆ ಪರಿಹಾರ ದೊರೆಯಲಿಲ್ಲ. ಹೀಗಾಗಿ ನಿಗದಿಯಾದ ಪ್ರತಿಭಟನೆ ಎಂದಿನಂತೆ ಆರಂಭಗೊಂಡಿದೆ.
ಉಡುಪಿ ಜಿಲ್ಲೆಯಲ್ಲಿ ತಟ್ಟಿದ ಮುಷ್ಕರದ ಎಫೆಕ್ಟ್
ಉಡುಪಿಯಲ್ಲೂ ಕಂದಾಯ, ಆರೋಗ್ಯ, ಸಾರಿಗೆ ಸಂಚಾರ ವ್ಯತ್ಯಯವಾಗಿದೆ. ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್, ತಾಲೂಕು ಕಚೇರಿಗೆ ಸರ್ಕಾರಿ ನೌಕರರು ಗೈರು ಹಾಜರಾಗಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಕೇವಲ ತುರ್ತು ಚಿಕಿತ್ಸೆ ಮಾತ್ರ ಲಭ್ಯವಿದೆ. ಪ್ರಾದೇಶಿಕ ಸಾರಿಗೆ ಕಚೇರಿ ಸಂಪೂರ್ಣ ಬಂದ್ ಆಗಿದೆ. ಮಂಗಳೂರು ವಿ ವಿ ವ್ಯಾಪ್ತಿಯ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಗ್ರಾಮ ಪಂಚಾಯಿತಿ ಕಚೇರಿಗಳಲ್ಲೂ ಸೇವೆ ವ್ಯತ್ಯಯವಾಗಿದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ನಲ್ಲೂ ಸರ್ಕಾರಿ ನೌಕರರು ಕೆಲಸ ಮಾಡುತ್ತಿಲ್ಲ ಎಂದು ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಪರಿಸ್ಥಿತಿ ಹೇಗಿದೆ?
ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ಹಿನ್ನೆಲೆಯಲ್ಲಿ ಆರೋಗ್ಯ, ಕಂದಾಯ, ಶಿಕ್ಷಣ, ಲೋಕೋಪಯೋಗಿ ಇಲಾಖೆ, ತಾಲೂಕು ಕಚೇರಿ, ಜಿಲ್ಲಾಪಂಚಾಯತಿ ಸೇರಿದಂತೆ ಎಲ್ಲಾ ಸೇವೆಗಳು ಸ್ಥಗಿತವಾಗಿದೆ. ಇಲ್ಲಿ 12 ಗಂಟೆ ಬಳಿಕ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಉತ್ತರಕನ್ನಡದ ಬಹುತೇಕ ಸರ್ಕಾರಿ ಶಾಲೆಗಳು ಬಂದ್
ಉತ್ತರ ಕನ್ನಡದ ಬಹುತೇಕ ಎಲ್ಲ ಶಾಲೆಗಳು ಬಂದ್ ಆಗಿವೆ. ಮೊದಲೇ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿಲ್ಲ. ಕೆಲವೊಂದು ಗ್ರಾಮೀಣ ಭಾಗದಲ್ಲಿ ರಜೆಯ ಮಾಹಿತಿ ಇಲ್ಲದೇ ಆಗಮಿಸಿರುವ ಕೆಲವೊಂದು ವಿದ್ಯಾರ್ಥಿಗಳು ಆಗಮಿಸಿದ್ದರು.
ಬೆಳಗಾವಿಯಲ್ಲಿ ರಾಜ್ಯ ಸರ್ಕಾರ ನೌಕರರ ಬಿಗಿಪಟ್ಟು
ಏಳನೇ ವೇತನ ಜಾರಿಗೆ ಹಾಗೂ ಹಳೇ ಪಿಂಚಣಿ ಸೌಲಭ್ಯ ಜಾರಿಗೆ ಆಗ್ರಹಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಮುಷ್ಕರಕ್ಕೆ ಬೆಳಗಾವಿಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಘಟಕ ಹಾಗೂ ಶಿಕ್ಷಕರ ಸಂಘದ ಬೆಂಬಲ ನೀಡಿದ್ದು, ತುರ್ತು ಸೇವೆ ಹೊರತು ಪಡಿಸಿ ಉಳಿದ ಇಲಾಖೆಗಳ ನೌಕರರು ಗೈರಾಗಿದ್ದಾರೆ.
ಹಾಸನ ಜಿಲ್ಲೆಯಲ್ಲೂ ಪ್ರತಿಭಟನೆ
ಹಾಸನ ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಕಚೇರಿಯಲ್ಲೂ ಉದ್ಯೋಗಿಗಳು ಹಾಜರಾಗಿಲ್ಲ.
ಮಂಗಳೂರಿನಲ್ಲಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ
ಸರ್ಕಾರಿ ನೌಕರರ ಮುಷ್ಕರಕ್ಕೆ ಮಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ನೌಕರರು ಕಪ್ಪು ಪಟ್ಟಿ ಧರಿಸಿ ಕಚೇರಿಗೆ ಹಾಜರಾಗಿದ್ದಾರೆ. ಜಿಲ್ಲೆಯಲ್ಲಿ ಶಾಲಾ ಶಿಕ್ಷಕರು ಮುಷ್ಕರದಿಂದ ದೂರ ಉಳಿದಿದ್ದಾರೆ.
ಕೊಡಗಿನಲ್ಲಿ ಸರ್ಕಾರಿ ಸೇವೆಗಳು ಫುಲ್ ಬಂದ್
ಕೊಡಗಿನಲ್ಲೂ ಸರ್ಕಾರಿ ನೌಕರರ ಸಂಘದಿಂದ ಬಂದ್ ಗೆ ಬೆಂಬಲ ವ್ಯಕ್ತವಾಗಿದ್ದು, ಅಗತ್ಯ ಸೇವೆ ಹೊರತು ಪಡಿಸಿ ಉಳಿದ ಎಲ್ಲಾ ಸೇವೆಗಳೂ ಬಂದ್ ಆಗಿವೆ. ಜಿಲ್ಲೆಯಲ್ಲಿ ಆರೋಗ್ಯ, ಕಂದಾಯ, ಶಿಕ್ಷಣ, ಲೋಕೋಪಯೋಗಿ ಇಲಾಖೆ ಸೇರಿದಂತೆ ಎಲ್ಲಾ ಸೇವೆಗಳು ಸ್ಥಗಿತವಾಗಿವೆ. ಕೊಡಗಿನ 5000 ಸರ್ಕಾರಿ ನೌಕರರು ಸೇವೆ ಸ್ಥಗಿತಗೊಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಫುಲ್ ಬಂದ್
ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಡಳಿತ ಭವನದ ಮುಖ್ಯ ದ್ವಾರವನ್ನೇ ನೌಕರರು ಬಂದ್ ಮಾಡಿದ್ದು, ಯಾರೂ ಒಳಹೋಗದಂತೆ ಕಚೇರಿಗೆ ಬೀಗ ಹಾಕಲಾಗಿದೆ. ತಮ್ಮ ಕೆಲಸ ಕಾರ್ಯಗಳಿಗೆ ಬಂದಿರುವ ಸಾರ್ವಜನಿಕರು ವಾಪಸ್ಸಾಗುತ್ತಿದ್ದಾರೆ.
ಚಿಕ್ಕೋಡಿಯಲ್ಲಿ ನಾನಾ ಇಲಾಖೆಗಳಿಗೆ ತಟ್ಟಿದ ಮುಷ್ಕರದ ಬಿಸಿ
7 ವೇತನ ಆಯೋಗ ಹಾಗೂ ಹಳೆಯ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ನಡೆಯುತ್ತಿರುವ ಮುಷ್ಕರದ ಬಿಸಿ ಚಿಕ್ಕೋಡಿಯಲ್ಲಿ ಚೆನ್ನಾಗಿ ತಟ್ಟಿದೆ.
ಚಿಕ್ಕೋಡಿ ಪುರಸಭೆ ಕಚೇರಿಗೆ ಸಿಬ್ಬಂದಿ ಬೀಗ ಜಡಿದಿದ್ದಾರೆ. ಪಟ್ಟಣದ ತಹಸೀಲ್ದಾರ್ ಕಚೇರಿ ಹಾಗೂ ಉಪ ವಿಭಾಗದ ಕಚೇರಿಗಳಿಗೂ ಬೀಗ ಹಾಕಲಾಗಿದೆ.
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಬಂದ್ ಆಗಿದ್ದು, ಕಚೇರಿಯ ಎಲ್ಲ ಬಾಗಿಲುಗಳಿಗೆ ಬೀಗ ಹಾಕಲಾಗಿದೆ.
ಇದನ್ನೂ ಓದಿ :