Site icon Vistara News

Govt Employees Strike: ರಾತ್ರಿ ನಿರ್ಣಾಯಕ ಸಭೆ ನಡೆಸಲಿರುವ ಬೊಮ್ಮಾಯಿ; ಮುಷ್ಕರ ವಾಪಸ್‌ ಪಡೀತಾರಾ ನೌಕರರು?

Shadakshari CM Bommai

#image_title

ಬೆಂಗಳೂರು: ಮಾರ್ಚ್‌ ಒಂದರಿಂದ ಆರಂಭವಾಗಲಿರುವ ರಾಜ್ಯ ಸರ್ಕಾರಿ ನೌಕರರ ಪ್ರತಿಭಟನೆಯ ಬಿಸಿ ಜೋರಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊನೆಗೂ ಕಣಕ್ಕಿಳಿಯುವ ಸೂಚನೆ ನೀಡಿದ್ದಾರೆ.

೭ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುವ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸುವ ಬದ್ಧತೆಯನ್ನು ತೋರಬೇಕು ಎಂದು ಆಗ್ರಹಿಸಿ ಕಳೆದ ಫೆಬ್ರವರಿ ೨೧ರಂದೇ ರಾಜ್ಯ ಸರ್ಕಾರಿ ನೌಕರರ ಸಂಘಟನೆಗಳು ಮಾರ್ಚ್‌ ೧ರಿಂದ ಮುಷ್ಕರ ನಡೆಸುವುದಾಗಿ ಘೋಷಿಸಿದ್ದವು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಿಧಾನಸಭಾ ಕಲಾಪದಲ್ಲೇ ಆಯೋಗದ ಮಧ್ಯಂತರ ವರದಿಯನ್ನು ಪಡೆದು ಜಾರಿಗೆ ತರುವುದಾಗಿ, ಅದಕ್ಕೆ ೬೦೦೦ ಕೋಟಿ ರೂ. ಇಡುವುದಾಗಿ ಹೇಳಿದ್ದರು. ಆದರೆ, ಇಷ್ಟೇ ಭರವಸೆ ಸಾಕಾಗಲ್ಲ, ಅಧಿಕೃತ ಆದೇಶವನ್ನೇ ಮಾಡಬೇಕು ಎಂದು ಸರ್ಕಾರಿ ನೌಕರರು ಪಟ್ಟು ಹಿಡಿದಿದ್ದಾರೆ.

ಮಂಗಳವಾರ ಮಧ್ಯಾಹ್ನ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳನ್ನು ಕರೆದು ಸಂಧಾನ ಮಾತುಕತೆಗಳನ್ನು ನಡೆಸಿದರಾದರೂ ಅದು ಫಲ ನೀಡಲಿಲ್ಲ. ಸರ್ಕಾರ ಅಧಿಕೃತ ಆದೇಶದ ಹೊರಡಿಸದ ಹೊರತು ಅನಿರ್ದಿಷ್ಟಾವಧಿ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಅವರು ಘೋಷಣೆ ಮಾಡಿದ್ದಾರೆ. ಒಂದು ವೇಳೆ ಸರ್ಕಾರಿ ಅಧಿಕೃತ ಆದೇಶ ಹೊರಡಿಸಿದರೆ ಮಾತ್ರ ಮುಷ್ಕರವನ್ನು ನಿಲ್ಲಿಸುವುದಾಗಿ ಹೇಳಿದ್ದರು.

ಈ ನಡುವೆ, ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೊನೆಗೂ ಅಖಾಡಕ್ಕೆ ಇಳಿಯುವ ಸೂಚನೆ ನೀಡಿದ್ದಾರೆ. ಸರ್ಕಾರಿ ನೌಕರರ ಮನವೊಲಿಕೆಗೆ ಅವರು ಮುಂದಾಗುವ ಸೂಚನೆ ನೀಡಿದ್ದಾರೆ. ಮಂಗಳವಾರ ರಾತ್ರಿ ೯ ಗಂಟೆಗೆ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ಕಾರಿ ಅಧಿಕಾರಿಗಳ ಸಭೆಯೊಂದನ್ನು ಕರೆದಿದ್ದಾರೆ. ಇದರಲ್ಲಿ ಏಳನೇ ವೇತನ ಆಯೋಗದ ಶಿಫಾರಸುಗಳ ಜಾರಿ ಮತ್ತು ಸಂಭಾವ್ಯ ಮುಷ್ಕರದಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಮಾಹಿತಿ ಪಡೆಯುವ ನಿರೀಕ್ಷೆ ಇದೆ.

ಅದಾದ ಬಳಿಕ ರಾತ್ರಿ ೯.೩೦ಕ್ಕೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಅವರು ಸಭೆಯನ್ನು ನಡೆಸಲಿದ್ದಾರೆ. ಈ ಸಭೆಯಲ್ಲಿ ನೀಡುವ ಭರವಸೆ ಮತ್ತು ಅದಕ್ಕೆ ನೌಕರರ ಸಂಘ ನೀಡುವ ಪ್ರತಿಕ್ರಿಯೆ ಏನಿರುತ್ತದೆ ಎನ್ನುವುದರ ಆಧಾರದ ಮೇಲೆ ಮುಷ್ಕರ ನಡೆಯಲಿದೆಯೇ ಅಥವಾ ರದ್ದಾಗಲಿದೆಯೇ ಎನ್ನುವುದು ನಿಂತಿದೆ.

Exit mobile version