ಬೆಂಗಳೂರು : 7ನೇ ವೇತನ ಆಯೋಗದ (7th pay commission) ವರದಿ ಜಾರಿಯು ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಶೇ. 17 ರಷ್ಟು ಮಧ್ಯಂತರ ಪರಿಹಾರ ನೀಡಲು ರಾಜ್ಯ ಸರ್ಕಾರವು ತೀರ್ಮಾನಿಸಿದ್ದು (Govt Employees Strike), ಈ ಸಂಬಂಧ ಆದೇಶ ಹೊರಡಿಸಲಿದೆ. ಇದರಿಂದ ಶೇ. 40 ರಷ್ಟು ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ನೌಕರರಿಗೆ ಶೇ. 17 ರಷ್ಟು ವೇತನ ಹೆಚ್ಚಳವಾದಂತಾಗಲಿದೆ.
ಈ ವಿಷಯವನ್ನು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. ಮುಷ್ಕರ ನಡೆಸುತ್ತಿರುವ ನೌಕರರ ಬೇಡಿಕೆಯಂತೆಯೇ ಸದ್ಯವೇ ಅದೇಶ ಹೊರಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಅಲ್ಲದೆ ಹೊಸ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್) ರದ್ದು ಪಡಿಸುವ ಕುರಿತು ತೀರ್ಮಾನಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುತ್ತದೆ. ಇದಕ್ಕೆ ಎರಡು ತಿಂಗಳ ಒಳಗೆ ವರದಿ ನೀಡಲು ಸೂಚಿಸಲಾಗಿದೆ. ಇದರ ವರದಿ ಬಂದ ನಂತರ ಸರ್ಕಾರ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಎನ್‌ಪಿಎಸ್ ರದ್ದು ಪಡಿಸಿರುವುದರಿಂದ ಆಗಿರುವ ಪರಿಣಾಮಗಳ ಕುರಿತು ಈ ಸಮಿತಿಯು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಈ ವರದಿ ನಂತರ ಸರ್ಕಾರ ಈ ಸಂಬಂಧ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ಮುಖ್ಯಮಂತ್ರಿ ವಿವರಿಸಿದ್ದಾರೆ
ಹೋರಾಟ ನಿಲ್ಲದು ಎಂದ ಷಡಾಕ್ಷರಿ
ಆದರೆ ಈ ಕುರಿತು ಆದೇಶದ ಪ್ರತಿ ಕೈ ಸೇರಿದ ಮೇಲೆ ಮುಂದಿನ ತೀರ್ಮಾ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್ ಷಡಾಕ್ಷರಿ ತಿಳಿಸಿದ್ದಾರೆ.
ಶೇ. 17 ರಷ್ಟು ಹೆಚ್ಚಳ ಹೇಗೆ ಮಾಡುತ್ತಾರೆ ಎಂಬುದರ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇವೆ. ಆದೇಶ ಹೊರಡಿಸುವುದಕ್ಕೂ ಮೊದಲು ಅಧಿಕಾರಿಗಳು ನಮ್ಮೊಂದಿಗೆ ಚರ್ಚಿಸಲಿದ್ದಾರೆ. ಸರ್ಕಾರ ಏನು ತೀರ್ಮಾನಿಸಿದೆ ಎಂಬುದರ ಕುರಿತು ಸಂಘದ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಬಿಕೋ ಎನ್ನುತ್ತಿರುವ ಶಕ್ತಿಕೇಂದ್ರ ವಿಧಾನ ಸೌಧ
7ನೇ ವೇತನ ಆಯೋಗದ (7th pay commission) ವರದಿಯ ಜಾರಿಯು ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಮಧ್ಯಂತರ ಪರಿಹಾರ ಘೋಷಿಸಬೇಕು ಹಾಗೂ ಹಳೆ ಪಿಂಚಣಿ ಯೋಜನೆಯನ್ನು (OPS) ಜಾರಿಗೊಳಿಸಲೇಬೇಕೆಂದು ಒತ್ತಾಯಿಸಿ ರಾಜ್ಯದ ಸರ್ಕಾರಿ ನೌಕರರು ಮುಷ್ಕರ ನಡೆಸುತ್ತಿರುವುದರಿಂದ (Govt Employees Strike ) ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ ಬಿಕೋ ಎನ್ನುತ್ತಿದೆ.
ಅಧಿಕಾರಿಗಳು ಮತ್ತು ವಿವಿಧ ವೃಂದದ ನೌಕರರು ಕೆಲಸಕ್ಕೆ ಗೈರಾಗಿ ಮುಷ್ಕರ ಆರಂಭಿಸಿದ್ದಾರೆ. ಹೀಗಾಗಿ ವಿಧಾನಸೌಧದ ಬಹುತೇಕ ಕಚೇರಿಗಳು ಖಾಲಿಯಾಗಿವೆ. ಯಾವುದೇ ಚಟುವಟಿಕೆಗಳು ಸಚಿವಾಲಯಗಳಲ್ಲಿ ನಡೆಯುತ್ತಿಲ್ಲ.
ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಗಳು ಮಾತ್ರ ವಿಧಾನಸೌಧದಲ್ಲಿ ಬೆಳಗ್ಗೆಯಿಂದ ಓಡಾಡುತ್ತಿದ್ದಾರೆ. ಮುಷ್ಕರದ ಕುರಿತು ಸಾರ್ವಜನಿಕರಿಗೆ ಮೊದಲೇ ಮಾಹಿತಿ ಲಭಿಸಿದ್ದರಿಂದ ಶಕ್ತಿಕೇಂದ್ರಕ್ಕೆ ಜನರೂ ಬರುತ್ತಿಲ್ಲ. ಸರ್ಕಾರ ವೇತನ ಹೆಚ್ಚಳ ಮಾಡಿ ಆದೇಶ ನಡೆಸಬಹುದು ಎಂಬ ನಿರೀಕ್ಷೆಯಲ್ಲಿ ಸರ್ಕಾರಿ ನೌಕರರು ಇದ್ದು, ಎಲ್ಲರೂ ವಿಧಾನಸೌಧದ ಹೊರಗೆ ಉಳಿದು ಕ್ಷಣ ಕ್ಷಣದ ಬೆಳವಣಿಗೆಯ ಮೇಲೆ ನಿಗಾ ಇಟ್ಟಿದ್ದಾರೆ.
ವಿಧಾನಸೌಧ ಪಶ್ಚಿಮ ದ್ವಾರದ ಬಳಿ ಸಚಿವಾಲಯ ನೌಕರರ ಸಂಘದ ಸದಸ್ಯರು ಮೌನ ಧರಣಿ ನಡೆಸುತ್ತಿದ್ದಾರೆ. ಕೆಂಗಲ್ ಹನುಮಂತಯ್ಯ ಪ್ರತಿಮೆ ಎದುರು ಈ ಪ್ರತಿಭಟನೆ ನಡೆಸಲಾಗುತ್ತಿದೆ. ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಇದರ ನೇತೃತ್ವ ವಹಿಸಿದ್ದಾರೆ.
ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯೂ ಖಾಲಿ
ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಯೂ ಮುಷ್ಕರದಲ್ಲಿ ಭಾಗವಹಿಸಿದ್ದಾರೆ. ಇದರಿಂದ ನಾಗರಿಕ ಸೇವೆ ಪಡೆಯಲು ಸಾರ್ವಜನಿಕರಿಗೆ ತೊಂದರೆಯಾಗಿದೆ.
ನಗರದ ಮೈಸೂರ್ ಬ್ಯಾಂಕ್ ವೃತ್ತದಲ್ಲಿರುವ ಕಂದಾಯ ಭವನದಲ್ಲಿ ಈ ಜಿಲ್ಲಾಧಿಕಾರಿ ಕಚೇರಿ ಇದ್ದು, ಕಚೇರಿಗೆ ಬಂದ ಸಾರ್ವಜನಿಕರು ಸಿಬ್ಬಂದಿ ಯಾರೂ ಇಲ್ಲದನ್ನು ಕಂಡು ವಾಪಾಸ್ ಹೋಗುತ್ತಿದ್ದಾರೆ. ದೂರದ ಊರುಗಳಿಂದ ಬಂದವರು ಮಾತ್ರ ನೌಕರರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ
ಇದನ್ನೂ ಓದಿ: Govt Employees Strike: ಅನುಮತಿ ಪಡೆಯದೆ ಗೈರಾದರೆ ಕಠಿಣ ಕ್ರಮ, ಸರ್ಕಾರಿ ನೌಕರರಿಗೆ ಸರ್ಕಾರ ಖಡಕ್ ಎಚ್ಚರಿಕೆ