ಬೆಂಗಳೂರು: ರಾಜ್ಯ ಸರ್ಕಾರಿ ನೌಕರರರು ಕರ್ತವ್ಯಕ್ಕೆ ಗೈರಾಗುವ ಮುಷ್ಕರ ಆರಂಭಿಸುತ್ತಿದ್ದಂತೆಯೇ (Govt Employees Strike) ಇದಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ಅವರ ಎರಡೂ ಬೇಡಿಕೆಗಳನ್ನು ಈಡೇರಿಸಿದೆ. ಶೇ. 17 ರಷ್ಟು ವೇತನ ಹೆಚ್ಚಳ ಮಾಡಿರುವುದರ ಜತೆಯಲ್ಲಿಯೇ ಎನ್‌ಪಿಎಸ್ ರದ್ದು ಪಡಿಸುವ ಕುರಿತು ಪರಿಶೀಲನೆ ನಡೆಸಲು ವಿಶೇಷ ಸಮಿತಿಯೊಂದನ್ನು ರಚಿಸಿದೆ.
ಸರ್ಕಾರದ ಅಪರ ಮುಖ್ಯ ಕಾರ್ಯರ್ಶಿಯವರ ಅಧ್ಯಕ್ಷತೆಯಲ್ಲಿ ಈ ಸಮಿತಿ ರಚನೆಗೊಂಡಿದ್ದು, ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ ಅರುಳ್ ಕುಮಾರ್ ಈ ಸಂಬಂಧ ಆದೇಶ ಹೊರಡಿಸಿದ್ದಾರೆ. ಎರಡು ತಿಂಗಳ ಒಳಗೆ ವರದಿಯನ್ನು ಸಲ್ಲಿಸುವಂತೆ ಈ ವಿಶೇಷ ಸಮಿತಿಗೆ ಸೂಚಿಸಲಾಗಿದೆ.
ʻʻರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಸರ್ಕಾರಿ ನೌಕರರ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಿರುವ ರಾಜ್ಯಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಕುರಿತು ಕೈಗೊಂಡಿರುವ ಕ್ರಮದ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಮಿತಿ ರಚಿಸಿ ಆದೇಶಿಸಿದೆʼʼ ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ.
ಸಮಿತಿಯು ರಾಷ್ಟ್ರೀಯ ಪಿಂಚಣಿ ಯೋಜನೆಯ ಸೌಲಭ್ಯವನ್ನು ಸ್ಥಗಿತಗೊಳಿಸಿ, ಹಳೆಯ ಪಿಂಚಣಿ ಯೋಜನೆಯನ್ನು ಪುನರ್ ಸ್ಥಾಪಿಸುವ ನಿರ್ಧಾರವನ್ನು ಕೈಗೊಂಡಿರುವ ರಾಜ್ಯಗಳಿಗೆ ಭೇಟಿ ನೀಡಿ ಸೂಕ್ತ ಅಧ್ಯಯನ ನಡೆಸಿ ಎರಡು ತಿಂಗಳೊಳಗೆ ವರದಿಯನ್ನು ಸಲ್ಲಿಸಬೇಕೆಂದೂ ಆದೇಶದಲ್ಲಿ ತಿಳಿಸಲಾಗಿದೆ. ಸರ್ಕಾರಿ ನೌಕರರ ಸಂಘದ ಮನವಿಯ ಮೇರೆಗೆ ಈ ಸಮಿತಿ ರಚಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ
ನೌಕರರ ಸಂಘದ ಬೇಡಿಕೆ ಏನಾಗಿತ್ತು?
ರಾಜ್ಯದ ಎನ್.ಪಿ.ಎಸ್. ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾ ಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್.ಪಿ.ಎಸ್. ನೌಕರರನ್ನು ಓ.ಪಿ.ಎಸ್. ವ್ಯಾಪ್ತಿಗೆ ತರುವುದು ಸರ್ಕಾರದ ಜವಾಬ್ದಾರಿ ಯಾಗಿರುತ್ತದೆ. ಈಗಾಗಲೇ ಪಂಜಾಬ್, ರಾಜಸ್ಥಾನ, ಚತ್ತಿಸ್‌ಘಡ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಸಹ ಎನ್.ಪಿ.ಎಸ್. ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ನೌಕರರ ಸಂಘ ಬೇಡಿಕೆ ಮಂಡಿಸಿತ್ತು.
ಇದನ್ನೂ ಓದಿ : Govt Employees Strike : ಸರ್ಕಾರದಿಂದ ವೇತನ ಹೆಚ್ಚಳದ ಆದೇಶ; ಮುಷ್ಕರ ಹಿಂದಕ್ಕೆ ಪಡೆದ ಸರ್ಕಾರಿ ನೌಕರರು