ಬೆಂಗಳೂರು : ವೇತನ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿ ಬುಧವಾರ ಬೆಳಗ್ಗೆಯಿಂದ ಮುಷ್ಕರ ನಡೆಸುತ್ತಿದ್ದ (Govt Employees Strike) ರಾಜ್ಯದ ಸರ್ಕಾರಿ ನೌಕರರು ತಮ್ಮ ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದಾರೆ. ರಾಜ್ಯ ಸರ್ಕಾರವು ವೇತನವನ್ನು ಶೇ.17 ರಷ್ಟು ಹೆಚ್ಚಿಸಿ, ಅಧಿಕೃತ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ನೌಕರರ ಸಂಘವು ಮುಷ್ಕರವನ್ನು ಹಿಂದಕ್ಕೆ ಪಡೆಯುವ ತೀರ್ಮಾನ ತೆಗೆದುಕೊಂಡಿದೆ.
ಈ ವಿಷಯವನ್ನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ. ನಮ್ಮ ಹೋರಾಟ ಯಶಸ್ವಿಯಾಗಿದೆ. ಇತಿಹಾಸದಲ್ಲಿಯೇ ಇದೊಂದು ಮಹತ್ವದ ಹೆಜ್ಜೆ ಎಂದು ಬಣ್ಣಿಸಿದ ಷಡಾಕ್ಷರಿ, ನಮ್ಮ ಎರಡೂ ಬೇಡಿಕೆಗಳಿಗೆ ಸರ್ಕಾರ ಹೋರಾಟ ಆರಂಭವಾದ ಕೇವಲ ಮೂರು ಗಂಟೆಯ ಒಳಗೆ ಸ್ಪಂದಿಸಿದೆ. ಇದಕ್ಕಾಗಿ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.
ʻʻಮಧ್ಯಂತರ ಪರಿಹಾರವಾಗಿ ವೇತನವನ್ನು ಶೇ.17ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ಹಾಗೂ ಎನ್‌ಪಿಎಸ್ ರದ್ದು ಮಾಡುವ ಕುರಿತು ತೀರ್ಮಾನಿಸಲು ಸಮಿತಿ ರಚಿಸಿ ಆದೇಶ ಹೊರಡಿಸಿದೆ. ಹೀಗಾಗಿ ಎಲ್ಲ ಸರ್ಕಾರಿ ನೌಕರರು ತಕ್ಷಣದಿಂದಲೇ ನಮ್ಮಮುಷ್ಕರವನ್ನು ವಾಪಾಸ್ ಪಡೆಯುತ್ತಿದ್ದೇವೆʼʼ ಎಂದು ಷಡಾಕ್ಷರಿ ಹೇಳಿದ್ದಾರೆ.
ಇಂದೇ ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಾರೆ. ಆದರೆ ಎಲ್ಲರಿಗೂ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ದಿನವನ್ನು ಸರ್ಕಾರಕ್ಕೆ ಮನವಿ ಮಾಡಿ, ʻಬೆಸ್ಟ್ ಕೈಂಡ್ ಆಫ್ ಲೀವ್ʼ ಎಂದು ಮಾಡಿಸುವುದಾಗಿ ಪ್ರಕಟಿಸಿದ ಷಡಾಕ್ಷರಿ, ಎಲ್ಲ ಪದಾಧಿಕಾರಿಗಳು ಚರ್ಚೆ ಮಾಡಿ ಒಮ್ಮತದಿಂದ ಈ ಮುಷ್ಕರ ಹಿಂದಕ್ಕೆ ಪಡೆಯುವ ತೀರ್ಮಾನ ತೆಗೆದುಕೊಂಡಿದ್ದೇವೆ. ಇದು ಎಲ್ಲರ ಒಮ್ಮತದ ತೀರ್ಮಾನ ಎಂದರು.
ಎನ್‌ಪಿಎಸ್ ರದ್ದಿಗೆ ಸಮಿತಿ ರಚನೆ
ಬಿಜೆಪಿ ನೇತೃತ್ವದ ಯಾವ ರಾಜ್ಯ ಸರ್ಕಾರವು ಎನ್‌ಪಿಎಸ್ ರದ್ದು ಪಡಿಸುವ ಕುರಿತು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಈ ಬಗ್ಗೆ ಹೈಕಮಾಂಡ್‌ನೊಂದಿಗೆ ಚರ್ಚಿಸಬೇಕಿದೆ ಎಂದು ಮುಖ್ಯಮಂತ್ರಿ ನಮ್ಮೊಂದಿಗೆ ಮಾತನಾಡುತ್ತಾ ಹೇಳಿದ್ದರು. ಆದರೆ ಕೊನೆಗೆ ಸಂಘದ ಒತ್ತಡಕ್ಕೆ ಮಣಿದು, ಎನ್‌ಪಿಎಸ್ ರದ್ದಿನ ಕುರಿತು ಮಾಹಿತಿ ಸಂಗ್ರಹಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಇದು ಕೂಡ ನಮ್ಮ ಹೋರಾಟಕ್ಕೆ ಸಂದ ದೊಡ್ಡ ಗೆಲುವಾಗಿದೆ ಎಂದು ಷಡಾಕ್ಷರಿ ಹೇಳಿದ್ದಾರೆ.
ಈ ಸಮಿತಿಯು ಈಗಾಗಲೇ ಎನ್‌ಪಿಎಸ್ ರದ್ದುಪಡಿಸಿರುವ ರಾಜ್ಯಗಳಿಗೆ ತೆರಳಿ ಅಲ್ಲಿಯ ಹಣಕಾಸು ಪರಿಸ್ಥಿತಿಯ ವರದಿಯನ್ನು ಪಡೆದುಕೊಳ್ಳಲಿದೆ. ಈ ವರದಿಗಳನ್ನು ಪರಿಶೀಲಿಸಿ ಎರಡು ತಿಂಗಳ ಒಳಗೆ ವರದಿ ನೀಡಲಿದೆ. ಈ ವರದಿ ಬಂದ ನಂತರ ಸರ್ಕಾರ ತನ್ನ ಮುಂದಿನ ಹೋರಾಟವನ್ನು ತೀರ್ಮಾನಿಸಲಿದೆ ಎಂದು ಷಡಾಕ್ಷರಿ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ನಾವು ಶೇ. 40ರಷ್ಟು ವೇತನ ಹೆಚ್ಚಿಸುವಂತೆ ಕೇಳಿದ್ದೆವು, ಸರ್ಕಾರ ಈಗ ಶೇ. 17 ರಷ್ಟು ಹೆಚ್ಚಿಸಿದೆ. ಇದರಿಂದ ತೃಪ್ತಿ ಆಗಿದೆಯೇ ಕೇಳಿದರೆ, ʻತೃಪ್ತಿ ಇಲ್ಲʼ. ಆದರೆ ಸಮಾಧಾನವಾಗಿದೆ. ಇನ್ನಷ್ಟು ಸಂತೃಪ್ತಿ ತರುವ ಕೆಲಸವನ್ನು ಮುಂದೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ. ಹೀಗಾಗಿ ಮೊದಲ ಹಂತವಾಗಿ ನಾವು ಮುಷ್ಕರದಿಂದ ಹಿಂದೆ ಸರಿದಿದ್ದೇವೆ. ಶೇ.40ರಷ್ಟು ಹೆಚ್ಚಳವು ವೇತನ ಆಯೋಗದ ಶಿಫಾರಸಿನಲ್ಲಿ ಬರಬೇಕು. ಈಗ ಸರ್ಕಾರ ತನ್ನ ಇತಿಮಿತಿಯಲ್ಲಿ ಈ ಹೆಚ್ಚಳ ಮಾಡಿದೆ. ಸರ್ಕಾರದ ಈ ನಡೆಯನ್ನು ನಾವು ಸ್ವಾಗತಿಸಿದ್ದೇವೆ. ಮುಂದೆ ಇನ್ನಷ್ಟು ವೇತನ ಹೆಚ್ಚಳವಾಗದೇ ಇದ್ದಲ್ಲಿ ಹೋರಾಟ ಮುಂದುವರಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ
ಹಾಲಿ ಮತ್ತು ನಿವೃತ್ತ ಸರ್ಕಾರಿ ನೌಕರರ ಕುಟುಂಬದವರಿಗೆ ನಗದು ರಹಿತ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವ ಯೋಜನೆಯ ಜಾರಿಗೆ ಮುಖ್ಯಮಂತ್ರಿಗಳು ನಮ್ಮ ಸಮ್ಮುಖದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದ್ದು, ಇನ್ನು ಹದಿನೈದು ದಿನಗಳ ಒಳಗೆ ಈ ಯೋಜನೆ ಚಾಲನೆ ಪಡೆಯಲಿದೆ ಎಂದು ಷಡಾಕ್ಷರಿ ಈ ಸಂದರ್ಭದಲ್ಲಿ ಪ್ರಕಟಿಸಿದರು.
ಇದನ್ನೂ ಓದಿ: Govt Employees Strike: ಶೇ.17 ವೇತನ ಹೆಚ್ಚಳದಿಂದ ಯಾವ ನೌಕರರಿಗೆ ಎಷ್ಟು ವೇತನ ಸಿಗುತ್ತದೆ? ಇಲ್ಲಿದೆ ಲೆಕ್ಕಾಚಾರ