ಬೆಂಗಳೂರು: ೭ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುವ ಬದ್ಧತೆಯನ್ನು ಸರ್ಕಾರ ದೃಢವಾಗಿ ಪ್ರದರ್ಶಿಸಬೇಕು ಎಂದು ಆಗ್ರಹಿಸಿ ಮಾರ್ಚ್ ಒಂದರಿಂದ ಕರೆ ನೀಡಲಾಗಿರುವ ಸರ್ಕಾರಿ ನೌಕರರ ಮುಷ್ಕರವನ್ನು ಮನವೊಲಿಸಿ ತಡೆಯುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಪ್ರಯತ್ನ ವಿಫಲಗೊಂಡಿದೆ.
ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಮಂಗಳವಾರ ಮಧ್ಯಾಹ್ನ ಸರ್ಕಾರಿ ನೌಕರರ ಸಂಘಟನೆಗಳ ಪ್ರತಿನಿಧಿಗಳ ಜತೆಗೆ ಮಾತುಕತೆ ನಡೆಸಿ ಮುಷ್ಕರ ನಡೆಸದಂತೆ ಅವರ ಮನವೊಲಿಸಿದರಾದರೂ ಅದು ಫಲ ನೀಡಲಿಲ್ಲ. ಸಭೆಯ ಬಳಿಕ ಮಾತನಾಡಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು, ಸರ್ಕಾರದ ನಿಲುವಿನಲ್ಲಿ ಸ್ಪಷ್ಟತೆ ಇಲ್ಲ. ಹೀಗಾಗಿ ನಾವು ನಿಗದಿಪಡಿಸಿದ ಪ್ರತಿಭಟನೆಯನ್ನು ಮುಂದುವರಿಸುವುದು ನಿಶ್ಚಿತ ಎಂದು ಹೇಳಿದರು.
ಮಂಗಳವಾರ ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಸಿ.ಎಸ್. ಷಡಾಕ್ಷರಿ ಸರ್ಕಾರ ಅಧಿಕೃತ ಆದೇಶ ಹೊರಡಿಸುವವರೆಗೆ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಮಾರ್ಚ್ ಒಂದರಿಂದ ಅನಿರ್ದಿಷ್ಟಾವಧಿವರೆಗೆ ಬಂದ್ ಆಗುವುದು ಖಚಿತ ಎಂದು ಸ್ಪಷ್ಟಪಡಿಸಿದ್ದರು.
ಈ ನಡುವೆ, ಉತ್ತರ ಕನ್ನಡದ ಸಿದ್ಧಾಪುರದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಜೆಯೊಳಗೆ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದರು. ಇದರ ಬೆನ್ನಿಗೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮ ಅವರು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳನ್ನು ಮಾತುಕತೆಗೆ ಆಹ್ವಾನಿಸಿದರು.
ಸಿಎಸ್ ಅವರ ಕಚೇರಿಯಲ್ಲೇ ನಡೆದ ಸಂಧಾನ ಸಭೆಯಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ ರಾಜ್ ನೇತೃತ್ವದಲ್ಲಿ ನೌಕರರ ಸಂಘಗಳ ಪದಾಧಿಕಾರಿಗಳು ಆಗಮಿಸಿದ್ದರು.
ಸಭೆಯಲ್ಲಿ ಮಾತನಾಡಿದ ಸಿಎಸ್ ವಂದಿತಾ ಶರ್ಮ ಅವರು, ಮುಖ್ಯಮಂತ್ರಿಗಳು ಈಗಾಗಲೇ ಬೇಡಿಕೆ ಈಡೇರಿಕೆಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಹೀಗಾಗಿ ಹೋರಾಟ ಕೈಬಿಡುವಂತೆ ಮನವಿ ಮಾಡಿದರು.
ಹೋರಾಟದಲ್ಲಿ ಸರ್ಕಾರದ ಎಲ್ಲ ಇಲಾಖೆಗಳು ಭಾಗಿಯಾಗುವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಆಗಲಿದೆ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತೊಂದರೆಯಾಗಲಿದೆ. ಮಧ್ಯಂತರ ವರದಿ ಬಂದ ಬಳಿಕ ಅನುಷ್ಠಾನ ಮಾಡುವ ಮುಖ್ಯಮಂತ್ರಿಗಳ ಭರವಸೆಯ ಮೇಲೆ ನಂಬಿಕೆ ಇಟ್ಟು ಮುಷ್ಕರ ನಡೆದಂತೆ ವಂದಿತಾ ಶರ್ಮ ಮನವಿ ಮಾಡಿದರು.
ಎಸ್ ಷಡಾಕ್ಷರಿ ಹೇಳಿದ್ದೇನು?
ಸಿ.ಎಸ್ ವಂದಿತಾ ಶರ್ಮ ಅವರ ಜತೆ ಮಾತುಕತೆ ನಡೆಸಿ ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಸ್. ಷಡಾಕ್ಷರಿ ಅವರು, ಸರ್ಕಾರದ ನಿಲುವುಗಳು, ಸಾರ್ವಜನಿಕರಿಗೆ ಆಗುವ ಸಮಸ್ಯೆಗಳ ಬಗ್ಗೆ ಹೇಳಿದರು. ನಾವು ಫೆಬ್ರವರಿ ೨೧ರಂದೇ ನಾವು ಮುಷ್ಕರದ ತೀರ್ಮಾನ ಮಾಡಿದ್ದೇನೆ. ಈ ಹಂತದಲ್ಲಿ ಮುಷ್ಕರದಿಂದ ಹಿಂದೆ ಬರುವ ಪ್ರಶ್ನೆಯೇ ಇಲ್ಲ. ಸರ್ಕಾರ ಅಧಿಕೃತ ಆದೇಶ ಮಾಡಿದರೆ ಮಾತ್ರ ಮುಷ್ಕರವನ್ನು ವಾಪಸ್ ಪಡೆಯುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದೇವೆ ಎಂದರು.
ಸರ್ಕಾರದಿಂದ ವಿಳಂಬ ಧೋರಣೆ
ಸಿಎಸ್ ಅವರು ಸಮಯಾವಕಾಶ ಕೊಡಿ ಎಂದು ಹೇಳಿದರು. ಆದರೆ, ಇನ್ನು ಸಮಯಾವಕಾಶ ನೀಡಲು ಸಾಧ್ಯವಿಲ್ಲ. ಸರ್ಕಾರ ಆದೇಶ ಮಾಡಲೇಬೇಕು ಎಂದು ಹೇಳಿದರು. ನಾವು ಮೊದಲೇ ಪ್ರತಿಭಟನೆ ಬಗ್ಗೆ ಹೇಳಿದ್ದೆವು, ಸರ್ಕಾರ ೨೦೨೨ರಲ್ಲಿ ಭರವಸೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಲೂ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಷಡಾಕ್ಷರಿ ಹೇಳಿದರು.
ಎಸ್ಮಾ, ವಜಾ, ಅಮಾನತು ಯಾವುದಕ್ಕೂ ಹೆದರಲ್ಲ
ಸರ್ಕಾರ ತಕ್ಷಣವೇ ಏನಾದರೂ ಒಂದು ತೀರ್ಮಾನ ಕೈಗೊಳ್ಳಬೇಕು. ಒಂದು ವೇಳೆ ಸರ್ಕಾರ ಎಸ್ಮಾ ಜಾರಿ ಮಾಡಿದರೂ ಹೆದರುವುದಿಲ್ಲ, ನಮ್ಮ ಹಕ್ಕು ಪಡೆಯುವ ಕೆಲಸ ಮಾಡುತ್ತಿದ್ದೇವೆ. ಆದರೆ, ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಸಸ್ಪೆಂಡ್ ಮಾಡಿದರೂ, ವಜಾ ಮಾಡಿದರೂ ನಾವು ಕೇರ್ ಮಾಡಲ್ಲ ಎಂದು ಸಿಎಸ್ ಷಡಾಕ್ಷರಿ ಹೇಳಿದರು.
ಇದನ್ನೂ ಓದಿ : 7th pay commission : ಎಸ್ಮಾ ಹೇರಿದರೂ ಹೆದರಲ್ಲ, ಹೋರಾಟ ನಿಲ್ಲಲ್ಲ ಎಂದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ