Site icon Vistara News

Govt Employees Strike : ಸರ್ಕಾರಿ ನೌಕರರ ಮುಷ್ಕರ ಹೇಗಿರಲಿದೆ? ನೌಕರರು ಪ್ರತಿಭಟನೆ ವೇಳೆ ಏನು ಮಾಡಲಿದ್ದಾರೆ?

Govt Employees Strike

Govt Employees Strike

ಬೆಂಗಳೂರು : 7ನೇ ವೇತನ ಆಯೋಗದ (7th pay commission) ವರದಿಯ ಜಾರಿಯು ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಮಧ್ಯಂತರ ಪರಿಹಾರ ಘೋಷಿಸಬೇಕು ಹಾಗೂ ಹಳೆ ಪಿಂಚಣಿ ಯೋಜನೆಯನ್ನು (OPS) ಜಾರಿಗೊಳಿಸಲೇಬೇಕೆಂದು ಒತ್ತಾಯಿಸಿ ರಾಜ್ಯದ ಸರ್ಕಾರಿ ನೌಕರರು ಮಾರ್ಚ್‌ 1 ರಿಂದ ಮುಷ್ಕರ ನಡೆಸುವುದಾಗಿ ಪ್ರಕಟಿಸಿದ್ದಾರೆ. ಈ ಪ್ರತಿಭಟನೆ (Govt Employees Strike) ಹೇಗಿರುತ್ತದೆ? ನೌಕರರು ಈ ಪ್ರತಿಭಟನೆ ಸಂದರ್ಭದಲ್ಲಿ ಏನು ಮಾಡಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ರಾಜ್ಯ ಸರ್ಕಾರಿ ನೌಕರರ ಸಂಘ ನೀಡಿರುವ ಮಾಹಿತಿ ಪ್ರಕಾರ ರಾಜ್ಯದ ಎಲ್ಲ ಸರ್ಕಾರಿ ನೌಕರರು ಮಾರ್ಚ್‌ 1 ರಿಂದ ಕರ್ತವ್ಯಕ್ಕೆ ಗೈರಾಗಲಿದ್ದಾರೆ. ಅಂದರೆ ಕಚೇರಿಗೆ ಹೋಗುವುದಿಲ್ಲ. ಒಂದು ವಾರಗಳ ಕಾಲ ಈ ರೀತಿಯ ಪ್ರತಿಭಟನೆ ನಡೆಯಲಿದ್ದು, ಇದಕ್ಕೆ ಸರ್ಕಾರ ಮಣಿಯದಿದ್ದಲ್ಲಿ ಮತ್ತೆ ಸಂಘದ ಪದಾಧಿಕಾರಿಗಳು ಸಭೆ ಸೇರಿ ಮುಂದಿನ ಹೋರಾಟದ ಕುರಿತು ತೀರ್ಮಾನಿಸಲಿದ್ದಾರೆ.

ಈ ಮೊದಲ ಹಂತದ ಪ್ರತಿಭಟನೆ ಸಂದರ್ಭದಲ್ಲಿ ಯಾವುದೇ ಬಹಿರಂಗ ಪ್ರತಿಭಟನೆ ನಡೆಯುವುದಿಲ್ಲ, ಧರಣಿ, ಸತ್ಯಾಗ್ರಹ ಇರುವುದಿಲ್ಲ. ಸರ್ಕಾರದ ವಿರುದ್ಧ ಘೋಷಣೆ ಕೂಗಲಾಗುವುದಿಲ್ಲ. ಮೆರವಣಿಗೆ, ರಸ್ತೆ ತಡೆ, ಕಚೇರಿಗೆ ಬೀಗ ಹಾಕುವುದು ಇತ್ಯಾದಿ ಯಾವ ಪ್ರತಿಭಟನೆಯೂ ನಡೆಯುವುದಿಲ್ಲ. ಕೇವಲ ಸರ್ಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗದೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲಿದ್ದಾರೆ. ಇದರಿಂದ ಸರ್ಕಾರದ ಎಲ್ಲ ಸೇವೆಗಳೂ ಬಂದ್‌ ಆಗಲಿವೆ.

ಕರ್ತವ್ಯಕ್ಕೆ ಗೈರಾಗುವ ಸರ್ಕಾರಿ ನೌಕರರು, ಸರ್ಕಾರಿ ನೌಕರರ ಸಂಘವು ನಿಗದಿಪಡಿಸಿದ ಮಾಹಿತಿಗಳನ್ನೊಳಗೊಂಡ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವ ಮೂಲಕ ತಮ್ಮ ಪ್ರತಿಭಟನೆಯ ಕುರಿತು ವ್ಯಾಪಕ ಪ್ರಚಾರ ನಡೆಸಲಿದ್ದಾರೆ. ಈ ಅನಿರ್ದಿಷ್ಟಾವಧಿ ಮುಷ್ಕರವನ್ನು ರಾಜ್ಯ ಸರ್ಕಾರಿ ನೌಕರರ ಸಂಘವು ಅಧಿಕೃತವಾಗಿ ಸೂಚನೆ ನೀಡುವವರೆಗೂ ಮುಂದುವರಿಸುವಂತೆ ನೌಕರರಿಗೆ ಸೂಚಿಸಲಾಗಿದೆ.

ಎರಡು ಬೇಡಿಕೆಗಳೇನು?
1. ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರು ದಿನಾಂಕ: 01-07-2022 ರಿಂದ ಪರಿಷ್ಕೃತ ವೇತನ, ಭತ್ಯೆಗಳಿಗೆ ಅರ್ಹರಾಗಿದ್ದು, 6ನೇ ವೇತನ ಆಯೋಗದ ಮಾದರಿಯಂತೆ 7ನೇ ವೇತನ ಆಯೋಗದಿಂದ ಶೀಘ್ರವಾಗಿ ಮಧ್ಯಂತರ ವರದಿಯನ್ನು ಪಡೆದು, ಚುನಾವಣೆ ನೀತಿ ಸಂಹಿತೆ ಜಾರಿಗೆ ಮೊದಲು ಶೇ. 40% ಫಿಟ್‌ಮೆಂಟ್‌ ಸೌಲಭ್ಯವನ್ನು ದಿನಾಂಕ: 01-07-2022ರಿಂದ ಜಾರಿಗೆ ಬರುವಂತೆ ಸರ್ಕಾರಿ ಆದೇಶ
ಹೊರಡಿಸಬೇಕು.
2. ರಾಜ್ಯದ ಎನ್‌.ಪಿ.ಎಸ್‌. ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾ ಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್‌.ಪಿ.ಎಸ್‌. ನೌಕರರನ್ನು ಓ.ಪಿ.ಎಸ್‌. ವ್ಯಾಪ್ತಿಗೆ ತರುವುದು ಸರ್ಕಾರದ ಜವಾಬ್ದಾರಿ ಯಾಗಿರುತ್ತದೆ. ಈಗಾಗಲೇ ಪಂಜಾಬ್‌, ರಾಜಸ್ಥಾನ, ಚತ್ತಿಸ್‌ಘಡ, ಜಾರ್ಖಂಡ್‌, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಸಹ ಎನ್‌.ಪಿ.ಎಸ್‌. ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು.

ರಾಜ್ಯದಾದ್ಯಂತ ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ತಾಲ್ಲೂಕು/ಜಿಲ್ಲಾ ಮಟ್ಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ಇಲಾಖಾವಾರು ತಂಡಗಳನ್ನು ರಚಿಸಲಾಗಿದೆ. ಮುಷ್ಕರ ನಡೆಯುತ್ತಿರುವ ಸಂದರ್ಭದಲ್ಲಿ ಎಲ್ಲ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಲಿರುವ ಈ ತಂಡದವರು ಕರ್ತವ್ಯಕ್ಕೆ ಹಾಜರಾಗಲಿರುವ ಸರ್ಕಾರಿ ನೌಕರರ ಮನವೊಲಿಸುವ ಕೆಲಸ ಮಾಡಲಿದ್ದಾರೆ. ಒಟ್ಟಾರೆ ಶೇ. 100 ರಷ್ಟು ಮುಷ್ಕರವು ಯಶಸ್ವಿಯಾಗುವಂತೆ ನೋಡಿಕೊಳ್ಳಲಿದ್ದಾರೆ.

ಪ್ರತಿಭಟನೆಯ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ /ಮಾಧ್ಯಮಗಳಲ್ಲಿ ಸರ್ಕಾರ ಹಾಗೂ ಯಾವುದೇ ಜನಪ್ರತಿನಿಧಿಗಳನ್ನು ಟೀಕಿಸಬಾರದು ಎಂದು ಎಲ್ಲ ನೌಕರರಿಗೂ ಸೂಚಿಸಲಾಗಿದೆ. ಅಲ್ಲದೆ ಭಿನ್ನ ಹೇಳಿಕೆಗಳಿಂದ ಗೊಂದಲ ಉಂಟಾಗುವ ಸಾಧ್ಯತೆ ಇರುವುದರಿಂದ ಮುಷ್ಕರಕ್ಕೆ ಸಂಬಂಧಿಸಿದಂತೆ ಮುದ್ರಣ/ಎಲೆಕ್ಟ್ರಾನಿಕ್‌ ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆ/ಪ್ರಕಟಣೆಗಳನ್ನು ನೀಡಬಾರದು ಎಂದು ಕೂಡ ತಿಳಿಸಲಾಗಿದೆ.

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ

ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತುರ್ತು ಸೇವೆಗಳ ಸಿಬ್ಬಂದಿ (ಕ್ಯಾಸುಯಾಲಿಟಿ, ಐಸಿಯು, ಎಂಐಸಿಯು) ಮಾತ್ರ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ. ಮತ್ತೆಲ್ಲಾ ನೌಕರರೂ ಈ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

ನಿವೃತ್ತ ಸರ್ಕಾರಿ ನೌಕರರೂ ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು, ಅವರೂ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ. ಈ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶದಿಂದ ಸರ್ಕಾರ ಕಾನೂನು ಕ್ರಮಗಳ ಮೂಲಕ ಬೆದರಿಕೆ ಹಾಕಿದ್ದಲ್ಲಿ ಸರ್ಕಾರಿ ನೌಕರರು ಎದೆಗುಂದದೆ ಮುಷ್ಕರವನ್ನು ಯಶಸ್ಸಿಗೊಳಿಸಬೇಕೆಂದೂ ಸಂಘ ಮನವಿ ಮಾಡಿದೆ.

ಸರ್ಕಾರಿ ನೌಕರರ ಈ ರೀತಿಯ ಪ್ರತಿಭಟನೆಯಿಂದ ಸರ್ಕಾರದ ಯಾವುದೇ ಸೇವೆಯು ಸಾರ್ವಜನಿಕರಿಗೆ ಲಭ್ಯವಾಗುವುದಿಲ್ಲ. ಕುಡಿಯುವ ನೀರು, ಕಸ ಸಂಗ್ರಹದಿಂದ ಹಿಡಿದು ಎಲ್ಲ ಸೇವೆಗಳೂ ಬಂದ್‌ ಆಗಲಿವೆ. ಆದರೆ ಬಹಿರಂಗ ಪ್ರತಿಭಟನೆಗಳು, ರಸ್ತೆ ತಡೆ, ಮೆರವಣಿಗೆ ಇತ್ಯಾದಿಗಳು ನಡೆಯದೇ ಇರುವುದರಿಂದ ಬೆಂಗಳೂರಿನಲ್ಲಿ ಟ್ರಾಫಿಕ್‌ ಜಾಮ್‌ನಿಂದ ತೊಂದರೆಯೂ ಆಗುವುದಿಲ್ಲ!

ಇದನ್ನೂ ಓದಿ : ವಿಸ್ತಾರ Explainer: Adani Group: ಅದಾನಿ ಗ್ರೂಪ್‌ ಕಂಪನಿಗಳ ಭವಿಷ್ಯವೇನು? ಷೇರು ಮಾರುಕಟ್ಟೆ ಚೇತರಿಸುತ್ತಿದೆಯೇ?


Exit mobile version