Site icon Vistara News

Reservation : ಎಸ್ಸಿ ಒಳಮೀಸಲಾತಿಗೆ ಸಂಪುಟ ಅಸ್ತು, ಅಲ್ಪಸಂಖ್ಯಾತರಿಗೆ ಇನ್ನು EWSನಲ್ಲಿ ಮಾತ್ರ ಅವಕಾಶ

Muslim

#image_title

ಬೆಂಗಳೂರು: ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ರಾಜ್ಯ ಸರಕಾರ ಶುಕ್ರವಾರ ಮೀಸಲಾತಿ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದೆ. ಒಂದು ಕಡೆ ಒಕ್ಕಲಿಗರು ಮತ್ತು ಪಂಚಮಸಾಲಿ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ. 2ರಷ್ಟು ಹೆಚ್ಚಳ ಮಾಡಲಾಗಿದೆ.

ಒಕ್ಕಲಿಗರು ಮತ್ತು ಇತರರು ಇದ್ದ 3ಎ ಪ್ರವರ್ಗವನ್ನು ಇನ್ನು ಮುಂದೆ 2 ಸಿ ಪ್ರವರ್ಗ ಎಂದು ಕರೆಯಲಾಗುತ್ತಿದ್ದು, ಈ ಹಿಂದೆ ಇದ್ದ 4 ಶೇಕಡಾ ಮೀಸಲಾತಿಯನ್ನು ಶೇ. 6ಕ್ಕೆ ಹೆಚ್ಚಿಸಲಾಗಿದೆ. ಇದೇ ವೇಳೆ ಪಂಚಮಸಾಲಿ ಮತ್ತು ಇತರ ಸಮುದಾಯಗಳನ್ನು ಒಳಗೊಂಡ 3ಬಿ ಪ್ರವರ್ಗವನ್ನು ಇನ್ನು ಮುಂದೆ 2ಡಿ ಪ್ರವರ್ಗವಾಗಿ ಪರಿವರ್ತಿಸಲಾಗಿದೆ. 3ಬಿಗೆ ಇದ್ದ ಶೇ. 5 ಮೀಸಲಾತಿಯನ್ನು ಶೇ. 7ಕ್ಕೆ ಹೆಚ್ಚಿಸಲಾಗಿದೆ. ಈ ರೀತಿ ನಾಲ್ಕು ಶೇಕಡಾ ಮೀಸಲಾತಿ ಹೆಚ್ಚಿಸುವುದಕ್ಕಾಗಿ ಇದುವರೆಗೆ 2ಬಿ ಪ್ರವರ್ಗದಡಿ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರಿಗೆ ನೀಡಲಾಗುತ್ತಿದ್ದ ಶೇ. 4 ಮೀಸಲಾತಿಯನ್ನು ರದ್ದು ಪಡಿಸಲಾಗಿದೆ.

ಪರಿಶಿಷ್ಟ ಜಾತಿಗೆ ಒಳಮೀಸಲು

ಅತ್ಯಂತ ಮಹತ್ವದ ನಿರ್ಧಾರವೊಂದರಲ್ಲಿ ಇತ್ತೀಚೆಗಷ್ಟೇ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ. 13ರಿಂದ ಶೇ. 17ಕ್ಕೆ ಏರಿಸಿದ್ದ ರಾಜ್ಯ ಸರಕಾರ ಈ ಬಾರಿ ಒಳ ಮೀಸಲನ್ನು ಪ್ರಕಟಿಸಿದೆ.

ಪರಿಶಿಷ್ಟ ಜಾತಿಯಲ್ಲಿ 101 ಉಪಜಾತಿಗಳಿವೆ. ಪರಿಶಿಷ್ಟ ಜಾತಿಗೆ ನೀಡಲಾಗುವ ಮೀಸಲಾತಿಯನ್ನು ಕೆಲವೇ ಬಲಿಷ್ಠ ವರ್ಗಗಳು ಪಡೆಯುತ್ತಿವೆ ಎಂಬ ಆಪಾದನೆ ಇದೆ. ಹೀಗಾಗಿ ಒಳಮೀಸಲನ್ನು ನಿಗದಿಪಡಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ನಾವು ಒಳಮೀಸಲಾತಿ ನಿಗದಿ ಮಾಡುತ್ತೇವೆ ಎಂದಾಗ ಬಂಜಾರ, ಕೋವಿ, ಕೊರಚ ಮೊದಲಾದವರಿಗೆ ತಾವು ಮೀಸಲಾತಿ ಕಳೆದುಕೊಳ್ಳುತ್ತೇವೆ ಎಂಬ ಆತಂಕವಿತ್ತು. ಆದರೆ, ದಾಖಲೆ ತೆಗೆದು ನೋಡಿದಾಗ ಬೋವಿ, ಕೊರಚ ಕೊರಮ ನಿಜವಾದ ಪರಿಶಿಷ್ಟ ಜಾತಿ ಎನ್ನುವುದು ತಿಳಿಯಿತು. ಹೀಗಾಗಿ ಅವರಿಗೆ ಯಾವುದೇ ಭಯವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಲಾಯಿತು. ಮುಂದೆ ಒಳಮೀಸಲಾತಿ ಹೇಗೆ ನೀಡಬೇಕು ಎನ್ನುವ ಬಗ್ಗೆ ಸಂಪುಟ ಉಪಸಮಿತಿಯನ್ನು ರಚಿಸಲಾಯಿತು. ಅದರು ಎಲ್ಲಾ ರೀತಿಯ ಕಾನೂನಿನ ಅಂಶಗಳನ್ನು ಗಮನಿಸಿ ಎಲ್ಲರಿಗೂ ನ್ಯಾಯ ನೀಡುವ ದೃಷ್ಟಿಯಿಂದ ಒಳಮೀಸಲನ್ನು ನಿರ್ಧಾರ ಮಾಡಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ತಿಳಿಸಿದರು.

ಆರ್ಟಿಕಲ್ 341(2) ಅನ್ವಯ ಪರಿಶಿಷ್ಟ ಜಾತಿ ನಾಲ್ಕು ವರ್ಗೀಕರಣ ಮಾಡಲಾಗಿದ್ದು, ಅವುಗಳಿಗೆ ನೀಡಲಾದ ಒಳ ಮೀಸಲಾತಿಯ ವಿವರ ಹೀಗಿದೆ.
ಪರಿಶಿಷ್ಟ ಜಾತಿಯ ಎಡ (ಮಾದಿಗ + ) 6%
ಪರಿಶಿಷ್ಟ ಜಾತಿಯ ಬಲ (ಹೊಲೆಯ + ) 5.5%
ಬೋವಿ , ಲಂಬಾಣಿ + 4.5%
ಅಲೆಮಾರಿ ಸಣ್ಣ ಜಾತಿಗಳು 1%
ಒಟ್ಟು 17%

ಧಾರ್ಮಿಕ ಅಲ್ಪಸಂಖ್ಯಾತರಿಗೆ ಇನ್ನು EWSನಲ್ಲಿ ಮಾತ್ರ ಅವಕಾಶ

ರಾಜ್ಯ ಸರ್ಕಾರದ ಇನ್ನೊಂದು ಮಹತ್ವದ ನಿರ್ಧಾರವೆಂದರೆ ಇದುವರೆಗೆ ಧಾರ್ಮಿಕ ಅಲ್ಪಸಂಖ್ಯಾತರಿಗೆ ನೀಡಲಾಗುತ್ತಿದ್ದ ಶೇ. ನಾಲ್ಕರಷ್ಟು ಮೀಸಲಾತಿಯನ್ನು ಕಡಿತಗೊಳಿಸಿರುವುದು. ಹಿಂದುಳಿದ ವರ್ಗದಲ್ಲಿ ಈಗಿರುವ ವ್ಯವಸ್ಥೆಯಲ್ಲಿ ಕೆಳಗಿನ ಮಾದರಿಯ ಮೀಸಲಾತಿ ಇತ್ತು. ಅಂದರೆ ಐದು ಪ್ರವರ್ಗಗಳಿವೆ.
ಪ್ರವರ್ಗ 1- 4 ಶೇಕಡಾ ಮೀಸಲಾತಿ(ಅತ್ಯಂತ ಹಿಂದುಳಿದವರು)
ಪ್ರವರ್ಗ 2ಎ- ಶೇ. 15 ಮೀಸಲಾತಿ (ಸಾಮಾನ್ಯ ಹಿಂದುಳಿದವರು)
ಪ್ರವರ್ಗ 2ಬಿ- ಶೇ. 4 ಮೀಸಲಾತಿ (ಧಾರ್ಮಿಕ ಅಲ್ಪಸಂಖ್ಯಾತರು)
ಪ್ರವರ್ಗ 3ಎ-ಶೇ. 4 ಮೀಸಲಾತಿ (ಒಕ್ಕಲಿಗರು ಮತ್ತು ಇತರರು)
ಪ್ರವರ್ಗ 3ಬಿ- ಶೇ. 5 ಮೀಸಲಾತಿ (ಲಿಂಗಾಯತ ಮತ್ತು ಇತರರು).

ಇದೀಗ ಹೊಸ ಮಾದರಿಯಲ್ಲಿ ನಾಲ್ಕೇ ಪ್ರವರ್ಗಗಳನ್ನು ಮಾಡಲಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರಿಗೆ ಇದ್ದ ಮೀಸಲಾತಿಯನ್ನು ರದ್ದು ಮಾಡಿ ಅವರಿಗಿದ್ದ ನಾಲ್ಕು ಶೇಕಡಾ ಮೀಸಲಾತಿಯನ್ನು ಒಕ್ಕಲಿಗ ಮತ್ತು ಲಿಂಗಾಯತರಿಗೆ ಹಂಚಲಾಗಿದೆ.

ಹೊಸ ಪ್ರವರ್ಗದ ಲೆಕ್ಕಾಚಾರ ಹೀಗಿದೆ.
ಪ್ರವರ್ಗ 1- 4 ಶೇಕಡಾ ಮೀಸಲಾತಿ(ಅತ್ಯಂತ ಹಿಂದುಳಿದವರು)
ಪ್ರವರ್ಗ 2ಎ- ಶೇ. 15 ಮೀಸಲಾತಿ (ಸಾಮಾನ್ಯ ಹಿಂದುಳಿದವರು)
ಪ್ರವರ್ಗ 2ಸಿ-ಶೇ. 6 ಮೀಸಲಾತಿ (ಒಕ್ಕಲಿಗರು ಮತ್ತು ಇತರರು)
ಪ್ರವರ್ಗ 2ಡಿ- ಶೇ. 7 ಮೀಸಲಾತಿ (ಲಿಂಗಾಯತ ಮತ್ತು ಇತರರು).

ಅಲ್ಪಸಂಖ್ಯಾತರಿಗೆ ಎಲ್ಲಿ?

ದೇಶದಲ್ಲಿ ಬಹುತೇಕ ರಾಜ್ಯಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಮೀಸಲಾತಿ ಇಲ್ಲ. ಕರ್ನಾಟಕದಲ್ಲೂ ಅದೇ ಮಾದರಿ ಜಾರಿಗೆ ಬರಲಿದೆ ಎನ್ನುವ ಸೂಚನೆಯನ್ನು ನೀಡಲಾಗಿದೆ. ಆದರೆ, ಇಲ್ಲೊಂದು ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ. ಅದೇನೆಂದರೆ ಅವರಿಗೆ ಕೇಂದ್ರ ಸರ್ಕಾರ ಮೇಲ್ವರ್ಗದ ಬಡವರಿಗೆ ಮೀಸಲಿಟ್ಟ ಶೇ. 10ರಷ್ಟು ಮೀಸಲಾತಿಯಲ್ಲೇ ಅವರು ಇನ್ನು ಅವಕಾಶಗಳನ್ನು ಪಡೆಯಬೇಕಾಗಿದೆ.

EWS ಅಡಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಲಾಗುತ್ತದೆ. SC, ST ಹೊರತುಪಡಿಸಿ EWS ಅಡಿ ಯಾರು ಬೇಕಾದ್ರೂ ಕಾಂಪೀಟ್ ಮಾಡಬಹುದು ಮಾಡಬಹುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಈ ನಡುವೆ, ಅಲ್ಪಸಂಖ್ಯಾತರಲ್ಲಿರುವ ಕೆಳ ಸಮುದಾಯಗಳಾದ ಪಿಂಜಾರ್, ನದಾಫ್, ದರೋಜಿ ಸೇರಿದಂತೆ 12 ವೃತ್ತಿ ಆಧಾರಿತ ಪಂಗಡಗಳಿಗೆ ಒಂದು ಹೊಸ ನಿಗಮ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ.

ಇದನ್ನೂ ಓದಿ : Panchamasali Reservation : ಪಂಚಮಸಾಲಿ ಹೋರಾಟ ಅಂತ್ಯ? ಚರ್ಚಿಸಿ ನಾಳೆ ಹೇಳುತ್ತೇವೆ ಎಂದ ಬಸವ ಜಯಮೃತ್ಯುಂಜಯ ಶ್ರೀ

Exit mobile version