ಬೆಳಗಾವಿ : ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚಿಸುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರ (Karnataka Government) ಮುದ್ರಾಂಕ ಶುಲ್ಕವನ್ನು (Stamp Duty) ಹೆಚ್ಚಿಸುವ ವಿಧೇಯಕವನ್ನು ಗುರುವಾರ ವಿಧಾನಸಭೆಯ ಅಧಿವೇಶನದ ವೇಳೆ (Assembly Session)ಮಂಡಿಸಿದೆ. ಪವರ್ ಆಫ್ ಅಟಾರ್ನಿ, ಡೀಡ್ಸ್ ಆ್ಯಂಡ್ ಅಫಿಡವಿಟ್ ಹಾಗೂ ಇತರ ಕಾನೂನು ದಾಖಲೆಗಳಿಗೆ ಸಂಬಂಧಿಸಿದ ಮುದ್ರಾಂಕ ಶುಲ್ಕ ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದೆ. ಗ್ಯಾರಂಟಿಗಳ ಘೋಷಣೆ ಬಳಿಕ ಉಂಟಾಗುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸರ್ಕಾರ ಮಾರ್ಗಸೂಚಿ ದರವನ್ನು ಹೆಚ್ಚಳ ಮಾಡಿತ್ತು. ಇದೀಗ ಮುದ್ರಾಂಕ ಶುಲ್ಕವನ್ನೂ ಏರಿಕೆ ಮಾಡಿದೆ. ಕರ್ನಾಟಕ ಮುದ್ರಾಂಕ (ತಿದ್ದುಪಡಿ) ವಿಧೇಯಕ ಮೂಲಕ ಎಲ್ಲಾ ಮುದ್ರಾಂಕ ಶುಲ್ಕಗಳನ್ನು ಹೆಚ್ಚಿಸಲು ಮತ್ತು ಕೆಲವು ಮುದ್ರಾಂಕ ಶುಲ್ಕಗಳನ್ನು ದುಪ್ಪಟ್ಟು ಮಾಡುವುದು ಸರ್ಕಾರದ ಯೋಜನೆಯಾಗಿದೆ.
ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳು ರಾಜ್ಯ ಸರ್ಕಾರಕ್ಕೆ ದೊಡ್ಡ ಮಟ್ಟಿನ ಆದಾಯ ತಂದುಕೊಡುತ್ತದೆ. ಅಬಕಾರಿ ಆದಾಯವನ್ನು ಮೀರಿ ರಾಜ್ಯ ಸರ್ಕಾರಕ್ಕೆ ಆರ್ಥಿಕವಾಗಿ ನೆರವಾಗುತ್ತದೆ. ಹೀಗಾಗಿ ಹಾಲಿ ಹಣಕಾಸು ವರ್ಷದಲ್ಲಿ 25,000 ರೂ. ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ತಿದ್ದುಪಡಿ ವಿಧೇಯಕ ಮಂಡನೆ ಮಾಡಿದೆ. ಕಂದಾಯ ಸಚಿವರ ಪರವಾಗಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಿಧೇಯ ಮಂಡಿಸಿದ್ದಾರೆ.
ಇದನ್ನೂ ಓದಿ : Cabinet Meeting: ಕೃಷಿಕರಲ್ಲದವರಿಂದ ಕೃಷಿ ಭೂಮಿ ಖರೀದಿಗೆ ಖೊಕ್, ವಿಧೇಯಕ ವಾಪಸ್ ಪಡೆಯಲು ಸಂಪುಟ ತೀರ್ಮಾನ
ಬಾಡಿಗೆ ಒಪ್ಪಂದ, ಭೂಮಿ ಶುದ್ಧ ಕ್ರಯಪತ್ರ, ಸಾಲದ ಒಪ್ಪಂದ, ಬ್ಯಾಂಕ್ ಗ್ಯಾರಂಟಿ ದಾಖಲೆಗಳ ನೋಂದಣಿ ಹಾಗು ಮನೆಗಳ ಬಾಡಿಗೆ ಕರಾರು, ಗುತ್ತಿಗೆ ಕರಾರು ಬ್ಯಾಂಕ್ ಸಾಲದ ದಾಖಲೆಗಳು, ಪವರ್ ಆಫ್ ಅಟಾರ್ನಗಳ ಮುದ್ರಾಂಕ ಶುಲ್ಕ ಏರಿಕೆಯಾಗಲಿದೆ.
ಎಷ್ಟು ಏರಿಕೆ?
ಹೊಸ ವಿಧೇಯಕ ಪ್ರಕಾರ ದತ್ತು ಪತ್ರಗಳ ಮೇಲಿನ ಮುದ್ರಾಂಕ ಶುಲ್ಕ 500 ರಿಂದ 1,000 ರೂ.ಗೆ ಏರಿಕೆಯಾಗಲಿದೆ. ಸದ್ಯ 20 ರೂಪಾಯಿಗಳ ಮುದ್ರಾಂಕ ಶುಲ್ಕವನ್ನು ಹೊಂದಿರುವ ಅಫಿಡವಿಟ್ಗಳಿಗೆ ಮುಂದೆ ಐದು ಪಟ್ಟು ಹೆಚ್ಚಳ ಅಂದರೆ 100 ರೂಪಾಯಿ ವರೆಗೆ ಏರಿಕೆಯಾಗಲಿದೆ.
ಪವರ್ ಆಫ್ ಅಟಾರ್ನಿ ಮೇಲಿನ ಮುದ್ರಾಂಕ ಶುಲ್ಕವನ್ನು 100 ರೂ.ನಿಂದ 500 ರೂ.ಗೆ ಅಧಿಕಗೊಳಿಸಲಾಗಿದೆ. ಐದಕ್ಕಿಂತ ಹೆಚ್ಚು ಮಂದಿ, ಆದರೆ 10 ಕ್ಕಿಂತ ಕಡಿಮೆ ವ್ಯಕ್ತಿಗಳು ಜಂಟಿಯಾಗಿ ಪವರ್ ಆಫ್ ಅಟಾರ್ನಿ ನೀಡುವುದಾದರೆ ಅದರ ಮೇಲಿನ ಮುದ್ರಾಂಕ ಶುಲ್ಕ ಪ್ರಸ್ತುತ ಇರುವ 200 ರೂ.ನಿಂದ 1,000 ರೂ.ಗೆ ಹೆಚ್ಚಳವಾಗಲಿದೆ.
ನಗರ ಪ್ರದೇಶಗಳಲ್ಲಿರುವ ಆಸ್ತಿ ವಿಭಜನಾ ಪತ್ರಗಳಿಗೆ ಮುದ್ರಾಂಕ ಶುಲ್ಕವನ್ನು ಪ್ರತಿ ಷೇರಿಗೆ 1,000 ರೂ.ನಿಂದ 5,000 ರೂ.ಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ನಗರ ಮಿತಿಯಿಂದ ಹೊರಗಿರುವ ಆಸ್ತಿಗಳಿಗೆ, ಪ್ರಸ್ತುತ 500 ರೂ. ಬದಲಾಗಿ ಪ್ರತಿ ಷೇರಿಗೆ 3,000 ರೂ. ಮಾಡಲು ಪ್ರಸ್ತಾವಿಸಲಾಗಿದೆ. ಕೃಷಿ ಆಸ್ತಿಗಳನ್ನು ವಿಭಜಿಸಲು ಪ್ರತಿ ಷೇರಿಗೆ 250 ರೂ. ಬದಲಾಗಿ 1,000 ರೂ.ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.
ವಿಚ್ಛೇದನ ಪತ್ರಗಳ ಮೇಲಿನ ಸ್ಟ್ಯಾಂಪ್ ಡ್ಯೂಟಿ ಕೂಡ 100 ರಿಂದ 500 ರೂ.ಗೆ ಹೆಚ್ಚಾಗಲಿದೆ. ಪ್ರಮಾಣೀಕೃತ ಪ್ರತಿಗಳಿಗೆ, ಸ್ಟ್ಯಾಂಪ್ ಸುಂಕವನ್ನು 5 ರಿಂದ 20 ಕ್ಕೆ ಹೆಚ್ಚಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.
ಸರ್ಕಾರವು ಮುದ್ರಾಂಕ ಶುಲ್ಕಗಳನ್ನು ಹೆಚ್ಚಿಸಲು ಮುಂದಾಗಿರುವುದರಿಂದ ಟ್ರಸ್ಟ್‌ಗಳನ್ನು ನೋಂದಾಯಿಸುವುದು ಸಹ ದುಬಾರಿಯಾಗಲಿದೆ. ಕಂಪನಿಗಳ ವಿಲೀನ ಮತ್ತಿತರ ಪ್ರಕ್ರಿಯೆಗಳೂ ದುಬಾರಿಯಾಗಲಿವೆ.