Site icon Vistara News

Hiremagaluru Kannan: ಕಣ್ಣನ್‌ಗೆ ನೋಟಿಸ್‌; ತಹಸೀಲ್ದಾರ್‌ ವಿರುದ್ಧ ಕ್ರಮಕ್ಕೆ ಮುಜರಾಯಿ ಇಲಾಖೆ ಸೂಚನೆ

Hiremagaluru Kannan‌

ಬೆಂಗಳೂರು: ಹಿರೇಮಗಳೂರು ಕೋದಂಡ ರಾಮಚಂದ್ರಸ್ವಾಮಿ ದೇವಾಲಯದ ಅರ್ಚಕರು, ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್‌ (Hiremagaluru Kannan) ಅವರಿಗೆ ವೇತನ ತಡೆಹಿಡಿದು, ಈ ಹಿಂದೆ ಹೆಚ್ಚುವರಿಯಾಗಿ ನೀಡಿದ್ದ ತಸ್ತೀಕ್‌ ಹಣ ಕೊಡುವಂತೆ ತಹಸೀಲ್ದಾರ್‌ ನೀಡಿದ್ದ ನೋಟಿಸ್ ಅನ್ನು ಹಿಂಪಡೆಯಲು ಮುಜರಾಯಿ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದು, ಜತೆಗೆ ತಹಸೀಲ್ದಾರ್‌ ಹಾಗೂ ಸಂಬಂಧಪಟ್ಟ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

ಹಿರೇಮಗಳೂರು ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಅರ್ಚಕರಿಗೆ ಹೆಚ್ಚುವರಿಯಾಗಿ ಪಾವತಿಸಿರುವ ತಸ್ತೀಕ್ ಮೊತ್ತವನ್ನು ದೇವಾಲಯದ ಖಾತೆಗೆ ಹಿಂದಿರುಗಿಸುವ ಸಂಬಂಧ ತಹಸೀಲ್ದಾರ್ ಅವರಿಂದ ಮಾಹಿತಿಯನ್ನು ಪಡೆದಿದ್ದು, ಅದರಂತೆ ಸದರಿ ದೇವಾಲಯಕ್ಕೆ 2013-14 ರಿಂದ 2015- 17ರವರೆಗೆ ವಾರ್ಷಿಕ 24,000 ರೂ. ತಸ್ತೀಕ್ ಅರ್ಚಕರಿಗೆ ಪಾವತಿಸಬೇಕಿದೆ. ಆದರೆ ತಪ್ಪಾಗಿ ವಾರ್ಷಿಕ 90,000 ರೂ.ಗಳಂತೆ ತಹಸೀಲ್ದಾರ್ ಪಾವತಿಸಿದ್ದಾರೆ.

ಇದನ್ನೂ ಓದಿ | Road Rage Case: ಕಾರಿನ ಬಾನೆಟ್‌ ಮೇಲೆ ಕ್ಯಾಬ್‌ ಡ್ರೈವರ್‌ನ 400 ಮೀ. ಎಳೆದೊಯ್ದ ವ್ಯಕ್ತಿ!

ಅದೇ ರೀತಿ 2017- 18ನೇ ಸಾಲಿನಿಂದ 2021-22ನೇ ಸಾಲಿನವರೆಗೆ ವಾರ್ಷಿಕ 48,000 ರೂ. ತಸ್ತೀಕ್ ಮೊತ್ತ ಅರ್ಚಕರಿಗೆ ಪಾವತಿಸಬೇಕಿದ್ದು, ತಪ್ಪಾಗಿ ವಾರ್ಷಿಕ 90,000 ರೂ.ಗಳಂತೆ ಪಾವತಿಸಲಾಗಿದೆ. ಹೀಗಾಗಿ ಹೆಚ್ಚುವರಿಯಾಗಿ ನೀಡಿರುವ 4,74,000 ರೂ.ಗಳನ್ನು ದೇವಾಲಯದ ನಿಧಿಗೆ ಮರು ಪಾವತಿಸಲು ತಹಸೀಲ್ದಾರ್ ಡಿಸೆಂಬರ್ 2ರಂದು ತಿಳಿವಳಿಕೆ ಪತ್ರ ನೀಡಿದ್ದರು. ಈ ವಿಷಯವು ಸಚಿವರ ಗಮನಕ್ಕೆ ಬಂದಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ | KS Eshwarappa : ಅರ್ಚಕರ ವೇತನ ವಾಪಸ್‌ ಆದೇಶಕ್ಕೆ ಬಿಜೆಪಿ ಆಕ್ರೋಶ, ಇದು ಹುಚ್ಚು ಸರ್ಕಾರ ಎಂದ ಈಶ್ವರಪ್ಪ

ಅರ್ಚಕರಿಗೆ ನೀಡಿರುವ ನೋಟಿಸ್‌ ಹಿಂಪಡೆದು, ಪ್ರಕರಣದ ವಿಚಾರಣೆಯನ್ನು ನಡೆಸಿ, ಹೆಚ್ಚುವರಿಯಾಗಿ ಪಾವತಿ ಮಾಡಿರುವ ಅಧಿಕಾರಿ, ಸಿಬ್ಬಂದಿ ಮೇಲೆ ಬಗ್ಗೆ ನಿಯಾಮಾನುಸಾರ ಆಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಮುಜರಾಯಿ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

ಹಿರೇಮಗಳೂರು ಕಣ್ಣನ್‌ ತಪ್ಪಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ

ಚಿಕ್ಕಮಗಳೂರು: ಹಿರೇಮಗಳೂರು ಕೋದಂಡ ರಾಮಚಂದ್ರಸ್ವಾಮಿ ದೇವಾಲಯದ ಅರ್ಚಕರು, ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್‌ (Hiremagaluru Kannan) ಅವರಿಗೆ ವೇತನ ತಡೆಹಿಡಿದು ಜಿಲ್ಲಾಡಳಿತ ನೋಟಿಸ್ ನೀಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು, ಇದರಲ್ಲಿ ಕಣ್ಣನ್‌ ಅವರದು ಯಾವುದೇ ತಪ್ಪಿಲ್ಲ. ಅವರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಿಲ್ಲ ಎಂದು ತಿಳಿಸಿದ್ದಾರೆ.

ದೇವಾಲಯದ ವಾರ್ಷಿಕ ಆದಾಯಕ್ಕಿಂತ ವೆಚ್ಚವೇ ಹೆಚ್ಚುವರಿಯಾಗಿದೆ ಎಂದು ದೇವಸ್ಥಾನದ ಅರ್ಚಕರಿಗೆ ನೀಡುತ್ತಿದ್ದ ಸಂಬಳವನ್ನು ರಾಜ್ಯ ಸರ್ಕಾರವು ವಾಪಸ್ ಕೇಳಿತ್ತು. ಈ ಸಂಬಂಧ ಹಿರೇಮಗಳೂರು ಕಣ್ಣನ್‌ ಅವರ ವೇತನ ತಡೆಹಿಡಿದು ಚಿಕ್ಕಮಗಳೂರು ತಹಸೀಲ್ದಾರ್‌ ನೋಟಿಸ್ ನೀಡಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು, ಪ್ರತಿ ವರ್ಷ ತಸ್ತೀಕ್ ಹಣವನ್ನು ದೇವಾಲಯಗಳಿಗೆ ನೀಡಲಾಗುತ್ತದೆ. ಕಣ್ಣನ್ ಅವರ ವಿಚಾರದಲ್ಲಿ 24 ಸಾವಿರ ಬದಲು 90 ಸಾವಿರ ರೂ. ನೀಡಲಾಗಿದೆ. ಇದರಲ್ಲಿ ತಹಸೀಲ್ದಾರ್‌ರವರ ತಪ್ಪಿನಿಂದ ಈ ರೀತಿ ಆಗಿರುವುದು ಗಮನಕ್ಕೆ ಬಂದಿದೆ. ಯಾವುದೇ ಕಾರಣಕ್ಕೂ ಕಣ್ಣನ್ ಅವರ ತಪ್ಪಲ್ಲ. ಇಲಾಖೆಯ ಆಯುಕ್ತರ ಗಮನಕ್ಕೆ ತಂದು ನೊಟೀಸ್ ವಾಪಸ್‌ ಪಡೆಯುವಂತೆ ಸೂಚಿಸುತ್ತೇನೆ. ಹೆಚ್ಚುವರಿ ಪಾವತಿ ಮಾಡಿರೋ ಹಣವನ್ನು ತಹಸೀಲ್ದಾರ್‌ರಿಂದ ವಸೂಲು ಮಾಡಬೇಕು. ಕಣ್ಣನ್ ಅವರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಿಲ್ಲ ಎಂದು ತಿಳಿಸಿದ್ದಾರೆ.

Exit mobile version