ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಅನೇಕ ದಿನಗಳಿಂದಲೂ ಬಾಕಿ ಉಳಿದಿರುವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜನ್ಮ ದಿನದ ಕಾರ್ಯಕ್ರಮದಂದೇ ನಡೆಸುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ವರ್ಷದ ಪ್ರಯುಕ್ತ ಆಗಸ್ಟ್ 3ರಂದು ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಆಯೋಜನೆ ಮಾಡಲಾಗಿದೆ. ಕಾಂಗ್ರೆಸ್ ನಾಯಕರೇ ಸೇರಿ ಆಚರಿಸುತ್ತಿದ್ದರೂ ಇದು ಕಾಂಗ್ರೆಸ್‌ನಲ್ಲಿರುವ ಸಿದ್ದರಾಮಯ್ಯ ಆಪ್ತರ ಕಾರ್ಯಕ್ರಮ ಎಂಬುದು ಇಲ್ಲಿವರೆಗಿನ ತಯಾರಿ ನೋಡಿದರೆ ತಿಳಿಯುತ್ತದೆ. ಸುಮಾರು ಐದು ಲಕ್ಷ ಜನರನ್ನು ಸೇರಿಸಲು ಆಯೋಜಕರು ಮುಂದಾಗಿರುವುದರಿಂದ ರಾಜ್ಯ ಸರ್ಕಾರಕ್ಕೂ ಈ ಕುರಿತು ಆತಂಕ ಶುರುವಾಗಿದೆ. ಅದಕ್ಕಾಗಿಯೇ ಹೊಸ ಯೋಜನೆ ಮಾಡಲು ಮುಂದಾಗಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಇದೀಗ ನವದೆಹಲಿಯಲ್ಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪ್ರಮಾಣವಚನ ಕಾರ್ಯಕ್ರಮದ ನಂತರ ವಿವಿಧ ಸಚಿವರುಗಳನ್ನು ಭೇಟಿ ಮಾಡುವ ಅಧಿಕೃತ ಕಾರ್ಯಕ್ರಮಗಳಿವೆ. ಪಶ್ಚಿಮ ಘಟ್ಟ ಕುರಿತಂತೆ ಕಸ್ತೂರಿರಂಗನ್ ಸಮಿತಿ ವರದಿಯನ್ನು ಅನುಷ್ಠಾನ ಮಾಡಬಾರದು ಎಂಬ ರಾಜ್ಯ ಸರ್ಕಾರದ ನಿರ್ಧಾರವನ್ನು ತಿಳಿಸುವುದೂ ಸೇರಿ ಅನೇಕ ಚರ್ಚೆಗಳನ್ನು ಮಾಡಲಿದ್ದಾರೆ.
ಈ ನಡುವೆ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿ ಅನೇಕ ಬಿಜೆಪಿ ನಾಯಕರನ್ನೂ ಸಿಎಂ ಭೇಟಿ ಮಾಡಲಿದ್ದಾರೆ. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಚರ್ಚೆ ಮಾಡಲಿದ್ದಾರೆ. ಇಲ್ಲಿವರೆಗೆ ಸಂಪುಟ ವಿಸ್ತರಣೆಗೆ ವರಿಷ್ಠರು ಒಪ್ಪಿಗೆ ನೀಡಿಲ್ಲ. ಆದರೆ ಚುನಾವಣೆ ಹತ್ತಿರವಾದಂತೆ ಈ ಕುರಿತು ಒತ್ತಡ ಹೆಚ್ಚಾಗಿದೆ.
ಸಂಘಟನಾತ್ಮಕವಾಗಿ ಗಟ್ಟಿಯಾಗಿರುವ ಅನೇಕರು ಸಚಿವ ಸಂಪುಟದಲ್ಲಿದ್ದಾರೆ. ಅವರನ್ನು ಚುನಾವಣೆ ಸಮಯದಲ್ಲಿ ಸಂಘಟನೆಗೆ ನೀಡಿದರೆ ಚುನಾವಣೆಯಲ್ಲಿ ಅನುಕೂಲ ಎಂಬ ಬೇಡಿಕೆಯೂ ಇದೆ. ಆದರೆ ಇದೆಲ್ಲಕ್ಕೂ ವರಿಷ್ಠರು ಒಪ್ಪಿಗೆ ನೀಡಬೇಕಿದೆ. ಈ ಬಾರಿ ಸಂಪುಟಕ್ಕೆ ಒಪ್ಪಿಗೆ ನೀಡುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.
ಒಪ್ಪಿಗೆ ಸಿಕ್ಕ ತಕ್ಷಣ ದಿನಾಂಕ ನಿಗದಿ ಮಾಡಲಾಗುತ್ತದೆ. ಸಿದ್ದರಾಮೋತ್ಸವ ಮೂಲಕ ಅಹಿಂದ ಮತಗಳ ಕ್ರೋಡೀಕರಣಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ಅದೇ ದಿನವೇ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮೂಲಕ ಕೆಲವು ಹಿಂದುಳಿದ ಹಾಗೂ ದಲಿತ ಮುಖಗಳಿಗೆ ಸಚಿವ ಸ್ಥಾನ ನೀಡುವ ಚಿಂತನೆ ನಡೆದಿದೆ. ಈ ಮೂಲಕ ಸಿದ್ದರಾಮೋತ್ಸವಕ್ಕೆ ಪ್ರತಿಯಾಗಿ ತಂತ್ರ ರೂಪಿಸಲು ಮುಂದಾಗಲಾಗಿದೆ. ಸಂಪುಟಕ್ಕೆ ಒಪ್ಪಿಗೆ ಸಿಕ್ಕ ಕೂಡಲೆ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ | ಸಿದ್ದರಾಮೋತ್ಸವಕ್ಕೆ ಡಿ.ಕೆ. ಶಿವಕುಮಾರ್ ಅತಿಥಿ ಅಷ್ಟೆ: ಅಧ್ಯಕ್ಷರನ್ನು ದೂರವಿಟ್ಟ ಸಮಿತಿ