Site icon Vistara News

ಪಂಚಮಸಾಲಿ 2ಎ ಮೀಸಲಾತಿ: ಮತ್ತೆ ಎರಡು ತಿಂಗಳು ಗಡವು ವಿಸ್ತರಣೆ; ಸರ್ಕಾರ ಸದ್ಯ ನಿರಾಳ

ಪಂಚಮಸಾಲಿ

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಷಯದಲ್ಲಿ ಮತ್ತೆ ಸರ್ಕಾರ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದೆ. ಮೀಸಲಾತಿಗೆ ಪಟ್ಟು ಹಿಡಿದು ಹೋರಾಟಕ್ಕೆ ಮುಂದಾಗಿದ್ದ ಕೂಡಲಸಂಗಮದ ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರ ಮನವೊಲಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ.

ಮಂಗಳವಾರ ಕೂಡಲಸಂಗಮದ ಪಂಚಮಸಾಲಿ ಗುರುಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಜತೆ ಸರ್ಕಾರದ ಪರವಾಗಿ ಸಚಿವ ಸಿ.ಸಿ.ಪಾಟೀಲ್ ನಡೆಸಿದ ಸಂಧಾನ ಮಾತುಕತೆ ಯಶಸ್ವಿಯಾಗಿದ್ದು, ಸ್ವಾಮೀಜಿ ಸರ್ಕಾರಕ್ಕೆ ನಿರ್ಧಾರ ತೆಗೆದುಕೊಳ್ಳಲು ಮತ್ತೆ ಎರಡು ತಿಂಗಳ ಕಾಲಾವಕಾಶ ನೀಡಿದ್ದಾರೆ.

ಮಂಗಳೂರು ಸರಣಿ ಹತ್ಯೆಗಳು, ಸಿದ್ದರಾಮಯ್ಯ ಕಾರಿಗೆ ಮೊಟ್ಟೆ, ಸಾವರ್ಕರ್ ಫ್ಲೆಕ್ಸ್‌ ತೆರವು ಪ್ರಕರಣಗಳ ತಲೆನೋವಿನ ನಡುವೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪಂಚಮಸಾಲಿ ಮೀಸಲಾತಿ ಎಂಬ ಮತ್ತೊಂದು ಸಂಕಷ್ಟ ಎದುರಾಗುತ್ತದೆ ಎಂದು ಹೇಳಲಾಗಿತ್ತು. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ನೀಡಿದ್ದ ಕಾಲಾವಕಾಶ ಆ.22ಕ್ಕೆ ಮುಗಿದಿದೆ. ಹೀಗಾಗಿ ಮಂಗಳವಾರ ಶಿಗ್ಗಾಂವ್ ಪಟ್ಟಣದಲ್ಲಿ ಸಿಎಂ ಮನೆ ಮುಂದೆ ಸತ್ಯಾಗ್ರಹ ನಡೆಸುವುದಾಗಿ ಹೋರಾಟಗಾರರು ಪ್ರಕಟಿಸಿದ್ದರು. ಆದರೆ ಸರ್ಕಾರದ ಪರವಾಗಿ ಸಚಿವ ಸಿ.ಸಿ.ಪಾಟೀಲ್ ಶಿಗ್ಗಾಂವ್ ಪಟ್ಟಣದ ಖಾಸಗಿ ಹೊಟೇಲ್‌ನಲ್ಲಿ ಜಯಮೃತ್ಯುಂಜಯ ಸ್ವಾಮೀಜಿ‌ ಮತ್ತು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಜತೆ ಮಾತುಕತೆ ನಡೆಸಿದ್ದು, ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ | ಸಾವರ್ಕರ್‌ ರಥಯಾತ್ರೆ: ಇಂದಿರಾ ಗಾಂಧಿ ಮಾತಿನ ಮೂಲಕವೇ ಸಿದ್ದರಾಮಯ್ಯಗೆ ತಿವಿದ ಯಡಿಯೂರಪ್ಪ

ಮಾತುಕತೆಯ ವೇಳೆ, ಸೂಕ್ತ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಆರು ತಿಂಗಳ ಕಾಲಾವಕಾಶ ಕೊಡಿ ಎಂದು ಸಚಿವರು ಕೇಳಿದ್ದಾರೆ. ಆದರೆ ಸಚಿವರ ಮನವಿ ಒಪ್ಪದ ಸ್ವಾಮೀಜಿ‌ ಮತ್ತೆ ಎರಡು ತಿಂಗಳು ಅವಕಾಶ ನೀಡಲು ಸಮ್ಮತಿಸಿದರು. ಈ ಮೂಲಕ ಸಿಸಿ ಪಾಟೀಲ್ ನಡೆಸಿದ ಮಾತುಕತೆ ಅಲ್ಪ ಯಶಸ್ಸು ಪಡೆದಿದೆ.

ಈ ಮಾತುಕತೆಯ ಹಿನ್ನೆಲೆಯಲ್ಲಿ ಶಿಗ್ಗಾಂವ್ ಪಟ್ಟಣದಲ್ಲಿ ಕೈಗೊಳ್ಳಬೇಕಿದ್ದ ಸತ್ಯಾಗ್ರಹವನ್ನು ಸ್ವಾಮಿಜಿ‌ ಕೈ ಬಿಟ್ಟು, ಕಿತ್ತೂರು ರಾಣಿ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅಲ್ಲಿಯೇ ಬಹಿರಂಗ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಯತ್ನಾಳ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಮೀಸಲಾತಿ ನೀಡದಿದ್ದರೆ ಬೆಂಗಳೂರಿನಲ್ಲಿ ಮತ್ತೆ 25 ಲಕ್ಷ ಜನ ಸೇರಿಸಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬಳಿಕ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಖಾಸಗಿ ಕಟ್ಟಡದಲ್ಲಿ ಸಮಾಜದ ದುಂಡುಮೇಜಿನ ಸಭೆ ನಡೆಸಲಾಯಿತು. ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಯಿತು. ಅಂತಿಮ ಹೋರಾಟದ ದಿನಾಂಕ ನಿರ್ಧಾರ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ. ಸೆಪ್ಟೆಂಬರ್ 26ರಂದು ಶಿಗ್ಗಾಂವ್‌ನಲ್ಲಿರುವ ಸಿಎಂ ಮನೆ ಮುಂದೆ ಒಂದು ಲಕ್ಷ ಜನರು ಸೇರಿ‌ ಧರಣಿ ಸತ್ಯಾಗ್ರಹ ನಡೆಸುವುದು. ಬಳಿಕ ಅಕ್ಟೋಬರ್ 23ರಂದು ಬೆಂಗಳೂರಿನಲ್ಲಿ ವಿಧಾನಸೌಧದ ಮುಂದೆ 25 ಲಕ್ಷ ಜನರು ಸೇರಿಸಿ ಹಕ್ಕೋತ್ತಾಯ ಸಭೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಸರ್ಕಾರ ಸದ್ಯಕ್ಕೆ ಬಚಾವ್ ಆಗಿದೆ. ಆದರೆ ಬೆಂಗಳೂರಿನಲ್ಲಿ ನಡೆಯುವ ಸಭೆ ಸರಕಾರಕ್ಕೆ ತಲೆನೋವಾಗುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ | ಕಾಂಗ್ರೆಸ್‌ ಮಡಿಕೇರಿ ಚಲೋ ರದ್ದಾಗಿದ್ದು ಏಕೆ? ಇದರಲ್ಲಿ ಡಿ.ಕೆ. ಶಿವಕುಮಾರ್‌ ಪಾತ್ರವೇನು?

Exit mobile version