Site icon Vistara News

Karnataka Election: ಬಿಜೆಪಿ ಶಾಸಕ ಹರೀಶ್‌ ಪೂಂಜಾ ಪರ ಪ್ರಚಾರ ಮಾಡಿದ ಗ್ರಾಪಂ ಸಿಬ್ಬಂದಿ ಅಮಾನತು

GP Employee suspended for campaigning for BJP MLA Harish Poonja

GP Employee suspended for campaigning for BJP MLA Harish Poonja

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಮೇಲೆ ʻಕೊಲೆಗಾರʼನ ಆರೋಪ ಹೊರಿಸಿರುವ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್‌ ಪೂಂಜಾ (Harish Poonja) ಅವರ ವಿರುದ್ಧ ದಿನಕ್ಕೊಂದರಂತೆ ಅಲ್ಲಲ್ಲಿ ಪ್ರಕರಣಗಳು ದಾಖಲಾಗುತ್ತಿವೆ. ಇದರ ನಡುವೆ ಅವರ ಪರವಾಗಿ ಪ್ರಚಾರ ಮಾಡಿದವರಿಗೂ ಸಂಕಷ್ಟ ಎದುರಾಗಿದೆ. ಶಾಸಕ ಹರೀಶ್ ಪೂಂಜಾನ ಪರವಾಗಿ ಚುನಾವಣಾ ಪ್ರಚಾರ (Karnataka Election) ಮಾಡಿದ ಗ್ರಾಮ ಪಂಚಾಯತ್ ಸಿಬ್ಬಂದಿಯೊಬ್ಬರನ್ನು (Gram Panchayat employee) ಅಮಾನತು ಮಾಡಲಾಗಿದೆ. ಉಜಿರೆ ಗ್ರಾಮ ಪಂಚಾಯತ್ ಸಿಬ್ಬಂದಿ ನಾಗೇಶ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಪಿಡಿಓ ಪ್ರಕಾಶ್ ಶೆಟ್ಟಿ ನೊಚ್ಚ ಅವರು ಆದೇಶ ಹೊರಡಿಸಿದ್ದಾರೆ.

ನಾಗೇಶ್‌ ಅವರು ಹರೀಶ್‌ ಪೂಂಜಾ ಅವರ ಪರವಾಗಿ ಪ್ರಚಾರ ಮಾಡಿದ್ದಲ್ಲದೆ, ಪೂಂಜಾ ಅವರ ವಿಜಯೋತ್ಸವದಲ್ಲೂ ಭಾಗಿಯಾಗಿದ್ದರು. ಈ ಬಗ್ಗೆ ಸಾರ್ವಜನಿಕರಯ ಪಿಡಿಒಗೆ ದೂರು ನೀಡಿದ್ದರು. ಜತೆಗೆ ನಾಗೇಶ್‌ ಅವರು ಬಿಜೆಪಿ ಧ್ವಜವನ್ನು ಹಾರಿಸುವ, ಬೀಸುವ, ತಲೆಗೆ ಕೇಸರಿ ಶಾಲು ಕಟ್ಟಿಕೊಂಡಿರುವ ವಿಡಿಯೊ ಮತ್ತು ಫೋಟೊ ದಾಖಲೆಗಳನ್ನು ನೀಡಲಾಗಿತ್ತು. ಇದರ ಬಗ್ಗೆ ತನಿಖೆ ನಡೆಸಿದ ಪಿಡಿಒ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹುದ್ದೆಯಿಂದ ಅಮಾನತು ಮಾಡಲಾಗಿದೆ.

ಪೂಂಜಾ ವಿರುದ್ಧ ರಮಾನಾಥ ರೈ ವಾಗ್ದಾಳಿ

ಈ ನಡುವೆ, ಹರೀಶ್ ಪೂಂಜಾ ವಿರುದ್ಧ ಮಂಗಳೂರಿನಲ್ಲಿ ಮಾಜಿ ಸಚಿವ ರಮನಾಥ್ ರೈ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಕೊಲೆಗಾರ ಎಂದು ಹೇಳಿದ್ದನ್ನು ಖಂಡಿಸಿರುವ ಅವರು, ʻʻದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂಗಳು, ಮುಸ್ಲಿಮರ ಹತ್ಯೆಗಳಾಗಿವೆ. ಆದರೆ ಈ ಹತ್ಯೆ ನಡೆಸಿದವರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಯಾರೂ ಇಲ್ಲ. ಯಾವುದೇ ಆರೋಪ ಪಟ್ಟಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹೆಸರಿಲ್ಲ. ಆದ್ರೆ ಬಿಜೆಪಿ ಕಾರ್ಯಕರ್ತರಿದ್ದಾರೆ, ಎಸ್.ಡಿ‌ಪಿಐ ನವರಿದ್ದಾರೆ. ಈ ರೀತಿಯ ಧರ್ಮಾಧರಿತ ರಾಜಕೀಯ ಹತ್ಯೆಗಳ ಬಗ್ಗೆ ವಿಶೇಷ ತನಿಖೆ ಮಾಡಬೇಕು. ಇದಕ್ಕಾಗಿ ಎಸ್‌ಐಟಿ ನೇಮಿಸಲು ಸರ್ಕಾರಕ್ಕೆ ಒತ್ತಾಯಿಸುತ್ತೇವೆʼʼ ಎಂದು ಹೇಳಿದರು.

ʻʻಬಿಜೆಪಿ ಮತ್ತು ಇತರ ಕೆಲವರ ಮೇಲಾಟದಲ್ಲಿ ಅಮಾಯಕ ಜೀವಗಳು ಬಲಿಯಾಗಿವೆʼʼ ಎಂದಿರುವ ರಮಾನಾಥ ರೈ ಅವರು, ಹರೀಶ್ ಪೂಂಜಾ ಹೇಳಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹರೀಶ್‌ ಪೂಂಜಾ ಅವರು ಇತ್ತೀಚೆಗೆ ವಿಜಯೋತ್ಸವ ಸಂದರ್ಭದಲ್ಲಿ ತನ್ನ ವಿರುದ್ಧ ಪ್ರಚಾರ ನಡೆಸಿದ ಹಿಂದೂ ಸಂಘಟನೆಗಳ ನಾಯಕರನ್ನು ಪ್ರಶ್ನೆ ಮಾಡುವ ಭರದಲ್ಲಿ ʻಹಿಂದೂ ಕಾರ್ಯಕರ್ತರ ಹತ್ಯೆಗೆ ಕಾರಣರಾದ ಸಿದ್ದರಾಮಯ್ಯನವರ ಪರವಾಗಿ, ಹಿಂದು ಕಾರ್ಯಕರ್ತರ ಹತ್ಯೆ ಮಾಡಿದ ಸಿದ್ದರಾಮಯ್ಯರ ಪರವಾಗಿ ಮತ ಕೇಳಿದ್ದೀರಲ್ಲಾʼʼ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ಇದರ ವಿರುದ್ಧ ಕಾಂಗ್ರೆ ಹಲವು ಕಡೆಗಳಲ್ಲಿ ದೂರು ದಾಖಲಿಸಿ ಎಫ್‌ಐಆರ್‌ ಆಗಿದೆ. ಅದರ ಜತೆಗೆ ಮಾನನಷ್ಟ ಮೊಕದ್ದಮೆಯನ್ನೂ ಹೂಡಲಾಗಿದೆ.

ಇದನ್ನೂ ಓದಿ: Karnataka Politics: ದ್ವೇಷ ಭಾಷಣ; ಬಿಜೆಪಿ ಶಾಸಕರಾದ ಅಶ್ವತ್ಥನಾರಾಯಣ, ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್‌

Exit mobile version