ಹಾವೇರಿ: ನಾನು ಸತ್ತ ಮೇಲೆ ನನ್ನ ಹೆಣವನ್ನು ಇದೇ ಮಣ್ಣಲ್ಲಿ ಹೂಳಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ವೇದಿಕೆಯಲ್ಲಿ ಕಣ್ಣೀರು ಹಾಕಿದ ಪ್ರಸಂಗಕ್ಕೆ ಕಂದಾಯ ಸಚಿವರ ಗ್ರಾಮ ವಾಸ್ತವ್ಯ (Grama vastavya) ಕಾರ್ಯಕ್ರಮ ಸಾಕ್ಷಿಯಾಯಿತು.
ತಮ್ಮ ತವರು ಕ್ಷೇತ್ರ ಶಿಗ್ಗಾಂವಿಗೆ ಸೇರಿದ, ಶ್ರೇಷ್ಠ ಸಂತ ಕನಕದಾಸ ಜನ್ಮ ಸ್ಥಳವಾದ ಬಾಡದಲ್ಲಿ ನಡೆದ ಕಂದಾಯ ಸಚಿವರ ೧೩ನೇ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿ, ಕ್ಷೇತ್ರದ ಜನರ ಎದುರು ಭಾವುಕ ನುಡಿಗಳನ್ನಾಡಿದರು. ಇದು ಕನಕದಾಸರ ಪುಣ್ಯಭೂಮಿ. ಅವರ ಮಹಿಮೆ ಇಲ್ಲಿಂದಲೇ ಪ್ರಾರಂಭವಾಗಿದೆ. ಇದು ಪರಿವರ್ತನೆಯ ಭೂಮಿ. ಈ ಕಾರ್ಯಕ್ರಮ ಮಾಡುವುದರಿಂದ ಕ್ಷೇತ್ರದ ಮುಂದಿನ ಭವ್ಯ ಭವಿಷ್ಯ ಮತ್ತಷ್ಟು ಪ್ರಗತಿಯಾಗಲಿಗಲಿದೆ ಎಂದು ಹೇಳಿದರು.
ಬಡ ಜನರ, ರೈತರ ಕಲ್ಯಾಣಕ್ಕಾಗಿ ಯೋಜನೆ ಮುಟ್ಟಿಸಿದಾಗ ಸುಭಿಕ್ಷ ಕ್ಷೇತ್ರ ಆಗಲಿದೆ. ಈ ಕೆಲಸವನ್ನು ಮಾಡಿಯೇ ತೀರುತ್ತೇನೆ ಎಂದು ಪಣ ತೊಡುತ್ತೇನೆ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದದಿಂದ ನಾಡಿನ ಸೇವೆ ಮಾಡುವ ಸೌಭಾಗ್ಯ ಸಿಕ್ಕಿದೆ. ರಾಜ್ಯದ ನಾನಾ ಕಡೆ ಹೋದಾಗ ಸಿಗುವ ಸ್ವಾಗತ ನೋಡಿದಾಗ ನೀವು ನೆನಪಾಗುತ್ತೀರಿ ಎಂದು ಸಿಎಂ ಭಾವುಕರಾಗಿ ಹೇಳಿದರು.
ಇದನ್ನೂ ಓದಿ | Karnataka Election | ಮತಾಂಧ ಸಿ.ಟಿ. ರವಿ ನನಗೆ ಮುಸಲ್ಮಾನರ ಹೆಸರಿಡ್ತಾನೆ, ಸಿದ್ರಾಮುಲ್ಲಖಾನ್ ಅನ್ನೋಕೆ ಇವನ್ಯಾವ ಗಿರಾಕಿ: ಸಿದ್ದು
ನಿಮ್ಮ ಋಣದಲ್ಲಿದ್ದೇನೆ
ಈ ಸ್ಥಾನ ಗೌರವ ನನಗೆ ಸಿಗಬೇಕಾದ್ದಲ್ಲ. ಕ್ಷೇತ್ರದ ಜನರಿಗೆ ಸಿಗಬೇಕಾಗಿದ್ದು ಎಂದು ಅನ್ನಿಸುತ್ತಿದೆ. ನಿಮ್ಮ ಪ್ರೀತಿ ನೆನಪಾಗುತ್ತದೆ. ಎಲ್ಲ ಗ್ರಾಮಗಳಿಗೆ ಅನೇಕ ಸಲ ಹೋಗಿದ್ದೇನೆ. ಆಗೆಲ್ಲ ನೀವು ರೊಟ್ಟಿ, ಬುತ್ತಿ, ಹೋಳಿಗೆ, ಸೀಕರಣಿಯನ್ನು ಉಣ್ಣಿಸಿದ್ದೀರಿ. ಎಷ್ಟೊಂದು ಪ್ರೀತಿ ವಿಶ್ವಾಸ ತೋರಿಸಿದ್ದೀರಿ. ಅದರ ಮುಂದೆ ಎಷ್ಟು ಕೆಲಸ ಮಾಡಿದರೂ ಕಡಿಮೆ. ನಿಮ್ಮ ಋಣದಲ್ಲಿದ್ದೇನೆ. ಹೃದಯ ಸ್ಥಾನದಲ್ಲಿ ನೀವಿದ್ದೀರಿ. ಮುಂದೆ ಕೂಡ ನಿಮ್ಮ ಆಶಯದಂತೆ ಕೆಲಸ ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಕ್ಷೇತ್ರದ ಜನತೆಗೆ ಆಶ್ವಾಸನೆ
ನನ್ನ ಕ್ಷೇತ್ರದಲ್ಲಿ ಪ್ರತಿಯೊಂದು ಮನೆಗೆ ನಳ ಕೊಡುವ ವ್ಯವಸ್ಥೆ ಆಗುತ್ತಲಿದೆ. ಯಾವುದು ಅಸಾಧ್ಯವೋ ಅದನ್ನು ಸಾಧ್ಯ ಮಾಡಿ ತೋರಿಸುವುದು ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು. ಪ್ರತಿ ಮನೆಗೆ ನೀರು ಕೊಡುವ ವ್ಯವಸ್ಥೆ ಮಾಡುತ್ತಿದ್ದೇವೆ. ಹತ್ತು ಸಾವಿರ ಮಹಿಳೆಯರಿಗೆ ಇಲ್ಲಿ ಕೆಲಸ ಸಿಗಲಿದೆ. ಮಳೆಗೆ ಬಿದ್ದ ಮನೆಗಳಿಗೆ ಧನಸಹಾಯ ನೀಡುವ ಯೋಜನೆಯನ್ನು ಮಾಡುತ್ತೇನೆ. ಮನೆ ಬಿದ್ದವರಿಗೆಲ್ಲರಿಗೂ ಮನೆಯನ್ನು ಕೊಡುತ್ತೇನೆ. 15 ದಿನದಲ್ಲಿ ನಾನೇ ಬಂದು ಎಲ್ಲರಿಗೂ ಮನೆ ಕೊಡುತ್ತೇನೆ. ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ಈ ಪ್ರಯತ್ನ ಮಾಡುತ್ತಿದ್ದೇನೆ. ಹೊಲಕ್ಕೆ ಹೋಗುವ ಎಲ್ಲ ರಸ್ತೆಗಳನ್ನು ಏಪ್ರಿಲ್ ಒಳಗೆ ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಇದೇ ವೇಳೆ ವೇದಿಕೆಯಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪ್ರಮಾಣಪತ್ರ, ಸೌಲಭ್ಯಗಳನ್ನು ಸಿಎಂ ವಿತರಣೆ ಮಾಡಿದರು.
ಇದನ್ನೂ ಓದಿ | Grama vastavya | ನನ್ನ ಗ್ರಾಮ ವಾಸ್ತವ್ಯ ಬಂದ ಸಿದ್ದ ಹೋದ ಸಿದ್ದ ಅನ್ನೋ ಹಾಗಲ್ಲ, ಸಮಸ್ಯೆಗೆ ಅಲ್ಲಲ್ಲೇ ಪರಿಹಾರ: ಆರ್. ಅಶೋಕ್