ಹಾವೇರಿ: ಇದು ನನ್ನ 13ನೇ ಗ್ರಾಮ ವಾಸ್ತವ್ಯ. ಜಿಲ್ಲಾಧಿಕಾರಿಗಳು 350, ಎಸಿಗಳು 351 ಕಡೆ, ತಹಸೀಲ್ದಾರರು 2089 ಕಡೆ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ನನ್ನ ಗ್ರಾಮ ವಾಸ್ತವ್ಯ (Grama vastavya) ಅಂದರೆ ಬಂದ ಸಿದ್ದ ಹೋದ ಸಿದ್ದ ಅನ್ನೋ ಹಾಗಲ್ಲ. ಸಮಸ್ಯೆಗಳಿಗೆ ಅಲ್ಲಲ್ಲೇ ಪರಿಹಾರ ಕೊಟ್ಟಿದ್ದೇವೆ. ೩ ಲಕ್ಷದ ೩೮ ಸಾವಿರ ೮೭೬ ಅರ್ಜಿಗಳ ವಿಲೇವಾರಿ ಆಗಿ ಪರಿಹಾರ ಸಿಕ್ಕಿದೆ: ಹೀಗೆಂದು ಎದೆ ತಟ್ಟಿ ಹೇಳಿಕೊಂಡರು ಕಂದಾಯ ಸಚಿವ ಆರ್. ಅಶೋಕ್.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಕ್ಷೇತ್ರ ಶಿಗ್ಗಾಂವಿಗೆ ಸೇರಿದ, ಶ್ರೇಷ್ಠ ಸಂತ ಕನಕದಾಸ ಜನ್ಮ ಸ್ಥಳವಾದ ಬಾಡದಲ್ಲಿ ನಡೆದ ಕಂದಾಯ ಸಚಿವರ ೧೩ನೇ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸಂಭ್ರಮದಲ್ಲಿ ಅಶೋಕ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
ʻʻಗ್ರಾಮ ವಾಸ್ತವ್ಯ ಎನ್ನುವುದು ಅಧಿಕಾರಿಗಳು ಮತ್ತು ಜನರ ನಡುವಿನ ಸಂಪರ್ಕ ಸೇತುವೆಯಾಗಿದೆ. ನಾವು 24 ಗಂಟೆಗಳ ಕಾಲ ಇದೆ ಊರಿನಲ್ಲಿ ಇರುತ್ತೇವೆ. 28 ಸಾವಿರ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಸೌಲಭ್ಯ ವಿತರಣೆ ಮಾಡುತ್ತೇವೆ. ಕಂದಾಯ ಇಲಾಖೆಯ ದಾಖಲೆ, ಪಿಂಚಣಿ ಸೇರಿದಂತೆ ಜನರ ಸಮಸ್ಯೆಗೆ ಪರಿಹಾರ ನೀಡುತ್ತೇವೆ. ಈ ಮೂಲಕ ಜನರ ನಂಬಿಕೆ ಗಳಿಸುತ್ತೇವೆʼʼ ಎಂದರು ಆರ್. ಅಶೋಕ್.
ಪರಿಹಾರದ ಹೋಲಿಕೆ ಮಾಡಿದ ಸಚಿವರು
ಮಳೆ ಹಾನಿ ಮತ್ತಿತರ ಸಮಸ್ಯೆಗಳು ಬಂದಾಗ ಹಿಂದೆ ಪರಿಹಾರಕ್ಕೆ ಕನಿಷ್ಠ ಎಂಟು ತಿಂಗಳು ಕಾಯಬೇಕಾಗಿತ್ತು. ಈಗ ಕೇವಲ ಒಂದೇ ತಿಂಗಳಲ್ಲಿ ಪರಿಹಾರ ನೇರವಾಗಿ ಖಾತೆಗೆ ಹಾಕಲಾಗುತ್ತದೆ. ಮನೆ ನಾಶವಾದರೆ ಹಿಂದೆ 95 ಸಾವಿರ ರೂ. ಪರಿಹಾರ ಸಿಕ್ತಿತ್ತು. ಈಗ ನಾವು 5 ಲಕ್ಷ ರೂ. ಕೊಡುತ್ತಿದ್ದೆವು. ಹಿಂದೆ ಕಟ್ಟಿಕೊಡುತ್ತಿದ್ದ ಮನೆಗಳು ಉದ್ಘಾಟನೆಗೂ ಮೊದಲೇ ಬೀಳ್ತಾ ಇತ್ತು ಎಂದು ಸಚಿವ ಅಶೋಕ್ ಸಭೆಯಲ್ಲಿ ವಿವರಿಸಿದರು.
ಆ್ಯಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಹಿಂದೆ ಸರಕಾರ 3 ಸಾವಿರ ಕೊಡುತ್ತಿತ್ತು. ಅದನ್ನು ನಮ್ಮ ಸಿಎಂ ೧೦ ಸಾವಿರ ರೂ.ಗಳಿಗೆ ಏರಿಸಿದ್ದಾರೆ. ಅವರಿಗೆ ನಿವೇಶನ ಕೂಡಾ ಕೊಡಲಾಗುತ್ತಿದೆ. ನಮ್ಮದು ಪ್ರಚಾರ ಕಡಿಮೆ ಕೆಲಸ ಜಾಸ್ತಿ ಎಂದರು ಅಶೋಕ್.
ಅಹಿಂದಾ ಅಂದವರು ಕುರಿಯೂ ಕೊಡಲಿಲ್ಲ!
ಗ್ರಾಮ ವಾಸ್ತವ್ಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಕಾಂಗ್ರೆಸ್‌ನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡರು.
ʻʻಅಹಿಂದಾ ಅಹಿಂದಾ ಎಂದು ಹೇಳಿಕೊಂಡವರು ಯಾರಿಗೂ ಒಂದು ಕುರಿ ಕೊಡಲಿಲ್ಲ. ಕುರಿ ಕಾಯುವವನಿಗೆ ಹಣ ಕೊಟ್ಟವರು ಬೊಮ್ಮಾಯಿಯವರು. ಜಗತ್ತಿನಲ್ಲಿ ಯಾವ ದೇಶವೂ ಉಚಿತವಾಗಿ ಕೋವಿಡ್ ವ್ಯಾಕ್ಸಿನ್ ಕೊಟ್ಟಿಲ್ಲ. ನಮ್ಮ ದೇಶದಲ್ಲಿ ಕೊಟ್ಟಿದ್ದೇವೆ. ಕೋವಿಡ್ ನಿರ್ವಹಣೆಯಲ್ಲಿ ಭಾರತ ನಂಬರ್ ಒನ್ ಆಗಿದೆʼʼ ಎಂದು ಹೇಳಿದರು.
ʻʻಮೊದಲು ಸರಕಾರದ ಯಾವ ಯೋಜನೆಗಳೂ ಜನರಿಗೆ ಮುಟ್ಟುತ್ತಿರಲಿಲ್ಲ. ಇವತ್ತು ಡಿಬಿಟಿ ಮೂಲಕ ನೇರವಾಗಿ ಹಣ ಸಂದಾಯ ಪದ್ಧತಿ ಪ್ರಾರಂಭವಾಗಿದೆ. ಯುಪಿಎ ಕಾಲದಲ್ಲಿ ದಿನಕ್ಕೊಂದು ಹಗರಣ ಬರುತ್ತಿತ್ತು. ಈಗ ಹಗರಣ ಮುಕ್ತ ಸರಕಾರʼʼ ಎಂದರು ಪ್ರಹ್ಲಾದ ಜೋಶಿ.
ಸಂಭ್ರಮದ ಸ್ವಾಗತ
ಬಾಡ ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ಕಂದಾಯ ಸಚಿವರು ಕನಕದಾಸರ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಸಚಿವರನ್ನು ಎತ್ತಿನಗಾಡಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಎತ್ತಿನ ಬಂಡಿಯಲ್ಲಿ ಬಾರಕೋಲು ಕೈಯಲ್ಲಿ ಹಿಡಿದು ಸಾಗುವ ದೃಶ್ಯ ಗಮನ ಸೆಳೆಯಿತು. ಕಲಶ ಕುಂಭ ಹೊತ್ತ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಡೊಳ್ಳು ಕುಣಿತ ಮೆರವಣಿಗೆಯ ಮೆರುಗು ಹೆಚ್ಚಿಸಿತು.
ಇದನ್ನೂ ಓದಿ | Karnataka Elections | ಹತ್ತಕ್ಕೂ ಅಧಿಕ ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿ? ಅಶೋಕ್ ಹೇಳಿದ್ದೇನು?