Site icon Vistara News

Grama vastavya | ಮಕ್ಕಳಿಗೆ ಬದುಕಿನ ಪಾಠ ಹೇಳಿದರು, ಅವರ ಜತೆಗೇ ಊಟ ಮಾಡಿದರು ಸಿಂಪಲ್‌ ಸಿಎಂ ಬೊಮ್ಮಾಯಿ

CM Dinner in Bada

ಹಾವೇರಿ: ಕನಕದಾಸರ ಜನ್ಮಸ್ಥಳವಾದ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮ ಶನಿವಾರ ನಿಜಕ್ಕೂ ಧನ್ಯತೆಯ ಕ್ಷಣಗಳನ್ನು ಅನುಭವಿಸಿತು. ಕಂದಾಯ ಸಚಿವ ಆರ್‌. ಅಶೋಕ್‌ ಅವರ ಕನಸಿನ ಗ್ರಾಮ ವಾಸ್ತವ್ಯ ಒಂದು ಕಡೆ ಸಂಭ್ರಮವನ್ನು ತುಂಬಿದರೆ ಇನ್ನೊಂದು ಕಡೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರೇ ಆ ಊರಿನ ಮಗನಂತೆ ಸುತ್ತಾಡಿದರು, ಜನರೊಂದಿಗೆ, ಮಕ್ಕಳೊಂದಿಗೆ ಬೆರೆತರು.

ಗ್ರಾಮ ವಾಸ್ತವ್ಯದ ಉದ್ಘಾಟನಾ ವೇದಿಕೆಯಲ್ಲಿ ಅತ್ಯಂತ ಭಾವುಕರಾದ ಮುಖ್ಯಮಂತ್ರಿಗಳು, ನಾನು ಇದೇ ಮಣ್ಣಲ್ಲಿ ಮಣ್ಣಾಗಬೇಕು ಎಂದಿದ್ದು ಎಲ್ಲರ ಕಣ್ಣೂ ಹನಿಗೂಡುವಂತೆ ಮಾಡಿತು. ಅದೇ ಹೊತ್ತಿಗೆ ಹಲವು ವಿಶೇಷ ಕಾರ್ಯಕ್ರಮಗಳನ್ನೂ ಅವರು ಘೋಷಿಸಿದರು.

ಊಟದಲ್ಲಿ ಸಿಎಂಗೆ ಸಾಥ್‌ ನೀಡಿದ ಗ್ರಾಮ ವಾಸ್ತವ್ಯದ ರೂವಾರಿ ಕಂದಾಯ ಸಚಿವ ಆರ್‌. ಅಶೋಕ್‌ ಮತ್ತು ಕಸಾಪ ಅಧ್ಯಕ್ಷರಾದ ಮಹೇಶ್‌ ಜೋಶಿ

ಮುಂದೆ ಸಾಂಸ್ಕೃತಿ ಕಾರ್ಯಕ್ರಮ ವೀಕ್ಷಣೆಯ ವೇಳೆಯೂ ಅವರು ಯಾವ ಹಮ್ಮು ಬಿಮ್ಮೂ ಮೆರೆಯದೆ ತಾನೊಬ್ಬ ಸಿಂಪಲ್‌ ಸಿಎಂ ಎನ್ನುವುದನ್ನು ನಿರೂಪಿಸಿದರು. ಕೆಲವೊಮ್ಮೆ ಮುಖ್ಯಮಂತ್ರಿ ಎಂಬುದನ್ನೂ ಮರೆತು ನನ್ನ ಕ್ಷೇತ್ರದಲ್ಲಿ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ನಡೆಯುತ್ತಿದೆ, ನಾನು ಇಲ್ಲಿನ ಒಬ್ಬ ಶಾಸಕನಾಗಿ ಅವರೊಂದಿಗೆ ಇರಬೇಕು ಎಂಬಷ್ಟು ಪ್ರೀತಿ ತೋರಿದರು.

ವಸತಿ ಶಾಲೆ ಮಕ್ಕಳ ಜತೆ ಸಂವಾದ
ಬಾಡದಲ್ಲಿರುವ ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲೆ ಮಕ್ಕಳ ಜೊತೆ ಸಂವಾದ ನಡೆಸಿದ ಸಿಎಂ ಬದುಕಿನ ಪಾಠಗಳನ್ನು ಹೇಳಿದರು. ʻʻಎಲ್ಲರಿಗೂ ನಮಸ್ಕಾರʼ ಎಂದು ಮಕ್ಕಳನ್ನು ಮಾತನಾಡಿಸಿದ ಸಿಎಂ, ʻʻಮಕ್ಕಳಿಗೆ ಪಾಠ ಏನು ಬೇಡ, ಬೆಳಗ್ಗೆಯಿಂದ ಸಾಯಂಕಾಲದ ವರೆಗೆ ಪಾಠ ಕೇಳ್ತಾರೆʼʼ ಎಂದರು.

ʻʻಊಟ ಚೆನ್ನಾಗಿದೆನಾ, ಪಾಠ ಚೆನ್ನಾಗಿ ಮಾಡ್ತಾರಾʼʼ ಎಂಬ ಸಿಎಂ ಪ್ರಶ್ನೆಗೆ ಮಕ್ಕಳು, ʻಎಸ್ ಸರ್ʼ ಎಂದರು. ʻʻನೀವೆಲ್ಲ ಅದೃಷ್ಟವಂತ ಮಕ್ಕಳುʼʼ ಎಂದರು.

ಮುಂದೆ ಏನಾಗಬೇಕು ಎಂಬ ಕನಸಿದೆ ಎಂಬ ಸಿಎಂ ಪ್ರಶ್ನೆಗೆ, ಡಾಕ್ಟರ್, ತಹಸೀಲ್ದಾರ್‌, ಐಎಎಸ್‌ ಎಂದ ಹೆಣ್ಣು ಮಕ್ಕಳು ಹೇಳಿದರೆ, ಸೇನೆಗೆ ಸೇರ್ತೀವಿ ಎಂದರು ಹುಡುಗರು. ʻʻನಿಮ್ಮ ಮೇಲೆ ನಿಮಗೆ ನಂಬಿಕೆ ಇರಬೇಕು, ಅಂದಾಗ ಯಶಸ್ಸು ಸಾಧ್ಯʼʼ ಎಂದು ಕಿವಿ ಮಾತು ಹೇಳಿದರು ಸಿಎಂ.

ಮಕ್ಕಳ ಜತೆ ಸಿಎಂ ಸಂವಾದ

ಮಕ್ಕಳಿಗೆ ಗಣಿತದ ಪಾಠ ಹೇಳಿದ ಸಿಎಂ
ʻʻಎರಡರಡ್ಲೆ ನಾಲ್ಕು ಯಾಕೆ ಅಂತಾ ಚಿಂತನೆ ಮಾಡಬೇಕು. ಆಗ ಬದುಕಿನ ಲೆಕ್ಕವೂ ಸಿಗ್ತದೆ. ಯಶಸ್ಸೂ ಸಾಧ್ಯʼʼ ಎಂದ ಮುಖ್ಯಮಂತ್ರಿಗಳು, ಕಂಠಪಾಠ ಮಾಡದೆ ಪರೀಕ್ಷೆ ಬರೆಯಲು ಸಾಧ್ಯವಾದರೆ ಅದು ಸಕ್ಸಸ್ ಎಂದರು.

ʻʻಒಮ್ಮೆ ವಿದ್ಯಾರ್ಥಿ ಆದ್ರೆ ಜೀವನದ ಕೊನೆಯವರೆಗೂ ವಿದ್ಯಾರ್ಥಿ. ನಾನೂ ವಿದ್ಯಾರ್ಥಿ ನೀವೂ ವಿದ್ಯಾರ್ಥಿʼʼ ಎಂದು ಸಮೀಕರಿಸಿದರು.

ಮಕ್ಕಳ ಜತೆಗೇ ಭೋಜನ ಸವಿದರು
ಬಾಡ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ಮಕ್ಕಳ ಜೊತೆಗೇ ಊಟ ಮಾಡಿದರು ಸಿಎಂ. ಶಾಲೆಯ ೫೦೦ ವಿದ್ಯಾರ್ಥಿಗಳ ಜೊತೆ ಕುಳಿತು ಸಿಎಂ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ ಉತ್ತರ ಕರ್ನಾಟಕ ಶೈಲಿಯ ಕಡಕ್ ಜೋಳದ ರೊಟ್ಟಿ ಊಟ ಸವಿದರು. ಊಟಕ್ಕೆ ಮುನ್ನ ಸಿಎಂ ಭಕ್ತಿಯಿಂದ ಮಾಡಿದ ಪ್ರಾರ್ಥನೆ ಎಲ್ಲರ ಗಮನ ಸೆಳೆಯಿತು.

ವಸತಿ ಶಾಲೆಯಲ್ಲಿ ಶಾಲೆಯ ಮೆನುವಿನಂತೆ ಬಿಸಿ ರೊಟ್ಟಿ ಹಾಗೂ ಕಡಕ್ ರೊಟ್ಟಿ, ಚಪಾತಿ, ಮೊಡಕೆ ಒಡೆದ ಹೆಸರುಕಾಳು ಪಲ್ಯೆ, ಬದನೆ ಕಾಯಿ ಪಲ್ಯೆ, ಅನ್ನ ಸಾಂಬಾರಿನ ಜೊತೆಗೆ ವಿಶೇಷವಾಗಿ ಗೋಧಿ ಪಾಯಸ, ಬಜ್ಜಿ ಸವಿದರು. ಬಳಿಕ ಬಾಳೆಹಣ್ಣು ಸವಿಯುತ್ತಾ ಮಕ್ಕಳೊಂದಿಗೆ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು.

Exit mobile version