ರಾಜು ಪಾಟೀಲ್, ವಿಸ್ತಾರ ನ್ಯೂಸ್, ವಿಜಯಪುರ
ಈ ಅಜ್ಜಿಯನ್ನು ಕಂಡ್ರೆ ಮನೆ ಮಂದಿ ಮಾತ್ರವಲ್ಲ ಅಕ್ಕಪಕ್ಕದವರಿಗೂ ಅಚ್ಚು ಮೆಚ್ಚು. ಸದಾ ಲವಲವಿಕೆಯ ಜೀವ ಅದು. ಸದಾ ನಗುನಗುತ್ತಾ, ನಗಿಸುತ್ತಾ, ಎಲ್ಲರನ್ನೂ ಮಾತನಾಡಿಸುತ್ತಾ ಖುಷಿಯಾಗಿರುತ್ತಾರೆ. ಇಂಥ ಅಜ್ಜಿಗೆ ವಯಸ್ಸು ಮಾತ್ರ ೧೦೫ ದಾಟಿದೆ. ಶತಾಯುಷಿ ಅಜ್ಜಿ ನಮ್ಮ ನಡುವೆ ಇದ್ದಾರೆ ಅನ್ನೋದೇ ಅವರಿಗೆ ಖುಷಿ. ಇಂಥ ಅಜ್ಜಿ ಇತ್ತೀಚೆಗೆ ಮನೆಯಲ್ಲಿ ಮಂಚದ ಮೇಲಿಂದ ಕೆಳಗಿಳಿಯುವಾಗ ಕುಸಿದು ಕುಳಿತ ಕಾರಣದಿಂದಾಗಿ ಸೊಂಟದ ಕೀಲು ಸಣ್ಣಗೆ ಮುರಿದಿತ್ತು. ಸಾಮಾನ್ಯವಾಗಿ ಈ ವಯಸ್ಸಲ್ಲಿ ಯಾರಿಗಾದರೂ ಆಪರೇಷನ್ ಮಾಡಲು ವೈದ್ಯರೇ ಹಿಂದೇಟು ಹಾಕುತ್ತಾರೆ. ಅದರೆ, ಇವರ ಲವಲವಿಕೆ ನೋಡಿ ವೈದ್ಯರಿಗೇ ಧೈರ್ಯ ಬಂದಿದೆ. ಅವರು ಶತಾಯುಷಿ ಅಜ್ಜಿಗೆ ಯಶಸ್ಚಿ ಶಸ್ತ್ರಚಿಕಿತ್ಸೆ ಸಹ ಮಾಡಿದ್ದಾರೆ. ಈಗ ಈ ಅಜ್ಜಿ ಆಸ್ಪತ್ರೆಯಿಂದ ಬಿಡುಗಡೆಯಾಗಿದೆ ಮೊದಲಿನಷ್ಟೇ ಲವಲವಿಕೆಯಿಂದ ಇದ್ದಾರೆ. ಹಾಗಿದ್ದರೆ ಯಾರು ಈ ಅಜ್ಜಿ? ಹೇಗಿದ್ದಾರೆ ಅವರು? ನೋಡೋಣ ಬನ್ನಿ (Grand mother story).
ಇವರ ಹೆಸರು ಈರಮ್ಮ ಗುರುಪಾದಯ್ಯ ಹಿರೇಮಠ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಮುಳ್ಳಾಳ ಗ್ರಾಮದವರು. ಕಳೆದ ಸುಮಾರು ೨೦ ವರ್ಷದಿಂದ ವಿಜಯಪುರದ ಜಲನಗರದಲ್ಲಿರುವ ಮಗಳ ಮನೆಯಲ್ಲಿ ವಾಸವಾಗಿದ್ದಾರೆ. ಅಜ್ಜಿಗೆ ಸಂಗಮ್ಮ ಹಿರೇಮಠ ಒಬ್ಬರೇ ಮಗಳು.
ವಯಸ್ಸು ೧೦೫ ಆಗಿದ್ದರೂ ಮುಖದ ಮೇಲೊಂದಿಷ್ಟು ನೆರಿಗೆಗಳು ಮೂಡಿದ್ದು ಬಿಟ್ಟರೆ ಕಳೆಯೇನೂ ಕುಂದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಮುಖದ ಮೇಲಿನ ನಗೆ ಮಾಸಿಲ್ಲ. ಇಂತಹ ಶತಾಯುಷಿ ಈರಮ್ಮ ಮನೆಮಂದಿಗೆಲ್ಲ ಅಚ್ಚುಮೆಚ್ಚು ಮತ್ತು ಮನೆಮಂದಿಯೂ ಸಹ ಈ ಶತಾಯುಷಿ ಅಜ್ಜಿಯನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.
ಈ ಅಜ್ಜಿ ಕಳೆದ ಜನವರಿ ೧೯ರಂದು ಮನೆಯಲ್ಲಿದ್ದಾಗ ಮಂಚದ ಮೇಲಿಂದ ಇಳಿಯುವಾಗ ಕುಸಿದು ಕುಳಿತುಬಿಟ್ಟರು. ವಯೋಸಹಜ ಕಾರಣದಿಂದ ಮೈಯಲ್ಲಿನ ಮೂಳೆಗಳು ಸಹ ಸವೆದಿದ್ದ ಕಾರಣ ಇವರ ಹಿಪ್ ಜಾಯಿಂಟ್ ಅಂದ್ರೆ ಸೊಂಟದ ಕೀಲು ಹಾನಿಗೀಡಾಗಿತ್ತು.
ಕೂಡಲೇ ಮನೆಯ ಹತ್ತಿರದಲ್ಲಿರುವ ಸ್ಥಳೀಯ ಹಾಗೂ ಕೌಟುಂಬಿಕ ವೈದ್ಯ ಡಾ.ಶಿವಾನಂದ ಬೂದಿಯವರಿಗೆ ತೋರಿಸಿದಾಗ, ಅಜ್ಜಿಯನ್ನು ಆರ್ಥೋಪೆಡಿಕ್ ಡಾಕ್ಟರ್ ಬಳಿ ಕಳುಹಿಸಿದ್ದಾರೆ. ಹತ್ತಿರದ ಖಾಸಗಿ ಆಸ್ಪತ್ರೆಯಾದ ಶ್ರೀ ಭಾಗ್ಯವಂತಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ಶತಾಯುಷಿ ಅಜ್ಜಿಗೆ ಅಗತ್ಯ ತಪಾಸಣೆ ನಡೆಸಿದ ವೈದ್ಯರು, ಶಸ್ತ್ರಚಿಕಿತ್ಸೆಯ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಮನೆಮಂದಿ ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ ನಂತರ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ.
ಈ ಇಳಿವಯಸ್ಸಿನಲ್ಲಿ ಈರಮ್ಮ ಮತ್ತು ಆಕೆಯ ಮನೆಯವರು ಶಸ್ತ್ರಚಿಕಿತ್ಸೆ ಮಾಡಲು ಒಪ್ಪಿಗೆ ಸೂಚಿಸಿದ್ದು ಪ್ರಶಂಸನೀಯ ಅಂತಾರೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು. ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಒಪ್ಪಿದ್ದು ನಮ್ಮ ಪುಣ್ಯ ಅಂತಾರೆ ಮನೆಯವರು.
ಈ ವಯಸ್ಸಿನಲ್ಲಿ ಮೂಳೆ ಸವೆತ ಸರ್ವೇಸಾಮಾನ್ಯ. ಹಾಗಾಗಿ ಇಂತಹ ಸಂದರ್ಭಗಳು ಎದುರಾಗುತ್ತವೆ. ಇಳಿವಯಸ್ಸಿನವರಿಗೆ ದೇಹವೂ ಕೃಶವಾಗಿರುತ್ತೆ. ಶಸ್ತ್ರಕ್ರಿಯೆಗೊಳಪಡಿಸುವಾಗ ವೃತ್ತಿಸಹಜವಾದ ಕೆಲ ರಿಸ್ಕ್‌ಗಳು ಸಹ ಇರುತ್ತವೆ. ನಮ್ಮ ಮೇಲೆ ವಿಶ್ವಾಸವಿಟ್ಟು ಶಸ್ತ್ರಚಿಕಿತ್ಸೆಗೆ ಸಮ್ಮತಿ ಸೂಚಿಸಿದ ಕಾರಣ ಮತ್ತು ಅಜ್ಜಿಯೂ ಸಹ ಸೂಕ್ತರೀತಿಯಲ್ಲಿ ಸ್ಪಂದಿಸಿದ ಕಾರಣ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಅಂತಾರೆ ವೈದ್ಯರು.
ಆಸ್ಪತ್ರೆಯಲ್ಲಿ ಇದ್ದಷ್ಟೂ ದಿನವೂ ಈ ಶತಾಯುಷಿ ಅಜ್ಜಿ ಅಲ್ಲಿನ ಎಲ್ಲರ ಫೇವರಿಟ್ ಅಜ್ಜಿ. ಸಿಬ್ಬಂದಿ ಮಾತ್ರವಲ್ಲದೇ, ಅಕ್ಕಪಕ್ಕದ ರೂಮುಗಳಲ್ಲಿನ ರೋಗಿಗಳು, ಅವರನ್ನು ನೋಡಿಕೊಳ್ಳಲು ಬಂದವರೆಲ್ಲ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದರು. ಅವರೆಲ್ಲ ಅಜ್ಜಿಯ ಉತ್ಸಾಹವನ್ನು ಕಂಡು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ಇದನ್ನೂ ಓದಿ | Motivational story : ಮಗನ ಮದುವೆಯ ದಿನ ಅಪ್ಪ ಹೇಳಿದ ಆ ಮಾತು ನೀವೂ ಕೇಳಿಸಿಕೊಳ್ಳಬೇಕು!