ಬೆಂಗಳೂರು: 2023ರ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಭರ್ಜರಿ ಸಿದ್ಧತೆಗೆ ಚಾಲನೆ ನೀಡಲಾಗಿದೆ. ರಾಜ್ಯಾದ್ಯಂತ ಪ್ರವಾಸದ ಮೂಲಕ ಪಕ್ಷ ಸಂಘಟನೆಗೆ ಸಜ್ಜುಗೊಳಿಸಲು ಹಾಗೂ ಸೆ.೮ರಂದು ಹಮ್ಮಿಕೊಂಡಿರುವ ಜನೋತ್ಸವವನ್ನು ಯಶಸ್ವಿಗೊಳಿಸಲು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಗರದ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಮಹತ್ವದ ಸಭೆ ನಡೆಸಲಾಯಿತು.
ಸಭೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಲಾಗಿದೆ. ಎಲ್ಲಿಲ್ಲಿ ಯಾವ ತಂಡ ಪ್ರವಾಸ ಮಾಡಬೇಕು, ಜನೋತ್ಸವ ಸೇರಿ 7 ವಿವಿಧ ಮೋರ್ಚಾಗಳ ಸಮಾವೇಶಗಳಿಗೆ ರಾಷ್ಟ್ರೀಯ ನಾಯಕರನ್ನು ಕರೆಸುವುದು ಹಾಗೂ ಮುಖ್ಯಮಂತ್ರಿಗಳ 50 ಕ್ಷೇತ್ರಗಳ ಪ್ರವಾಸ ಹಾಗೂ ಪ್ರವಾಸದ ವೇಳೆ ಜನರಿಗೆ ತಿಳಿಸುವ ವಿಷಯಗಳ ಬಗ್ಗೆ ಮಹತ್ವದ ಚರ್ಚೆ ಮಾಡಲಾಗಿದ್ದು, ಕಾಂಗ್ರೆಸ್ ನಾಯಕರ ತಂತ್ರಗಳಿಗೆ ಪ್ರತಿತಂತ್ರ ರೂಪಿಸುವ ಬಗ್ಗೆಯೂ ಮಾತುಕತೆ ನಡೆದಿದೆ.
ಸೆಪ್ಟೆಂಬರ್ 8ರಂದು ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿರುವ ಸರ್ಕಾರದ ಜನೋತ್ಸವ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬೆಳಗ್ಗೆ 11 ಗಂಟೆಗೆ ಹಾಜರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಮಂಗಳೂರಿನಲ್ಲಿ ಪ್ರಧಾನಿ ಮೋದಿ ಅವರು ರಾಜ್ಯ ನಾಯಕರಿಗೆ ನೀಡಿರುವ ಸಂದೇಶದ ಬಗ್ಗೆ ಕೂಡ ಸಭೆಯಲ್ಲಿ ಚರ್ಚಿಸಲಾಗಿದೆ.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ, ಸಚಿವ ಗೋವಿಂದ ಕಾರಜೋಳ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಆರ್.ಅಶೋಕ್ ಮತ್ತಿತರರು ಇದ್ದರು.
ಇದನ್ನೂ ಓದಿ | ರಾಜೀನಾಮೆ ಇಲ್ವೇ ಇಲ್ಲ; ವಿಶ್ವಾಸ ಮತ ಯಾಚಿಸಲು ಸಿದ್ಧರಾದ ಜಾರ್ಖಂಡ ಸಿಎಂ ಹೇಮಂತ್ ಸೊರೆನ್