Site icon Vistara News

ದಾವಣಗೆರೆಯಲ್ಲಿ ಸಿದ್ದರಾಮೋತ್ಸವಕ್ಕೆ ಭರ್ಜರಿ ಸಿದ್ಧತೆ ; 5 ಲಕ್ಷ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ

ಸಿದ್ದರಾಮೋತ್ಸವಕ್ಕೆ

ದಾವಣಗೆರೆ: ನಗರದಲ್ಲಿ ಆ.3ರಂದು ನಡೆಯಲಿರುವ ಸಿದ್ದರಾಮೋತ್ಸವದ ಹಿನ್ನೆಲೆಯಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದೆ. ನಗರದ ಹೊರವಲಯದ ಶಾಮನೂರು ಅರಮನೆ ಮೈದಾನದ 50 ಎಕರೆ ಜಾಗದಲ್ಲಿ ಬೃಹತ್‌ ಪೆಂಡಾಲ್‌ ಹಾಕಲಾಗಿದ್ದು, ರಾಜ್ಯದ ವಿವಿಧೆಡೆಯಿಂದ ಉತ್ಸವಕ್ಕೆ 5 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಬೆಂಬಲಿಗರು ಆಗಮಿಸುವ ನಿರೀಕ್ಷೆ ಇದೆ.

ಆಗಸ್ಟ್​ 2ರಿಂದ ಲೇಸರ್ ಶೋ, ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ ಎಂದು ಸಮಿತಿಯ ಮೂಲಗಳು ತಿಳಿಸಿವೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿನ ಸಾಧನೆಗಳನ್ನು ವಿವರಿಸುವ ಪುಸ್ತಕವೂ ಸೇರಿ ಮೂರು ಪುಸ್ತಕಗಳು ಈ ಕಾರ್ಯಕ್ರಮದಲ್ಲಿ ಬಿಡುಗಡೆ ಆಗಲಿವೆ.

ಇದನ್ನೂ ಓದಿ | ಸಿದ್ದರಾಮಯ್ಯಗೆ ಸಿಎಂ ಸ್ಥಾನ ಬಿಟ್ಟು ಕೊಟ್ಟಿದ್ದು ಡಿ.ಕೆ.ಶಿವಕುಮಾರ್‌: ನಂಜಾವಧೂತ ಸ್ವಾಮೀಜಿ

ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಲಾಗುತ್ತಿದ್ದು, ಅಡುಗೆ ತಯಾರಿಗಾಗಿ ಬೆಂಗಳೂರಿನಿಂದ 2500 ಬಾಣಸಿಗರ ತಂಡ ದಾವಣಗೆರೆಗೆ ಆಗಮಿಸಿದೆ. ಕಾರ್ಯಕ್ರಮಕ್ಕಾಗಿ ಪಲಾವ್‌, ಮೊಸರನ್ನ, ಮೈಸೂರು ಪಾಕ್‌, ವಿಐಪಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಸಿದ್ದರಾಮೋತ್ಸವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಇಟಗಿ ಗ್ರಾಮದಲ್ಲಿ ಸಿದ್ದರಾಮ 20 ಕ್ವಿಂಟಲ್ ಲಾಡು ತಯಾರಿಸಲಾಗುತ್ತಿದೆ.

ಮುಂದಿನ ಸಿಎಂ ಸಿದ್ದರಾಮಯ್ಯ ಬ್ಯಾನರ್‌
ಸಿದ್ದರಾಮೋತ್ಸವ ಆಚರಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಬೆಂಗಳೂರಿನ ಸರ್ಕಾರಿ ನಿವಾಸ, ವಿವಿಧೆಡೆ ರಸ್ತೆಗಳಲ್ಲಿ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಬ್ಯಾನರ್‌ಗಳನ್ನು ಹಾಕಲಾಗಿದೆ. ಬೆಂಗಳೂರಿನ ಕುಮಾರಕೃಪಾ ಸರ್ಕಾರಿ ನಿವಾಸದ ಮುಂದೆ ಸಾಲು ಸಾಲು ಬ್ಯಾನರ್ ಅಳವಡಿಸಲಾಗಿದ್ದು, ಈ ಮೂಲಕ ಡಿ.ಕೆ.ಶಿವಕುಮಾರ್‌ ಬಣಕ್ಕೆ ಕಾರ್ಯಕರ್ತರು ತಿರುಗೇಟು ನೀಡಿದ್ದಾರೆ.

ಆ.2ಕ್ಕೆ ಹುಬ್ಬಳ್ಳಿಗೆ ರಾಹುಲ್‌ ಗಾಂಧಿ
ಆ.2ರಂದು ಸಂಜೆ 7 ಗಂಟೆಗೆ ಹುಬ್ಬಳ್ಳಿಗೆ ರಾಹುಲ್‌ ಗಾಂಧಿ ಆಗಮಿಸಲಿದ್ದಾರೆ. ರಾತ್ರಿ 8 ಗಂಟೆಗೆ ಖಾಸಗಿ ಹೋಟೆಲ್‌ನಲ್ಲಿ ರಾಜ್ಯ ಕಾಂಗ್ರೆಸ್ ರಾಜಕೀಯ ವ್ಯವಹಾರಗಳ‌ ಸಮಿತಿ ಸಭೆ ನಡೆಯಲಿದ್ದು, ಸಭೆಗೆ ಕೆ.ಸಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಎಂಬಿ ಪಾಟೀಲ್ ಬಿ.ಕೆ.ಹರಿಪ್ರಸಾದ್, ಕೆ.ಎಚ್.ಮುನಿಯಪ್ಪ, ಎಚ್.ಕೆ.ಪಾಟೀಲ್, ದಿನೇಶ್ ಗುಂಡೂರಾವ್, ವೀರಪ್ಪ ಮೋಯ್ಲಿ, ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ರಾಮಲಿಂಗರೆಡ್ಡಿ, ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಡಿ.ಕೆ.ಸುರೇಶ್, ಯು.ಟಿ.ಖಾದರ್, ರಮೇಶ್ ಕುಮಾರ್, ಕೆ.ಜೆ.ಜಾರ್ಜ್, ಸುನೀಲ್ ಕನುಗೋಳ ಮತ್ತಿತರರು ಭಾಗವಹಿಸಲಿದ್ದಾರೆ. ಬಳಿಕ ಅಲ್ಲಿಂದ ರಾಹುಲ್‌ ಗಾಂಧಿ ಸಿದ್ದರಾಮೋತ್ಸವದಲ್ಲಿ ಭಾಗಿಯಾಲಿದ್ದಾರೆ.

ಚಿತ್ರದುರ್ಗದ ಮುರುಘಾಮಠಕ್ಕೆ ಡಿಕೆಶಿ ಭೇಟಿ
ಆ.3ರಂದು ಸಿದ್ದರಾಮಯ್ಯ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಆಗಮಿಸುವುದಕ್ಕೂ ಮೊದಲು ರಾಹುಲ್ ಗಾಂಧಿ, ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು. ಚಿತ್ರದುರ್ಗದ ಮುರುಘಾಮಠಕ್ಕೆ ಭಾನುವಾರ ಭೇಟಿ ಗದ್ದುಗೆ ದರ್ಶನ ಪಡೆದ ಡಿಕೆಶಿ, ತದನಂತರ ಡಾ.ಶಿವಮೂರ್ತಿ ಮುರುಘಾ ಶರಣರ ಭೇಟಿ ಮಾಡಿ ಆಶೀರ್ವಾದ ಪಡೆದು ಬಳಿಕ ಅವರೊಂದಿಗೆ ಮಾತುಕತೆ ನಡೆಸಿದರು. ಬಳಿಕ ದಿ.ಎಸ್. ನಿಜಲಿಂಗಪ್ಪ ಸ್ಮಾರಕ ಸಭಾಂಗಣದಲ್ಲಿ ಮುಖಂಡರ ಜತೆ ಸಭೆ ನಡೆಸಿದರು. 

ಇದನ್ನೂ ಓದಿ | ಸಿದ್ದರಾಮೋತ್ಸವದಿಂದ ಕಾಂಗ್ರೆಸ್‌ ವಿಭಜನೆಯತ್ತ ಸಾಗುತ್ತಿದೆಯೇ?: ದೊರಕುತ್ತಿವೆ ಮುನ್ಸೂಚನೆಗಳು

Exit mobile version