Site icon Vistara News

ಕೃಷಿ ಕಾನೂನು| ಮುಕ್ತ ಮಾರುಕಟ್ಟೆಯಲ್ಲಿ ಕೃಷ್ಯುತ್ಪನ್ನ ಮಾರಾಟ ಅವಕಾಶ: ಹೆಸರು ಬೆಳೆಗೆ ಸಿಕ್ಕಿತು ಉತ್ತಮ ಬೆಲೆ

green gram

ಶಿವಾನಂದ ಹಿರೇಮಠ, ವಿಸ್ತಾರ ನ್ಯೂಸ್, ಗದಗ
ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ 73 ಸಾವಿರ ಹೆಕ್ಟೇರ್ ಹೆಸರು ಬೆಳೆ ನಾಶವಾದರೂ ಕೇಂದ್ರದ ಕೃಷಿ ಕಾನೂನು ಹೆಸರು ಬೆಳೆ ರೈತರ ಹಿತ ಕಾಪಾಡುವಲ್ಲಿ ಯಶಸ್ವಿಯಾಗಿದೆ. ಎಪಿಎಂಸಿ ವರ್ತಕರ ಮುಷ್ಟಿಯಿಂದ ಸ್ವತಂತ್ರರಾಗಿರುವ ರೈತರು ಮುಕ್ತ ಮಾರುಕಟ್ಟೆಯಲ್ಲಿ ಹೆಸರು ಮಾರಾಟ ಮಾಡುತ್ತಿದ್ದಾರೆ. ಪರಿಣಾಮ ಈಗಾಗಲೇ 2.41 ಲಕ್ಷ ಕ್ವಿಂಟಾಲ್ ಹೆಸರು ಮಾರಾಟವಾಗಿ, 3.50 ಲಕ್ಷ ಕ್ವಿಂಟಾಲ್ ಮಾರಾಟಕ್ಕಾಗಿ ಬೆಂಬಲ ಬೆಲೆಯಡಿ ರೈತರು ನೋಂದಣಿ ಮಾಡಿಸಿದ್ದಾರೆ.

ಮೊದಲು ಹೀಗಿರಲಿಲ್ಲ
ಕೇಂದ್ರದ ಕೃಷಿ ಕಾನೂನು ಜಾರಿಗೂ ಮೊದಲು ವ್ಯವಸ್ಥೆ ಬದಲಾಗಿತ್ತು. ಕೃಷಿ ಉತ್ಪನ್ನವನ್ನು ಎಪಿಎಂಸಿ ವರ್ತಕರ ಮೂಲಕವೇ ಮಾರಾಟ ಮಾಡುವ ಅನಿವಾರ್ಯತೆ ಇತ್ತು. ಕೃಷಿ ಉತ್ಪನ್ನಗಳ ಆವಕ ಹೆಚ್ಚಾಗಿ ಬೆಲೆ ಕುಸಿದು ರೈತರಿಗೆ ನಷ್ಟವಾಗುತ್ತಿತ್ತು. ಈ ಪರಿಸ್ಥಿತಿ ಬದಲಾಗಿದೆ. ಮುಕ್ತ ಮಾರುಕಟ್ಟೆ ಅವಕಾಶ ಕಲ್ಪಿಸಿದ ಪರಿಣಾಮ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಲಭ್ಯವಾಗುತ್ತಿದೆ.

ಬೆಳೆ ಹಾನಿ: ಹೆಸರು ಬೆಳೆ ಮೇಲೆ ಪರಿಣಾಮ
ಕೃಷಿ ಇಲಾಖೆಯ ಪ್ರಕಾರ ಜಿಲ್ಲೆಯಲ್ಲಿ ಶೇ. 61% ರಷ್ಟು ಬೆಳೆ ಹಾನಿಯಾಗಿದೆ. ನಿರಂತರ ಮಳೆಯಿಂದ ಪ್ರಸಕ್ತ ಸಾಲಿನ ಹೆಸರು ಬೆಳೆ ಇಳುವರಿ ಕುಂಠಿತಗೊಂಡಿದೆ. 73 ಸಾವಿರ ಹೆಕ್ಟೇರ್ ಹೆಸರು ಬೆಳೆ ನಾಶವಾಗಿದೆ. ರಾಜ್ಯದಲ್ಲೇ ಇದು ಅಧಿಕ ಬೆಳೆ ಹಾನಿ. ಹೆಸರು ಉತ್ಪನ್ನದಲ್ಲೂ ಬೆಳೆ ಭಾಗಶಃ ಕಪ್ಪಾಗಿದೆ. ಹೀಗಿದ್ದರೂ ರೈತರು ಕುಗ್ಗಿಲ್ಲ. ಉತ್ತಮ ಬೆಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಹೆಸರು ಖರೀದಿಯಾಗುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನ ಮಾರುವ ಅವಕಾಶವನ್ನು ಕೇಂದ್ರ ಸರಕಾರ ರೈತರಿಗೆ ಕಲ್ಪಿಸಿದ ಫಲದಿಂದಾಗಿ ಎಪಿಎಂಸಿ ಕಪಿ ಮುಷ್ಟಿಗೆ ರೈತರು ಒಳಗಾಗಿಲ್ಲ.

ಬೆಲೆ ವ್ಯತ್ಯಾಸ ಇದ್ದರೂ ಉತ್ತಮ ಬೆಲೆ
ಮುಕ್ತ ಮಾರುಕಟ್ಟೆ ಬೆಲೆಗೆ ಮತ್ತು ಬೆಂಬಲ ಬೆಲೆಗೆ ವ್ಯತ್ಯಾಸ ಇದ್ದರೂ ಮುಕ್ತ ಮಾರುಕಟ್ಟೆಯಲ್ಲೀಗ ಕ್ವಿಂಟಾಲ್ ಗೆ ಸರಾಸರಿ 6500 ರೂ. ಇದೆ. ಬೆಂಬಲ ಬೆಲೆ 7750 ರೂ. ಗೆ ಹೋಲಿಸಿದರೆ ಮುಕ್ತ ಮಾರುಕಟ್ಟೆ ಬೆಲೆ ಕಡಿಮೆ ಇದ್ದರೂ ಕೂಡ ಇದೊಂದು ಉತ್ತಮ ಬೆಲೆ ಎಂಬುದು ಕೃಷಿ ತಜ್ಞರ ಅಭಿಪ್ರಾಯ.

  1. ಬೆಂಬಲ ಬೆಲೆಯಡಿ 3.63 ಲಕ್ಷ ಕ್ವಿಂಟಾಲ್ ಹೆಸರು ಖರೀದಿಗೆ ಕೇಂದ್ರ ಅನುಮತಿ.
  2. ಗದಗ ಜಿಲ್ಲೆಯೊಂದರಲ್ಲೇ ಕೇಂದ್ರದ ಗುರಿ ಸಾಧನೆ.
  3. 13 ಜಿಲ್ಲೆಗಳಲ್ಲಿ ಖರೀದಿ ಕೇಂದ್ರ ತೆರೆಯಲು ಅನುಮತಿ
  4. ಬೆಳೆ ಹಾನಿ ನಡುವೆಯೂ ಹೆಸರಿಗೆ ಉತ್ತಮ ಬೆಲೆ.
  5. ಎಪಿಎಂಸಿ ಮುಷ್ಟಿಯಿಂದ ರೈತರು ಸ್ವತಂತ್ರ. ಮಾರುಕಟ್ಟೆ ಹೆಚ್ಚಿದ ಹೆಸರಿನ ಆವಕ.
  6. 6 ರಿಂದ 15 ಕ್ವಿಂಟಾಲ್ ಖರೀದಿ ಮಿತಿ ಹೆಚ್ಚಿಸಿದ ರಾಜ್ಯ ಸರಕಾರ.

ಹೆಸರು ಖರೀದಿ ಎಷ್ಟು? ಏನು?ಎತ್ತ?
ಕೇಂದ್ರ ಸರಕಾರ ಬೆಂಬಲ ಬೆಲೆಯಡಿ ರಾಜ್ಯಕ್ಕೆ 3.63 ಲಕ್ಷ ಕ್ವಿಂಟಾಲ್ ಖರೀದಿಯ ಗುರಿ ನೀಡಿದೆ. ಗದಗ, ಧಾರವಾಡ, ಹಾವೇರಿ, ಬಾಗಲಕೋಟೆ ಸೇರಿದಂತೆ 13 ಜಿಲ್ಲೆಗಳಿಗೆ ಬೆಂಬಲ ಬೆಲೆಯಡಿ ಖರೀದಿಗೆ ಅನುಮತಿ ನೀಡಲಾಗಿದೆ. ಆದರೆ, ಗದಗ ಜಿಲ್ಲೆಯೊಂದರಲ್ಲೇ ಬೆಂಬಲ ಬೆಲೆಯಡಿ ಈಗಾಗಲೇ 3.41 ಲಕ್ಷ ಕ್ವಿಂಟಾಲ್ ಗೆ ನೋಂದಣಿ ಆಗಿದ್ದು, ಮುಕ್ತ ಮಾರುಕಟ್ಟೆಯಲ್ಲಿ 2 ಲಕ್ಷ ಕ್ವಿಂಟಲ್‌ಗೂ ಅಧಿಕ ಹೆಸರು ಮಾರಾಟವಾಗಿದೆ. ಕೇಂದ್ರ ಸರಕಾರ ನೀಡಿರುವ ಗುರಿ ಗದಗ ಜಿಲ್ಲೆಯೊಂದರಲ್ಲೇ ಸಾಧಿಸಿದಂತಾಗಿದೆ. ಬೆಂಬಲ ಬೆಲೆಯೇತರ ಮಾರುಕಟ್ಟೆಗೆ ಹೆಸರು ಬೆಳೆ ಆವಕ ಹೆಚ್ಚಾಗಿದ್ದರೂ ಹೆಸರು ಬೆಳೆಗೆ ಈಗಿರುವ 6500 ರೂ. ಅತೀ ಸೂಕ್ತ ಮತ್ತು ನಿಯಂತ್ರಿತ ಬೆಲೆ.

9 ಕ್ವಿಂಟಾಲ್ ಹೆಚ್ಚಿಸಿದ ರಾಜ್ಯ ಸರಕಾರ
ಬೆಂಬಲ ಬೆಲೆಯಡಿ ಪ್ರತಿ ಎಕರೆಗೆ 4 ಕ್ವಿಂಟಾಲ್, ಹೆಕ್ಟೇರ್ ಗೆ 6 ಕ್ವಿಂಟಾಲ್ ಹೆಸರನ್ನು ಖರೀದಿಸುವ ನಿಯಮವಿತ್ತು. ಈ ಬಾರಿ ಈ ನಿಯಮವನ್ನು ಸಡಿಲಿಸಿ 15 ಕ್ವಿಂಟಾಲ್ ವರೆಗೂ ಹಚ್ಚಿಸಿದೆ. ಒಬ್ಬ ರೈತ 15 ಕ್ವಿಂಟಾಲ್ ವರೆಗೂ ಬೆಂಬಲ ಬೆಲೆಯಡಿ ನೋಂದಣಿ ಮಾಡಿ ಮಾರಾಟ ಮಾಡಬಹುದು.

ಮುಂಗಾರು ಪೂರ್ವ ಮಳೆಯಿಂದ ಎಕರೆಗೆ 6-8 ಕ್ವಿಂಟಾಲ್ ಹೆಸರು ಬೆಳೆ ಇಳುವರಿ ನಿರೀಕ್ಷಿಸಲಾಗಿತ್ತು. ಅಕಾಲಿಕ ಮಳೆಯಿಂದ 2-4 ಕ್ವಿಂಟಾಲ್ ಇಳುವರಿ ಬಂದಿದೆ. ಹೀಗಿದ್ದರೂ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆ ಇದ್ದು, ಸಮಾಧಾನ ತಂದಿದೆ ಎನ್ನುತ್ತಾರೆ ಕೃಷಿ ಅಧಿಕಾರಿ ಜಿಯಾವುಲ್ಲಾ.

Exit mobile version