Site icon Vistara News

Green tribunal | ಚಂದಾಪುರ ಕೆರೆ ವಿಚಾರದಲ್ಲಿ ವಿಧಿಸಿದ 500 ಕೋಟಿ ರೂ. ದಂಡದಲ್ಲಿ ಬದಲಾವಣೆಗೆ ಎನ್‌ಜಿಟಿ ನಕಾರ

National green tribunal

ಬೆಂಗಳೂರು: ಬೆಂಗಳೂರಿನ ಚಂದಾಪುರ ಕೆರೆ ಸಂರಕ್ಷಣೆಗೆ ವಿಫಲವಾದ ಕಾರಣಕ್ಕೆ ದೆಹಲಿಯ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು (ಎನ್‌ಜಿಟಿ) 500 ಕೋಟಿ ರೂ. ದಂಡ ವಿಧಿಸಿತ್ತು. ಇದರಲ್ಲಿ ಮಾರ್ಪಾಡು ಮಾಡುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಅದು ವಜಾ ಮಾಡಿದ್ದು ದಂಡ ಕಟ್ಟಲೇಬೇಕು ಎಂದು ತಾಕೀತು ಮಾಡಿದೆ.

ಕೆರೆ ಸಂರಕ್ಷಣೆಗೆ ಪರಿಹಾರ ಕ್ರಮ ಕೈಗೊಳ್ಳಲು 3-4 ವರ್ಷಗಳು ಬೇಕಾಗುವುದರಿಂದ ಕೂಡಲೇ ಮೊತ್ತವನ್ನು ಜಮಾ ಮಾಡುವಂತೆ ಸೂಚಿಸಿರುವುದು ಸಮರ್ಥನೀಯವಲ್ಲ ಎಂದು ರಾಜ್ಯ ಸರ್ಕಾರ ಹೇಳಿದ್ದು, ಬದಲಾವಣೆ ಬಯಸಿತ್ತು. ಆದರೆ, ಜಲ ಮಾಲಿನ್ಯ ನಿಯಂತ್ರಣ ಮತ್ತು ಸೂಕ್ತವಾದ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡಬೇಕಾದ ಸಮಯ ಮೀರಿರುವುದರಿಂದ ಕಾಲಾವಕಾಶ ವಿಸ್ತರಿಸಲಾಗದು ಎಂದು ಎನ್‌ಜಿಟಿ ಹೇಳಿದೆ.

ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಸಮಯವನ್ನು ಉಲ್ಲಂಘಿಸಿ ರಾಜ್ಯವು ತನ್ನದೇ ಆದ ಸಮಯ ನಿಗದಿಪಡಿಸಿಕೊಳ್ಳುತ್ತಿದೆ. ಈ ಮೂಲಕ ಸರ್ಕಾರವು ಕಾನೂನು ಉಲ್ಲಂಘಿಸುತ್ತಿದೆ. ಎನ್‌ಜಿಟಿ ನೀಡಿರುವ ನಿರ್ದೇಶನಗಳನ್ನು ಪಾಲಿಸಲು ರಾಜ್ಯ ಸರ್ಕಾರ ಸಿದ್ಧವಿಲ್ಲವೇ ಎಂದು ಎನ್‌ಜಿಟಿ ಪ್ರಶ್ನಿಸಿದೆ.

ಕೆರೆ ಸಂರಕ್ಷಿಸುವ ವಿಚಾರದಲ್ಲಿ ರಾಜ್ಯ ಸರ್ಕಾರವು ದಯನೀಯವಾಗಿ ವಿಫಲವಾಗಿದೆ ದು ನ್ಯಾಯಮೂರ್ತಿಗಳಾದ ಆದರ್ಶ್‌ ಕುಮಾರ್‌ ಗೋಯಲ್‌ ಮತ್ತು ಸುಧೀರ್‌ ಅಗರ್ವಾಲ್‌ ಹಾಗೂ ತಜ್ಞ ಸದಸ್ಯರಾದ ಪ್ರೊ. ಎ ಸೆಂಥಿಲ್‌ ವೇಲ್‌ ಅವರನ್ನು ಒಳಗೊಂಡ ಪೀಠವು ಹೇಳಿದೆ.

ಪರ್ಯಾವರಣ್ ಸುರಕ್ಷಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನಗಳನ್ನು ಪಾಲಿಸಲಾಗಿಲ್ಲ ಎಂಬುದು ಸೇರಿದಂತೆ ಈಗಾಗಲೇ ಆಗಿರುವ ಉಲ್ಲಂಘನೆಗೆ ದಂಡ ವಿಧಿಸಲಾಗಿದೆ. ದಂಡ ಪಾವತಿಸುವುದು ತಡವಾದರೆ ಪ್ರತ್ಯೇಕವಾಗಿ ಹೊಣೆಗಾರಿಕೆ ನಿಗದಿಪಡಿಸಲಾಗುವುದು ಎಂದು ಎನ್‌ಜಿಟಿ ಹೇಳಿದೆ. ಮುಂದೆ ರಾಜ್ಯ ಸರಕಾರ ಇದಕ್ಕೆ ಹೇಗೆ ಪ್ರತಿಕ್ರಿಯಿಸಲಿದೆ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ | Kasturirangan Report | ಪಶ್ಚಿಮಘಟ್ಟ ತಪ್ಪಲಿನ ಜನರ ನಿದ್ರೆಗೆಡಿಸಿದ ಈ ವರದಿ ಬಂದಿದ್ದಾದರೂ ಏಕೆ?

Exit mobile version