Site icon Vistara News

Congress Guarantee : ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ; ಸಿಎಂಗೆ ಗ್ರೀನ್‌ಪೀಸ್‌ ಇಂಡಿಯಾ ಸಲಹೆ ಏನು?

NGO Greenpeace India

#image_title

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವ ʻಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣʼ ಯೋಜನೆಯಲ್ಲಿ (Congress Guarantee) ಎಲ್ಲರ ಒಳಗೊಳ್ಳುವಿಕೆಗೆ ಒತ್ತು ನೀಡಲು ಸರ್ಕಾರೇತರ ಸಂಸ್ಥೆ ಗ್ರೀನ್‌ಪೀಸ್‌ ಇಂಡಿಯಾ ಮನವಿ ಮಾಡಿದೆ. ಜತೆಗೆ ಯೋಜನೆ ಅನುಷ್ಠಾನಕ್ಕೆ ಕೆಲವು ಸಲಹೆಗಳನ್ನು ನೀಡಿದೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಗ್ರೀನ್‌ಪೀಸ್‌ ಇಂಡಿಯಾ, ಉಚಿತ ಪ್ರಯಾಣ ಯೋಜನೆಯನ್ನು ಘೋಷಿಸಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದೆ. ಉಚಿತ ಬಸ್ ಪ್ರಯಾಣದ ಯೋಜನೆಯ ಅನುಷ್ಠಾನವು ರಾಜ್ಯ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಇಲ್ಲಿನ ಮಹಿಳೆಯರ ಪಾಲಿಗೆ ದೊಡ್ಡ ಕೊಡುಗೆಯಾಗಲಿದೆ ಎಂದು ತಿಳಿಸಿದೆ.

ಮಹಿಳೆಯರಿಗೆ ನೀಡಲಾದ ಉಚಿತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಆರ್ಥಿಕ ದೃಷ್ಟಿಯಿಂದಲೂ ಹಲವು ಸಕಾರಾತ್ಮಕ ಅಂಶಗಳನ್ನು ಹೊಂದಿದೆ. ಇದು ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳಾ ಕಾರ್ಮಿಕ ಬಲದ ಉತ್ತಮ ಭಾಗವಹಿಸುವಿಕೆ, ಎಲ್ಲರಿಗೂ ಸುರಕ್ಷಿತ ಮತ್ತು ಒಳಗೊಳ್ಳುವಿಕೆಯ ವಾತಾವರಣ ಇತ್ಯಾದಿಗಳನ್ನು ವಿವಿಧ ಹಂತಗಳಲ್ಲಿ ಸದೃಢವಾಗಿ ಪ್ರತಿಫಲಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ | Karnataka Govt: ಬಿಜೆಪಿ ಯೋಜನೆಗಳ ವಿರುದ್ಧ ತನಿಖಾಸ್ತ್ರ ಪ್ರಯೋಗ: ಪರಿಶೀಲನೆ, ತಡೆಗೆ ಮುಂದಾದ ಕಾಂಗ್ರೆಸ್‌ ಸರ್ಕಾರ

ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆಯು ಪಂಜಾಬ್, ತಮಿಳುನಾಡು ಮತ್ತು ದೆಹಲಿಯಂತಹ ರಾಜ್ಯಗಳಲ್ಲಿ ಈಗಾಗಲೇ ಜಾರಿಯಲ್ಲಿದೆ. ಇದರ ಅನುಷ್ಠಾನದ ನಂತರ ಫಲಾನುಭವಿಗಳ ಮಾಸಿಕ ಆದಾಯ ಮತ್ತು ಮಕ್ಕಳ ಕಲಿಯಕ ಮೇಲೆ ಉತ್ತರ ಪರಿಣಾಮ ಬೀರಿದೆ. ಆದ್ದರಿಂದ, ಈ ಯೋಜನೆಯು ದೂರದರ್ಶಿತ್ವ ಹೊಂದಿದ್ದು , ಈ ನಿಟ್ಟಿನಲ್ಲಿ ನೂತನ ಸರ್ಕಾರವು ಇಡುತ್ತಿರುವ ಮೊದಲ ಹೆಜ್ಜೆ ಅಭಿನಂದನೀಯ ಎಂದು ಗ್ರೀನ್‌ ಪೀಸ್‌ ಇಂಡಿಯಾ ತಿಳಿಸಿದೆ.

ಈ ಮಾದರಿ ಯೋಜನೆಯನ್ನು ಜಾರಿಗೆ ತಂದ ರಾಜ್ಯಗಳಿಂದ ಸ್ಫೂರ್ತಿ ಪಡೆದಂತೆ, ಆ ರಾಜ್ಯಗಳು ಎದುರಿಸಿದ ಸವಾಲುಗಳು ಮತ್ತು ನ್ಯೂನ್ಯತೆಗಳಿಂದಲೂ ನಾವು ಪಾಠ ಕಲಿಯಬೇಕಿದೆ. ಇತ್ತೀಚಿಗೆ ದೆಹಲಿಯ ಕೆಲವು ಡಿಟಿಸಿ ಬಸ್ ಚಾಲಕರು ಉದ್ದೇಶಪೂರ್ವಕವಾಗಿ ಮಹಿಳಾ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿರಾಕರಿಸಿದ ಘಟನೆಗಳು ವರದಿಯಾಗಿವೆ. ಇದು ಈ ಯೋಜನೆಯು ಸರಿಯಾಗಿ ಅನುಷ್ಠಾನವಾಗದಿರುವುದನ್ನು ಮತ್ತು ನಿಯಮಗಳಲ್ಲಿನ ನ್ಯೂನ್ಯತೆಗಳನ್ನು ಸೂಚಿಸುತ್ತದೆ.

ಹಾಗಾಗಿ, ಉಚಿತ ಪ್ರಯಾಣದ ಯೋಜನೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಮತ್ತು ಆ ಮೂಲಕ ಇತರ ರಾಜ್ಯಗಳಿಗೆ ಮಾದರಿಯಾಗಲು, ಆರಂಭದಿಂದಲೇ ಅಂತಹ ಸಂಭವನೀಯ ಲೋಪದೋಷಗಳನ್ನು ಪರಿಹರಿಸುವುದು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗ್ರೀನ್‌ಪೀಸ್ ಇಂಡಿಯಾ, ಉಚಿತ ಪ್ರಯಾಣದ ಯೋಜನೆಯನ್ನು ಹೆಚ್ಚು ಪರಿಣಾಮಕಾರಿ, ಸದೃಢ ಮತ್ತು ಎಲ್ಲರನ್ನು ಒಳಗೊಳ್ಳುವಂತೆ ಮಾಡಲು ಕೆಲವು ಶಿಫಾರಸ್ಸುಗಳನ್ನು ಮುಂದಿಡುತ್ತಿದೆ ಎಂದು ತಿಳಿಸಿದೆ.

ಇದನ್ನೂ ಓದಿ | Congress Guarantee: ಮನೆಯಿಂದ 50 ಕಿ.ಮೀ.ವರೆಗೆ ಮಾತ್ರ ಉಚಿತ ಬಸ್‌ ಪ್ರಯಾಣ?: ಗ್ಯಾರಂಟಿಗೆ ಷರತ್ತು ವಿಧಿಸಲು ಸರ್ಕಾರ ಕಸರತ್ತು

ಗ್ರೀನ್‌ಪೀಸ್‌ ಇಂಡಿಯಾ ಶಿಫಾರಸುಗಳೇನು?

ಬಿಎಂಟಿಸಿ ಬಸ್‌ಗಳ ಸಂಖ್ಯೆಯನ್ನು 14,000ಕ್ಕೆ ಹೆಚ್ಚಿಸಿ

ಬೆಂಗಳೂರಿನಲ್ಲಿ 11 ಬಸ್ ಲೇನ್‌ಗಳನ್ನು ನಿರ್ಮಿಸುವುದು

ಸರ್ಕಾರವು ಈ ಶಿಫಾರಸುಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಸ್ತ್ರೀಪರ ಮತ್ತು ಎಲ್ಲರಿಗೂ ಸಮಾನವಾದ ನಗರವನ್ನು ನಿರ್ಮಿಸಲು ಅಡಿಪಾಯ ಹಾಕುತ್ತದೆ ಎಂದು ಗ್ರೀನ್‌ಪೀಸ್‌ ಇಂಡಿಯಾ ಭಾವಿಸಿರುವುದಾಗಿ ತಿಳಿಸಿದೆ.

Exit mobile version