ಉಳ್ಳಾಲ: ಜೂ.1 ರಂದು ವಿವಾಹವಾಗಬೇಕಿದ್ದ ವರ ನಾಪತ್ತೆಯಾಗಿರುವ (Groom Missing) ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ತೌಡುಗೋಳಿ ವರ್ಕಾಡಿ ಎಂಬಲ್ಲಿ ನಡೆದಿದೆ. ಮನೆಯಲ್ಲಿ ಮಂಗಳವಾರ ಸಂಜೆ ಮೆಹಂದಿ ಶಾಸ್ತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಪೋಷಕರು, ಕುಟುಂಬಸ್ಥರು ಸಂಭ್ರಮದಲ್ಲಿ ತೊಡಗಿದ್ದರೆ, ಇತ್ತ ಹಣ್ಣು ಖರೀದಿಗೆಂದು ತೆರಳಿದ್ದ ವರನೇ ನಾಪತ್ತೆಯಾಗಿರುವುದು ವಧು ವರರ ಕುಟುಂಬವನ್ನು ಆತಂಕಕ್ಕೀಡು ಮಾಡಿದೆ.
ತೌಡುಗೋಳಿ- ವರ್ಕಾಡಿ ದೇವಂದಪಡ್ಪುವಿನ ಉದ್ಯಮಿ ಐತಪ್ಪ ಶೆಟ್ಟಿ ಅವರ ಸುಪುತ್ರ ಕಿಶನ್ ಶೆಟ್ಟಿ ನಾಪತ್ತೆಯಾದ ವರ. ಜೂ.1 ರಂದು ಗುರುವಾರದಂದು ಕಿಶನ್ ಶೆಟ್ಟಿಗೆ ಉಪ್ಪಳ ಮೂಲದ ಪ್ರಸ್ತುತ ಜಪ್ಪಿನಮೊಗರಿನಲ್ಲಿರುವ ಕುಟುಂಬವೊಂದರ ಉಪನ್ಯಾಸಕಿಯೊಂದಿಗೆ ವಿವಾಹ ನಿಗದಿಯಾಗಿತ್ತು. ವಧುವಿನ ಮನೆಯಲ್ಲಿ ಅದಾಗಲೇ ಅದ್ಧೂರಿ ಮೆಹಂದಿ ಶಾಸ್ತ್ರ ಮುಗಿದಿದ್ದು, ವರನ ಮನೆಯಲ್ಲಿ ಮಂಗಳವಾರ ನಡೆಯಬೇಕಿದ್ದ ಮೆಹಂದಿ ಶಾಸ್ತ್ರಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ | Shivamogga News: ಶಿವಮೊಗ್ಗದಲ್ಲಿ ಯಂತ್ರಕ್ಕೆ ಕುತ್ತಿಗೆ ಸಿಲುಕಿ ಯುವಕ ಸಾವು
ಆದರೆ, ಮಧ್ಯಾಹ್ನ ಹಣ್ಣು ತರಲೆಂದು ವರ ಸ್ಕೂಟರ್ ಏರಿ ಮನೆಯಿಂದ ಹೊರಟಿದ್ದ. ಆ ಬಳಿಕ ದೇರಳಕಟ್ಟೆ ತಲುಪುತ್ತಿದ್ದಂತೆಯೇ ಪೊಲೀಸ್ ಮೂಲಗಳ ಪ್ರಕಾರ ಸುಮಾರು ಅರ್ಧ ತಾಸು ಯಾರಲ್ಲಿಯೋ ಫೋನಲ್ಲಿ ಮಾತನಾಡಿದ್ದನಂತೆ. ಆ ಬಳಿಕ ನಾಪತ್ತೆಯಾದ ವರ ಇನ್ನೂ ಮನೆಗೆ ಬಂದಿಲ್ಲ. ಎರಡೂ ಕುಟುಂಬ ಆರ್ಥಿಕವಾಗಿ ಸ್ಥಿತಿವಂತರಾಗಿದ್ದು, ವಧು ವರರ ಮನೆಯಲ್ಲಿ ಸಂಭ್ರಮ ತುಂಬಿ ತುಳುಕಬೇಕಾಗಿತ್ತಾದರೂ ವರನ ನಾಪತ್ತೆ ಪ್ರಕರಣ ದಿಗ್ಭ್ರಮೆ ಮೂಡಿಸಿದೆ. ಕೊಣಾಜೆ ಠಾಣೆಯಲ್ಲಿ ಕಿಶನ್ ತಂದೆ ಐತಪ್ಪ ಶೆಟ್ಟಿ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.