Site icon Vistara News

ಟ್ರೀಟ್ಮೆಂಟ್‌ ತಗೊಳ್ಳೋದಾದ್ರೆ ತಗೊಳ್ಳಿ; ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರನೇ ಡಾಕ್ಟರ್!

pavagada government hospital

ತುಮಕೂರು: ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿನಂತೆ ವೈದ್ಯನನ್ನು ದೇವರಂತೆ ನೋಡಲಾಗುವುದು. ಹೀಗಾಗಿ ಜನರು ತಮ್ಮ ಆರೋಗ್ಯದಲ್ಲಿ ಏನೇ ಏರುಪೇರಾದರೂ ಆಸ್ಪತ್ರೆಗೆ ದೌಡಾಯಿಸುತ್ತಾರೆ. ಆದರೆ, ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ (Pavagada Government Hospital) ಈಗ ಡಿ ಗ್ರೂಪ್ ನೌಕರನೇ ಡಾಕ್ಟರ್ ಆಗಿದ್ದಾನೆ. ಇದು ಸಾರ್ವಜನಿಕವಾಗಿ ವ್ಯಾಪಕ ಟೀಕೆಗೆ ಗುರಿಯಾದರೂ ಕ್ಯಾರೇ ಎನ್ನುತ್ತಿಲ್ಲ. ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ (ಡಿಎಚ್‌ಒ) ಇತ್ತ ಗಮನಹರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಕೀಲುಮೂಳೆ ಸಂಬಂಧಿಸಿದ ರೋಗಿಗಳಿಗೆ ಡಿ ಗ್ರೂಪ್ ನೌಕರ ಮದಕರಿ ನಾಯಕ ಎಂಬಾತ ಚಿಕಿತ್ಸೆ ನೀಡುತ್ತಿದ್ದಾನೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ತಾನೇ ಮುಂದಾಗಿ ಈತ ಚಿಕಿತ್ಸೆ ನೀಡುತ್ತಿದ್ದು, ಬಂದವರಿಗೆ ಗಾಬರಿಯಾಗುತ್ತಿದೆ. ನೀವು ನಮಗೆ ಚಿಕಿತ್ಸೆ ಕೊಡುವುದು ಬೇಡ ಎಂದು ಹೇಳುತ್ತಿದ್ದಾರೆ. ಆದರೆ, ಇದನ್ನು ಯಾರಿಗೆ ಪ್ರಶ್ನೆ ಮಾಡುವುದು ಎಂಬುದು ತಿಳಿಯದಾಗಿದೆ ಎಂದು ನಾಗರಿಕರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: FDC Medicine Ban: ಕೆಮ್ಮು, ನೆಗಡಿ, ಜ್ವರಕ್ಕೆ ನೀಡುವ 14 ಎಫ್‌ಡಿಸಿ ಔಷಧಿಗಳು ಬ್ಯಾನ್, ಈ ಟ್ಯಾಬ್ಲೆಟ್ ನೀವು ಬಳಸಿರಬಹುದು!

ಟ್ರೀಟ್ಮೆಂಟ್‌ ತಗೆದುಕೊಳ್ಳುವುದಾದ್ರೆ ತೆಗೆದುಕೊಳ್ಳಿ

ನೀವೇನು ನಮಗೆ ಚಿಕಿತ್ಸೆ ನೀಡುವುದು ವೈದ್ಯರು ಎಲ್ಲಿ ಹೋದರು? ಅವರನ್ನೇ ಕರೆಯಿರಿ? ಎಂದು ಪ್ರತಿರೋಧ ಒಡ್ಡಿದರೆ ಇದಕ್ಕೆ ತುಂಬಾ ಕಟುವಾಗಿ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುವ ಈತ, ರೋಗಿಗಳಿಗೆ ಈಗ ತಾನೇ‌ ಡಾಕ್ಟರ್ ಎಂದು ಹೇಳಿಕೊಳ್ಳುತ್ತಾನೆ. ಟ್ರಿಟ್ಮೆಂಟ್ ತೆಗೆದುಕೊಳ್ಳುವುದಾದರೆ ತೆಗೆದುಕೊಳ್ಳಿ, ಇಲ್ಲಾ ಅಂದ್ರೆ ಹೋಗಿ ಎಂದು ಆವಾಜ್ ಹಾಕುತ್ತಿದ್ದಾನೆ.

ಆರ್ಥೋಪೆಡಿಕ್ ವೈದ್ಯರ ದೀರ್ಘ ರಜೆ

ಆರ್ಥೋಪೆಡಿಕ್ ವೈದ್ಯರು ದೀರ್ಘ ರಜೆಯಲ್ಲಿ ತೆರಳಿದ್ದಾರೆ. ಆದರೆ, ಇಲ್ಲಿ ಬದಲಿ ವೈದ್ಯರನ್ನು ನಿಯೋಜನೆ ಮಾಡಿಲ್ಲ. ವೈದ್ಯರ ಕೊರತೆಯಿಂದಾಗಿ ಡಿ ಗ್ರೂಪ್ ನೌಕರ ತಾನೇ ಚಿಕಿತ್ಸೆ ನೀಡುತ್ತಿದ್ದಾನೆ. ಪಾವಗಡ ಆಸ್ಪತ್ರೆಯ ಈ ಅವ್ಯವಸ್ಥೆಯ ವಿಡಿಯೊ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ಎಕ್ಸ್‌ರೇ ನೋಡುತ್ತಿರುವ ಡಿ ಗ್ರೂಪ್‌ ನೌಕರ ವೀರ ಮದಕರಿ ನಾಯಕ

ಎಕ್ಸ್‌ರೇ ತೆಗೆದು ವಿವರಣೆ

ಈ ಡಿ ಗ್ರೂಪ್‌ ನೌಕರ ವೀರ ಮದಕರಿ ನಾಯಕ ಕಡಿಮೆ ಏನಿಲ್ಲ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಎಕ್ಸ್‌ ರೇ ತೆಗೆದು, ಅದರಲ್ಲಿ ತನಗೆ ಕಂಡಿದ್ದನ್ನು ತೋರಿಸಿ ವಿವರಣೆ ನೀಡುವ ಈತ, ರೋಗಿಗಳಿಗೆ ಪೆಟ್ಟಾದ ಕಾಲು, ಇಲ್ಲವೇ ಕೈಗಳಿಗೆ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಅನ್ನು ಸಹ ಹಾಕುತ್ತಾನೆಂಬ ಆರೋಪ ಕೇಳಿಬಂದಿದೆ.

ಕ್ರಮ ಕೈಗೊಳ್ಳದ ಡಿಎಚ್‌ಒ

ಈ ಬಗ್ಗೆ ಡಿಎಚ್‌ಒ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯ ಯಾವ ಸರ್ಕಾರಿ ಆಸ್ಪತ್ರೆಯಲ್ಲಿ ಎಷ್ಟು ವೈದ್ಯರಿದ್ದಾರೆ? ಅವರು ರಜೆಯಲ್ಲಿದ್ದರೆ ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಏನು ಮಾಡಬೇಕು? ಬದಲಿ ವೈದ್ಯರನ್ನು ವಾರಕ್ಕೆ ಒಮ್ಮೆಯೋ, ಎರಡು ಬಾರಿಯೋ ನಿಯೋಜನೆ ಮಾಡಲು ಏಕೆ ಮುಂದಾಗಿಲ್ಲ ಎಂಬ ಪ್ರಶ್ನೆಗಳು ಎದುರಾಗಿದ್ದು, ಅವರ ನಿರ್ಲಕ್ಷ್ಯಕ್ಕೆ ಸಾರ್ವಜನಿಕವಾಗಿ ತೀವ್ರ ಆಕ್ಷೇಪಣೆಗಳು ವ್ಯಕ್ತವಾಗಿವೆ.

ಇದನ್ನೂ ಓದಿ: Horoscope Today : ಈ ರಾಶಿಯವರು ಇಂದು ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಲೇಬೇಕು!

ಏನಾದರೂ ಅವಘಡವಾದರೆ ಯಾರು ಹೊಣೆ?

ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರಿರುತ್ತಾರೆ. ಹೀಗೆ ಬಂದಾಗ ತಜ್ಞರಲ್ಲದ, ಅದರಲ್ಲೂ ವೈದ್ಯರೇ ಅಲ್ಲದವರು ಚಿಕಿತ್ಸೆ ನೀಡಿದರೆ ಹೇಗೆ? ಒಂದು ವೇಳೆ ಜೀವಕ್ಕೆ ಅಪಾಯವಾದರೆ? ಅಥವಾ ಅಂಗಾಗ ಊನಗೊಂಡರೆ ಏನು ಕಥೆ? ಎಂಬ ಪ್ರಶ್ನೆಯನ್ನು ನಾಗರಿಕರು ಮುಂದಿಡುತ್ತಿದ್ದಾರೆ.

Exit mobile version