ಚಿತ್ರದುರ್ಗ: ಟೊಮ್ಯಾಟೊ ದರ (Tomato Price) ದಿನೇ ದಿನೆ ಏರಿಕೆ ಕಾಣುತ್ತಲೇ ಇದೆ. ಉತ್ತರ ಭಾರತದಲ್ಲಿ (North India) ಭಾರಿ ಮಳೆಯಾಗಿ ಅವಾಂತರವೇ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ತರಕಾರಿ ಸಹಿತ ಟೊಮ್ಯಾಟೊಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಇದೇ ವೇಳೆ ಕರ್ನಾಟಕದ ಟೊಮ್ಯಾಟೊಗೆ ಭಾರಿ ಡಿಮ್ಯಾಂಡ್ ಬಂದಿದೆ. ಇದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಸಾಕಷ್ಟು ಲಾಭವೂ ಆಗುತ್ತಿದೆ. ಇದು ಚಿತ್ರದುರ್ಗ ತಾಲೂಕಿನ ಸೀಗೆಹಳ್ಳಿಯ ರೈತರೊಬ್ಬರ ಯಶೋಗಾಥೆ. 50 ಸಾವಿರ ರೂಪಾಯಿ ಖರ್ಚು ಮಾಡಿ 7.50 ಲಕ್ಷ ಲಾಭ ಪಡೆದಿದ್ದಾರೆ. ಅಂದರೆ ಸರಿಸುಮಾರು 15 ಪಟ್ಟು ಲಾಭವನ್ನು ಪಡೆದುಕೊಂಡಿದ್ದಾರೆ.
ಚಿತ್ರದುರ್ಗ ತಾಲೂಕಿನ ಸೀಗೆಹಳ್ಳಿಯ ರೈತ ರಂಗಸ್ವಾಮಿ ಎಂಬುವವರು ಈಗ ಮೂರೇ ತಿಂಗಳಿಗೆ ಬಂಗಾರದಂತಹ ಬೆಳೆಯನ್ನು ಬೆಳೆದಿದ್ದಾರೆ. ಇವರು 30 ಗುಂಟೆ ಜಾಗದಲ್ಲಿ ಒಟ್ಟು 50 ಸಾವಿರ ರೂಪಾಯಿ ಖರ್ಚು ಮಾಡಿ ಟೊಮ್ಯಾಟೊವನ್ನು ಬೆಳೆದಿದ್ದಾರೆ. ಕೇವಲ ಮೂರು ತಿಂಗಳು ಇವರು ಮಾಡಿರುವ ಕೃಷಿಗೆ ಈ 7.50 ಲಕ್ಷ ರೂಪಾಯಿ ಆದಾಯ ಬಂದಿದೆ.
ಅವರು ಒಟ್ಟು 6,500 ಟೊಮ್ಯಾಟೊ ಸಸಿಗಳನ್ನು (Tomato seedling) ಏಪ್ರಿಲ್ ತಿಂಗಳಿನಲ್ಲಿ ನಾಟಿ ಮಾಡಿದ್ದರು. ಇದುವರೆಗೂ 550 ಬಾಕ್ಸ್ (Tomato Box) ಅನ್ನು ಮಾರಾಟ ಮಾಡಿದ್ದಾರೆ. ಇದರಿಂದಾಗಿ ಅವರಿಗೆ 7.50 ಲಕ್ಷ ರೂಪಾಯಿ ಆದಾಯ ಬಂದಿದೆ. ಇನ್ನು ಮೂರ್ನಾಲ್ಕು ಲಕ್ಷ ರೂಪಾಯಿ ಆದಾಯ ಬರುವ ನಿರೀಕ್ಷೆಯಲ್ಲಿ ರಂಗಸ್ವಾಮಿ ಇದ್ದಾರೆ.
ಇದನ್ನೂ ಓದಿ: Shakti Scheme : ಬಸ್ ನಿಲ್ಲಿಸದ್ದಕ್ಕೆ ಕಲ್ಲೆಸೆದ ವಿದ್ಯಾರ್ಥಿಗಳು; ಗಾಜು ಪೀಸ್ ಪೀಸ್!
ಬಾಕ್ಸ್ ಲೆಕ್ಕದಲ್ಲಿ ಟೊಮ್ಯಾಟೊ ಮಾರಾಟ
ದಾವಣಗೆರೆ ಮಾರ್ಕೆಟ್‌ನಲ್ಲಿ (Davanagere Market) ಈಗ ಬಾಕ್ಸ್ ಲೆಕ್ಕದಲ್ಲಿ ಟೊಮ್ಯಾಟೊ ಮಾರಾಟ ಮಾಡಲಾಗಿದೆ. ಒಂದು ಬಾಕ್ಸ್ ಟೊಮ್ಯಾಟೊಗೆ 2,500 ರೂಪಾಯಿ ದೊರೆಯುತ್ತಿದೆ. ಹೀಗಾಗಿ ರೈತರಿಗೆ ಉತ್ತಮ ಆದಾಯ ಸಿಗುತ್ತಿದೆ. ಎರಡ್ಮೂರು ವರ್ಷದ ಆದಾಯವನ್ನು ರಂಗಸ್ವಾಮಿ ಅವರು ಕೇವಲ ಒಂದೇ ವಾರದಲ್ಲಿ ಪಡೆದುಕೊಂಡಂತೆ ಆಗಿದೆ.