Site icon Vistara News

Gruha Jyothi Scheme: ʼಗೃಹಜ್ಯೋತಿʼ ಯಶಸ್ವಿ ಅನುಷ್ಠಾನ; ಕರ್ನಾಟಕ ಮಾಡೆಲ್‌ ಅನುಸರಿಸಿದ ತೆಲಂಗಾಣ ಸರ್ಕಾರ

Gruha Jyothi Scheme

ಬೆಂಗಳೂರು: ಕರ್ನಾಟಕದಲ್ಲಿ ಗೃಹಜ್ಯೋತಿ ಯೋಜನೆ ಅನುಷ್ಠಾನವು ಯಶಸ್ವಿಗೊಂಡ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯ ದಕ್ಷಿಣ ವಿದ್ಯುತ್ ವಿತರಣಾ ಕಂಪನಿಯ (TSSPDCL) ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಷರಫ್ ಅಲಿ ಫರುಕಿ ಮತ್ತು ಅವರ ತಂಡವು, ತೆಲಂಗಾಣದಲ್ಲಿ ಉಚಿತ ವಿದ್ಯುತ್ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಬೆಸ್ಕಾಂ ನಿಗಮ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಯೋಜನೆ ಕುರಿತು ಮಾಹಿತಿ ಪಡೆದಿದೆ.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಮಹಾಂತೇಶ ಬೀಳಗಿ, ಬೆಸ್ಕಾಂನ ಹಣಕಾಸು ನಿರ್ದೇಶಕರಾದ ದರ್ಶನ್ ಜೆ. ಬೆಸ್ಕಾಂನ ಐಟಿ ಹಾಗೂ ಕಂದಾಯ ವಿಭಾಗದ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಯೋಜನೆ ಕುರಿತು ತೆಲಂಗಾಣ ಅಧಿಕಾರಿಗಳು ಸಭೆ ನಡೆಸಿ ಗೃಹಜ್ಯೋತಿ ಬಗ್ಗೆ ಮಾಹಿತಿ ಪಡೆದಿದ್ದಾರೆ .ಎಸ್.ಎಸ್.ಪಿ.ಡಿ.ಸಿ.ಎಲ್ (TSSPDCL) ನ ನಿರ್ದೇಶಕರಾದ (ವಾಣಿಜ್ಯ) ಕೆ. ಕಮಲು, ಸಿಜಿಎಂ – ಐಟಿ ವಿಭಾಗದ ವಿ. ಶಿವಾಜಿ, ಸಿಜಿಎಂ (ಹಣಕಾಸು) ವಿಭಾಗದ ಪಿ. ಕೃಷ್ಣ ರೆಡ್ಡಿ, ಸಿ.ಮಾದೇವ ರೆಡ್ಡಿ, ಸಂಗರೆಡ್ಡಿ ಉಪಸ್ಥಿತರಿದ್ದರು.

ಇದನ್ನೂ ಓದಿ | KUWJ Conference: ಪತ್ರಕರ್ತರು ಯಾವುದೇ ಕಾರಣಕ್ಕೂ ಸತ್ಯನಿಷ್ಠೆ ಬಿಡಬಾರದು: ಸಿಎಂ ಸಲಹೆ

ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು (congress guarantee) ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲು ಕ್ರಮ ಕೈಗೊಂಡಿದೆ. ಇದರಿಂದ ತಮ್ಮ ರಾಜ್ಯದಲ್ಲೂ ವಿವಿಧ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲು ಮುಂದಾಗಿರುವ ತೆಲಂಗಾಣದ ಕಾಂಗ್ರೆಸ್‌ ಸರ್ಕಾರ, ಕರ್ನಾಟಕದಲ್ಲಿನ ಗೃಹಜ್ಯೋತಿ ಯೋಜನೆ ಮಾದರಿಯಲ್ಲಿ ಉಚಿತ ವಿದ್ಯುತ್‌ ಯೋಜನೆ ಅನುಷ್ಠಾನ ಮಾಡಲು ಮುಂದಾಗಿದೆ.

ತೆಲಂಗಾಣ ಮುಖ್ಯಮಂತ್ರಿಯಾಗುತ್ತಿದ್ದಂತೆ (Telangana Chief Minister), ಚುನಾವಣಾ ಪೂರ್ವ ಭರವಸೆ ನೀಡಿದ್ದ ಎಲ್ಲ ಆರೂ ಗ್ಯಾರಂಟಿಗಳನ್ನು (Six Guarantee) ಜಾರಿಗೆ ತರಲು ಸಿಎಂ ರೇವಂತ್ ರೆಡ್ಡಿ (CM Revanth Reddy) ಅವರು ಒಪ್ಪಿಗೆ ನೀಡಿದ್ದರು. ಆ ಪೈಕಿ, ಹೆಣ್ಣು ಮಕ್ಕಳಿಗೆ ಉಚಿತ ಬಸ್ ಸೇವೆ (Free Bus service for woman) ಮತ್ತು ಬಡವರಿಗೆ ಹತ್ತು ಲಕ್ಷ ರೂ.ವರೆಗೂ ವಿಮೆ (Health Insurance) ಒದಗಿಸುವ ಯೋಜನೆಗಳಿಗೆ ಮೊದಲ ಹಂತದಲ್ಲಿ ಡಿ. 9ರಂದು ಚಾಲನೆ ನೀಡಿದ್ದರು.

ತೆಲಂಗಾಣ ಸರ್ಕಾರದ 6 ಗ್ಯಾರಂಟಿಗಳು ಯಾವುವು?

1.ಮಹಾಲಕ್ಷ್ಮಿ ಯೋಜನೆ
-ಪ್ರತಿ ತಿಂಗಳು ಮಹಿಳೆಗೆ 2,500 ರೂ.
-ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ
-500 ರೂ.ಗೆ ಗ್ಯಾಸ್ ಸಿಲಿಂಡರ್

2.ರೈತು ಭರೋಸಾ
-ಪ್ರತಿ ಎಕರೆಗೆ ರೈತರಿಗೆ 15,000 ರೂ. ಸಾಲ
-ಕೃಷಿ ಕಾರ್ಮಿಕರಿಗೆ 12,000 ರೂ. ಸಾಲ
-500 ರೂ. ಬೋನಸ್

3.ಯುವ ವಿಕಾಸಮ್‌
-ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ 5 ಲಕ್ಷ ರೂ. ವಿದ್ಯಾ ಭರೋಸಾ ಕಾರ್ಡ್
-ರಾಜ್ಯ ಪ್ರತಿ ಮಂಡಲ್‌ನಲ್ಲಿ ತೆಲಂಗಾಣ ಅಂತಾರಾಷ್ಟ್ರೀಯ ಸ್ಕೂಲ್

4.ಇಂದಿರಮ್ಮ ಇಂಡ್ಲು
-ಮನೆ ಇಲ್ಲದವರಿಗೆ ಮನೆ ನಿರ್ಮಾಣಕ್ಕೆ ಭೂಮಿ ಮೇಲೆ 5 ಲಕ್ಷ ರೂ.ವರೆಗೆ ಸಹಾಯ
-ತೆಲಂಗಾಣ ಚಳವಳಿಯಲ್ಲಿ ಭಾಗಿಯಾದವರಿಗೆ 250 ವರ್ಗ ಗಜ ಭೂಮಿ

5.ಗೃಹ ಜ್ಯೋತಿ
-ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ

6.ಹಿರಿಯರಿಗೆ ನೆರವು
-ವೃದ್ಧರಿಗೆ ಪ್ರತಿ ತಿಂಗಳು 4000 ರೂ. ವೃದ್ಧಾಪ್ಯವೇತನ
-10 ಲಕ್ಷ ರೂ.ವರೆಗೂ ರಾಜೀವ ಆರೋಗ್ಯ ಶ್ರೀ ವಿಮೆ

Exit mobile version