ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು (Congress Guarantee) ಸರಿಯಾಗಿ ನಿಭಾಯಿಸಬೇಕು, ಇಲ್ಲವಾದರೆ ಅಪಪ್ರಚಾರಕ್ಕೆ ದಾರಿಯಾಗುತ್ತದೆ ಎಂಬುದನ್ನು ಅರಿತಿರುವ ಸರ್ಕಾರ ಯೋಜನೆಗಳಿಗೆ ಸಂಬಂಧಿಸಿದ ಅನುದಾನವನ್ನು ಸಕಾಲದಲ್ಲಿ ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದೆ. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ (Shakthi scheme) ಟಿಕೆಟ್ ಮೌಲ್ಯಕ್ಕೆ ಪ್ರತಿಯಾಗಿ ಸರ್ಕಾರ ಹಣ ಬಿಡುಗಡೆ ಮಾಡಿದ ಬೆನ್ನಿಗೇ ಈಗ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ (Gruha Jyothi scheme) ಅನುದಾನವನ್ನು ಬಿಡುಗಡೆ ಮಾಡಿದೆ.
ಗೃಹಜ್ಯೋತಿ ಯೋಜನೆಯಡಿ ರಾಜ್ಯದ ಎಲ್ಲಾ ವಿದ್ಯುತ್ ಪೂರೈಕೆ ಸಂಸ್ಥೆ (ಎಸ್ಕಾಂ)ಗಳಿಗೆ ಮುಂಗಡ ಸಹಾಯಧನ ಬಿಡುಗಡೆ ಮಾಡಲಾಗಿದೆ. ಜುಲೈ ತಿಂಗಳ ವಿದ್ಯುತ್ ಬಿಲ್ ಮೊತ್ತವಾಗಿ 476 ಕೋಟಿ ರೂಪಾಯಿ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಜುಲೈ ತಿಂಗಳ ವಿದ್ಯುತ್ ಬಿಲ್‌ಗೆ (ಆಗಸ್ಟ್‌ನಲ್ಲಿ ನೀಡಲಾದ ಬಿಲ್) ಪ್ರತಿಯಾಗಿ ಈ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ.
ಯಾವ ವಿದ್ಯುತ್ ಕಂಪನಿಗೆ ಎಷ್ಟು ಹಣ?
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ): 235.07 ಕೋಟಿ ರೂ.
ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ): 52.73 ಕೋಟಿ ರೂ.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ): 83.48 ಕೋಟಿ ರೂ
ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಗೆಸ್ಕಾಂ): 53.46 ಕೋಟಿ ರೂ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಚೆಸ್ಕಾಂ): 51.26 ಕೋಟಿ ರೂ.
ಒಟ್ಟು: 476 ಕೋಟಿ ರೂಪಾಯಿ
ಆದೇಶದ ಪ್ರಕಾರ ಹಣ ಸ್ವೀಕೃತಿ ಮಾಡುವ ಸಂಸ್ಥೆಗಳು ಅನುಸರಣಾ ವರದಿ ಮತ್ತು ಬಳಕೆಯ ಪ್ರಮಾಣ ಪತ್ರವನ್ನು (Utilization Certificate), ಈ ಪ್ರವರ್ಗದ ಫಲಾನುಭವಿಗಳ ಮಾಹಿತಿಯೊಂದಿಗೆ ಸಲ್ಲಿಸಲು ಸರ್ಕಾರ ಸೂಚನೆ ನೀಡಿದೆ.
ಶಕ್ತಿ ಯೋಜನೆ: ಸಾರಿಗೆ ನಿಗಮಗಳಿಗೆ 294.74 ಕೋಟಿ ರೂ. ಬಿಡುಗಡೆ
‘ಶಕ್ತಿ’ ಯೋಜನೆಯಡಿ ಜುಲೈ ತಿಂಗಳ ಮಹಿಳೆಯರ ಉಚಿತ ಬಸ್ ಪ್ರಯಾಣ ವೆಚ್ಚದ ಮರು ಪಾವತಿಗಾಗಿ 294.74 ಕೋಟಿ ರೂ.ಗಳನ್ನು ಸಾರಿಗೆ ನಿಗಮಗಳಿಗೆ ಬಿಡುಗಡೆ ಮಾಡಲಾಗಿದೆ.
ಯಾವ ಸಾರಿಗೆ ಸಂಸ್ಥೆಗಳಿಗೆ ಎಷ್ಟು ಹಣ?
ಕೆಎಸ್‌ಆರ್‌ಟಿಸಿ ನಿಗಮ: 110.76 ಕೋಟಿ ರೂ.
ಬಿಎಂಟಿಸಿ ನಿಗಮ: 51.31 ಕೋಟಿ ರೂ.
ವಾಯವ್ಯ ಸಾರಿಗೆ ಸಂಸ್ಥೆ: 76.51 ಕೋಟಿ ರೂ.
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ: 56.14 ಕೋಟಿ ರೂ.
ಸಾರಿಗೆ ನಿಗಮಗಳು ಇಟಿಎಂ ಯಂತ್ರದ ಮೂಲಕ ವಿತರಿಸಿದ ಶೂನ್ಯ ಟಿಕೆಟ್ ಆಧಾರದಲ್ಲಿ ಜುಲೈ ತಿಂಗಳ ವಾಸ್ತವಿಕ ವೆಚ್ಚವಾಗಿ 456.58 ಕೋಟಿ ರೂ.ಗಳಿಗೆ ವೆಚ್ಚವಾಗಿದೆ. ಈ ಹಣವನ್ನು ಬಿಡುಗಡೆಗೆ ಕೋರಿ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ, ಸರ್ಕಾರ 294 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದದ್ದು, 162 ಕೋಟಿ ವೆಚ್ಚವನ್ನು ಬಾಕಿ ಉಳಿಸಿಕೊಂಡಿದೆ.
ಇದನ್ನೂ ಓದಿ : Gruha Lakshmi Scheme : ಆಗಸ್ಟ್ 30ಕ್ಕೆ ಗೃಹಲಕ್ಷ್ಮಿ ದುಡ್ಡು ಬರುತ್ತೆ, ನಿಮ್ಗೂ ಹಣ ಬೇಕೆಂದ್ರೆ ತಕ್ಷಣವೇ ಹೀಗೆ ಮಾಡಿ!