ಬೆಂಗಳೂರು: ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಹಣದಲ್ಲಿ ಊರಿನ ಜನಕ್ಕೆಲ್ಲ ಹೋಳಿಗೆ ಊಟ ಹಾಕಿಸಿದ್ದ ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಸುಟ್ಟಟ್ಟಿ ಗ್ರಾಮದ ವೃದ್ಧೆ ಅಕ್ಕಾತಾಯಿ ಲಂಗೋಟಿ ಅವರ ಬಗ್ಗೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ಗೃಹಲಕ್ಷ್ಮೀ ಯೋಜನೆ ಸ್ಥಗಿತ ಮಾಡಲ್ಲ, ನಮ್ಮ ಸರ್ಕಾರ ಇರುವವರೆಗೆ ಗೃಹಲಕ್ಷ್ಮೀಯ ಹಣ ಬಡವರ ಮನೆ ಸೇರುತ್ತದೆ ಎಂಬುದನ್ನು ಆ ಹಿರಿಯ ಜೀವಕ್ಕೆ ಮಾತ್ರವಲ್ಲ ನಾಡಿನ ಪ್ರತಿಯೊಬ್ಬರಿಗೂ ಖಾತ್ರಿಪಡಿಸುತ್ತೇನೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಗೃಹಲಕ್ಷ್ಮೀಯರಿಗೆ ಬೆಲೆಯೇರಿಕೆಯ ಬಿಸಿ ತಟ್ಟದಿರಲಿ ಎಂಬ ಸದುದ್ದೇಶದಿಂದ ನಾವು ಜಾರಿಗೊಳಿಸಿರುವ ಗೃಹಲಕ್ಷ್ಮೀ ಯೋಜನೆ, ಇಂದು ಬಹಳಷ್ಟು ಕುಟುಂಬಗಳ ಪಾಲಿಗೆ ಅಕ್ಷರಶಃ ವರದಾನವಾಗಿದೆ. ಗೃಹಲಕ್ಷ್ಮಿಯ ಹಣ ಮಕ್ಕಳ ವಿದ್ಯಾಭ್ಯಾಸ, ಮನೆಗೆ ದಿನಸಿ, ಹಬ್ಬಕ್ಕೆ ಬಟ್ಟೆ, ಆಸ್ಪತ್ರೆ ಖರ್ಚು ವೆಚ್ಚ ಭರಿಸಲು ಬಳಕೆಯಾದ ಬಹಳಷ್ಟು ಸುದ್ದಿಗಳನ್ನು ಮಾಧ್ಯಮಗಳಲ್ಲಿ ಕಂಡಿದ್ದೆ. ಅವೆಲ್ಲವೂ ಯೋಜನೆಯ ಯಶಸ್ಸಿಗೆ ಹಿಡಿದ ಕನ್ನಡಿಯಂತಿದ್ದವು.
ಆದರೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೋಟಿ ಎಂಬ ಹಿರಿಯ ಜೀವವೊಂದು ತನಗೆ ಬಂದ ಗೃಹಲಕ್ಷ್ಮಿಯ ಹಣದಲ್ಲಿ ಊರಿನ ಜನಕ್ಕೆಲ್ಲ ಹೋಳಿಗೆ ಊಟ ಹಾಕಿ, ಮುತ್ತೈದೆಯರಿಗೆ ಮಡಿಲು ತುಂಬಿರುವ ವೀಡಿಯೊವನ್ನು ನೋಡಿದೆ, ಆ ತಾಯಿ ಸಿದ್ದರಾಮಯ್ಯನಿಗೆ ಒಳಿತಾಗಲೆಂದು ಇದನ್ನು ಮಾಡುತ್ತಿದ್ದೇನೆಂದು ಹೇಳಿದ್ದು ಕೇಳಿ ಮನಸ್ಸು ತುಂಬಿಬಂತು. ಇಂತಹ ಲಕ್ಷಾಂತರ ತಾಯಂದಿರ, ಅಕ್ಕ ತಂಗಿಯರ ಆಶೀರ್ವಾದ, ಹಾರೈಕೆ ನನ್ನ ಜೊತೆಗಿದೆ. ಈ ಪ್ರೀತಿ, ಅಕ್ಕರೆಗಳೇ ನನ್ನ ಬಲ.
ಗೃಹಲಕ್ಷ್ಮಿ ಯೋಜನೆ ನಿಲ್ಲಬಾರದು, ಇದು ಇನ್ನಷ್ಟು ಬಡವರ ಹೊಟ್ಟೆತುಂಬಿಸಲಿ ಎಂದು ಅಕ್ಕಾತಾಯಿ ಲಂಗೋಟಿ ಅವರು ಮನವಿ ಮಾಡಿದ್ದಾರೆ, ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡಲ್ಲ, ನಮ್ಮ ಸರ್ಕಾರ ಇರುವವರೆಗೆ ಗೃಹಲಕ್ಷ್ಮಿಯ ಹಣ ಬಡವರ ಮನೆ ಸೇರುತ್ತದೆ ಎಂಬುದನ್ನು ಈ ಮೂಲಕ ಆ ಹಿರಿಯ ಜೀವಕ್ಕೆ ಮಾತ್ರವಲ್ಲ ನಾಡಿನ ಪ್ರತಿಯೊಬ್ಬರಿಗೂ ಖಾತ್ರಿಪಡಿಸುತ್ತಿದ್ದೇನೆ.
ಇದನ್ನೂ ಓದಿ | Sangolli Rayanna Statue: ನಮ್ಮವರೇ ರಾಯಣ್ಣನನ್ನು ಬ್ರಿಟೀಷರಿಗೆ ಹಿಡಿದುಕೊಟ್ಟರು; ಸಿದ್ದರಾಮಯ್ಯ
ನಮ್ಮ ಮಣ್ಣಿನ ಗುಣವೇ ಹಾಗೆ, ತನಗೆ ಸಿಕ್ಕಿದ್ದನ್ನು ಹಂಚಿ ತಿನ್ನುವ ಔದಾರ್ಯ, ಇನ್ನೊಬ್ಬರ ಒಳಿತು ಬಯಸುವ ನಿಸ್ವಾರ್ಥ ಭಾವವಿದೆ. ಇಂತಹವರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯವೇ ಸರಿ. ಹೀಗಿದ್ದರೂ ಅಕ್ಕಾತಾಯಿ ಲಂಗೋಟಿ ಅವರಲ್ಲಿ ಒಂದು ಸವಿನಯ ವಿನಂತಿ ಇದೆ. “ಊರಿಗೆ ಹೋಳಿಗೆ ಊಟ ಹಾಕುವುದು ಒಳ್ಳೆಯ ಗುಣವೇ ಸರಿ. ಆದರೆ ಗೃಹಲಕ್ಷ್ಮಿ ಯೋಜನೆಯ ಹಣದ ಮೇಲಿನ ಮೊದಲ ಹಕ್ಕು ಸ್ವಂತ ಕುಟುಂಬದ್ದಾಗಿದೆ. ಅಕ್ಕಾತಾಯಿಯಂತಹ ಒಳ್ಳೆಯ ಮನಸ್ಸಿನ ಸೋದರಿಯರು ಈ ಹಣವನ್ನು ಮೊದಲು ತಮ್ಮ ಕುಟುಂಬದ ಸದಸ್ಯರಿಗೆ ಆರೋಗ್ಯಕರವಾದ ಊಟ-ತಿಂಡಿ ಮತ್ತು ಮಕ್ಕಳ ಶಿಕ್ಷಣ ನೀಡಲು ಬಳಸಿದಾಗ ಮಾತ್ರ ಯೋಜನೆಯ ಉದ್ದೇಶ ಈಡೇರಿದಂತಾಗುತ್ತದೆ ಎಂದು ಮನವಿ ಮಾಡಿದ್ದಾರೆ.