ಬೆಂಗಳೂರು, ಕರ್ನಾಟಕ: ಕಾಂಗ್ರೆಸ್ ಸರ್ಕಾರದ (Congress Government) ಐದು ಗ್ಯಾರಂಟಿಗಳಲ್ಲಿ ಮೂರನೇ ಗ್ಯಾರಂಟಿಯಾಗಿರುವ ಗೃಹ ಲಕ್ಷ್ಮೀಗೆ (Gruha Lakshmi Scheme) ಚಾಲನೆ ನೀಡುವ ಸಾಧ್ಯತೆ ಇದೆ. ಗುರುವಾರ ಸಿಎಂ ಸಿದ್ದಾರಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಯೋಜನೆಯ ಚಾಲನೆ ಕುರಿತು ವ್ಯಾಪಕ ಚರ್ಚೆ ನಡೆದಿದೆ. ಶುಕ್ರವಾರದಂದು ಗೃಹ ಲಕ್ಷ್ಮೀ ಯೋಜನೆಗೆ ಯಾವಾಗ ಚಾಲನೆ ನೀಡಲಾಗುತ್ತದೆ ಮತ್ತು ಅರ್ಜಿ ಸ್ವೀಕಾರ ಯಾವಾಗ ಆರಂಭವಾಗುತ್ತದೆ ಎಂಬುದರ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಲಿದ್ದಾರೆ.
ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಗೃಹ ಲಕ್ಷ್ಮೀ ಯೋಜನೆಯಡಿ ಮನೆಯೊಡತಿಗೆ ತಿಂಗಳಿಗೆ 2000 ರೂ. ಹಣ ನೀಡುವುದಾಗಿ ಘೋಷಿಸಿತ್ತು. ಅದರಂತೆ, ಈಗ ತನ್ನ ಭರವಸೆಯನ್ನು ಈಡೇರಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
2024ರ ಲೋಕಸಭೆ ಚುನಾವಣೆಗಾಗಿ ಪ್ರತಿಪಕ್ಷಗಳು ಒಂದಾಗುವ ಪ್ರಯತ್ನಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಜುಲೈ 17 ಮತ್ತು 18ರಂದು ಬೆಂಗಳೂರುಲ್ಲಿ ಪ್ರತಿಪಕ್ಷಗಳ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ, ರಾಹುಲ್ ಗಾಂಧಿ ಅವರು ಆಗಮಿಸುತ್ತಿದ್ದಾರೆ. ಈ ಸಂದರ್ಭವನ್ನು ಬಳಸಿಕೊಂಡು ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರವು ಮುಂದಾಗಿದೆ ಎನ್ನಲಾಗಿದೆ.
ಜುಲೈ 16, 17 ಅಥವಾ 18 ಈ ಮೂರು ದಿನಗಳಲ್ಲಿ ಒಂದು ದಿನವನ್ನು ಆಯ್ಕೆ ಮಾಡಿಕೊಂಡು ಗೃಹ ಲಕ್ಷ್ಮೀ ಯೋಜನೆ ಜಾರಿ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಯಾವ ದಿನಾಂಕದಂದು ಚಾಲನಾ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂಬುದರ ಕುರಿತು ಶುಕ್ರವಾರ ದಿನಾಂಕವನ್ನು ಘೋಷಣೆ ಮಾಡಲಾಗುತ್ತದೆ. ಅಲ್ಲದೇ ದಿನಾಂಕ ನಿಗದಿಯಾಗುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೃಹ ಲಕ್ಷ್ಮೀ ಯೋಜನೆಯ ಅರ್ಜಿ ಸ್ವೀಕಾರದ ದಿನಾಂಕವನ್ನೂ ಪ್ರಕಟಿಸಲಿದ್ದಾರೆ.
ಈ ಸುದ್ದಿಯನ್ನೂ ಓದಿ: Gruhalakshmi Scheme: ಎಚ್ಚರ, ಗೃಹಲಕ್ಷ್ಮಿ ಹೆಸರಲ್ಲಿ ಹುಟ್ಟಿಕೊಂಡಿವೆ ನಕಲಿ ಆ್ಯಪ್‌ಗಳು
ಸನ್ನಡತೆ ಆಧಾರದ ಮೇಲೆ 67 ಕೈದಿಗಳ ಬಿಡುಗಡೆ?
ರಾಜ್ಯದ ವಿವಿಧ ಕಾರಾಗೃಹದಲ್ಲಿರುವಂಥ 67 ಮಂದಿ ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆಗೆ ಸಂಪುಟ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಅದೇ ರೀತಿ, ಕರ್ನಾಟಕ ಸರ್ಕಾರಿ ವ್ಯಾಜ್ಯಗಳ ನಿರ್ವಹಣೆ ವಿಧೇಯಕ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ತಿದ್ದುಪಡಿ ವಿಧೇಯಕ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ತಿದ್ದುಪಡಿ ವಿಧೇಯಕ, ಮೈಸೂರು ಲ್ಯಾಂಪ್ಸ್ ವರ್ಕ್ಸ್ ಲಿ. ಮೌಲ್ಯಮಾಪನ ವಿಧಾನವನ್ನು ಪರಿಷ್ಕರಣೆ, ಕೃಷಿ ಮತ್ತು ತೋಟಗಾರಿಕಾ ಬೆಲೆಗಳ ಸ್ಥಿರೀಕರಣ ಮತ್ತು ಬೆಲೆ ನಿಗದಿ ಮಾಡಲು ಸಚಿವ ಸಂಪುಟ ಉಪಸಮಿತಿ ರಚನೆ, ಆರ್ಟಿಕಲ್ 371ಜೆ ಸಂಬಂಧ ವಿಶೇಷ ಅನುಷ್ಠಾನ ಪ್ರಗತಿಯನ್ನು ಪರಿಶೀಲಿಸಲು ಸಚಿವ ಸಂಪುಟ ಉಪ ಸಮಿತಿ ರಚನೆ ಸೇರಿ ಹಲವು ವಿಧೇಯಕಗಳಿಗೆ ಸಂಪುಟ ಒಪ್ಪಿಗೆ ನೀಡುವ ಸಾಧ್ಯತೆಗಳಿವೆ.
ಸಚಿವ ಸಂಪುಟದ ಇನ್ ಸೈಡ್
-ಗೃಹಲಕ್ಷ್ಮಿ ಯೋಜನೆಗೆ ಕಡ್ಡಾಯ ಆಧಾರ್ ಕಾರ್ಡ್ ಜೋಡಣೆಗೆ ಕಡ್ಡಾಯವಿಲ್ಲ
-ಆಧಾರ್ ಕಾರ್ಡ್ ಜೋಡಣೆಯಾಗದಿದ್ದರೂ ಹಣ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನ
-ಮನೆಯ ಯಜಮಾನಿ ಬ್ಯಾಂಕ್ ಖಾತೆಗೆ 2 ಸಾವಿರ ಹಣ ವರ್ಗಾವಣೆ
-ಸುಮಾರು 22 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಜೋಡಣೆಯಾಗದ ಆಧಾರ್
-ನ್ಯಾಯಾಲಯಗಳಲ್ಲಿ ಆದ್ಯತೆ ಮೇರೆಗೆ ಪ್ರಕರಣಗಳನ್ನ ಕೈಗೆತ್ತಿಕೊಳ್ಳಲು ನಿರ್ಧಾರ
-ಬಿಪಿಎಲ್ ಕಾರ್ಡ್ ದಾರರ ಕುಟುಂಬಗಳ ಪ್ರಕರಣಗಳಿಗೆ ಆದ್ಯತೆ
-ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯಲ್ಲಿ ಸರ್ಕಾರಿ ವಕೀಲರು, ಅಧಿಕಾರಿಗಳಿಗೆ ಹೊಣೆ
-ಈ ಸಂಬಂಧ ಸರ್ಕಾರಿ ವ್ಯಾಜ್ಯಗಳ ನಿರ್ವಹಣಾ ಮಸೂದೆ ಮಂಡಿಸುವ ಪ್ರಸ್ತಾವಕ್ಕೂ ಒಪ್ಪಿಗೆ
-ಗ್ರೂಪ್ ‘ಎ’ ಮತ್ತು ಗ್ರೂಪ್–ಬಿ ವೃಂದದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ, ದಂಡನಾ ಶಿಫಾರಸುಗಳನ್ನು ಪರಿಶೀಲಿಸಲು ಸಂಪುಟ ಉಪ ಸಮಿತಿ ರಚನೆ
-371ಜೆ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲನೆಗೆ ಸಂಪುಟ ಉಪ ಸಮಿತಿ ರಚನೆ
-ಕೃಷಿ ಬೆಲೆ ಆಯೋಗದ ಅವಧಿ ವಿಸ್ತರಣೆ
– ಕರ್ನಾಟಕ ಗೃಹ ಮಂಡಳಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಡೆ ತಾಲ್ಲೂಕಿನ ನಂದಗುಡಿ ಹಾಗೂ ಸುತ್ತಮುತ್ತ ಮತ್ತು ಅದಕ್ಕೆ ಹೊಂದಿಕೊಂಡ ಕೋಲಾರ ಜಿಲ್ಲೆಯ ವಿವಿಧ ಗ್ರಾಮಗಳ 111 ಎಕರೆ 17 ಗುಂಟೆ ಜಮೀನನ್ನು ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವಕ್ಕೆ ಒಪ್ಪಿಗೆ
ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.