ಬೆಳಗಾವಿ: ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ದುಡ್ಡಿನಿಂದ ಊರಿಗೆಲ್ಲ ಹೋಳಿಗೆ ಊಟ ಹಾಕಿಸಿದ ಅಜ್ಜಿ ಅಕ್ಕಾತಾಯಿ ಲಂಗೋಟಿ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಅಜ್ಜಿಗೆ ರೇಷ್ಮೆ ಸೀರೆ ಕಳುಹಿಸಿದ್ದಾರೆ. ಸಚಿವೆ ನೀಡಿದ್ದ ರೇಷ್ಮೆ ಸೀರೆಯನ್ನು ಅಜ್ಜಿಗೆ ನೀಡಿ ಅಧಿಕಾರಿಗಳು ಸನ್ಮಾನಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೂಟಿ ಎಂಬ ಹಿರಿಯ ಜೀವ ಗೃಹಲಕ್ಷ್ಮಿ ಹಣ ಕೂಡಿಟ್ಟು ಸಿದ್ದರಾಮಯ್ಯನವರ ಶ್ರೇಯಸ್ಸಿಗಾಗಿ ಊರಿಗೆಲ್ಲ ಹೋಳಿಗೆ ಊಟ ಹಾಕಿಸಿ, ಐದು ಜನ ಮುತ್ತೈದೆಯರಿಗೆ ಉಡಿ ತುಂಬಿರುವುದು ಗೃಹಲಕ್ಷ್ಮಿ ಯೋಜನೆಯ ಸಾರ್ಥಕ ಕ್ಷಣಕ್ಕೆ ಮತ್ತೊಂದು ಉದಾಹರಣೆ. ಇಂದು ಈ ತಾಯಿಯ ಜೊತೆ ಮಾತನಾಡಿ, ಅವರನ್ನು ಅಭಿನಂದಿಸಿ, ಗೌರವಿಸಿದ್ದೇನೆ ಎಂದು ತಿಳಿಸಿದ್ದಾರೆ.
ವೃದ್ಧೆಗೆ ಸಚಿವೆ ಹೆಬ್ಬಾಳ್ಕರ್ ಅಭಿನಂದನೆ
ರಾಜ್ಯ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಮನೆಯ ಯಜಮಾನಿಯರಿಗೆ ಪ್ರತಿ ತಿಂಗಳು ನೀಡುತ್ತಿರುವ ‘ಗೃಹಲಕ್ಷ್ಮೀ ಯೋಜನೆ ’ ಹಣದಿಂದ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿರುವ ಅಜ್ಜಿಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ‘ಗೃಹಲಕ್ಷ್ಮೀ’ ಜಾರಿಗೆ ತಂದಿದ್ದು ಸಾರ್ಥಕವಾಗುತ್ತಿದೆ ಎಂದು ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೋಟಿ ಎಂಬ ಅಜ್ಜಿ ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣದಿಂದ ಇಡೀ ಊರಿಗೆ ಹಬ್ಬದ ಊಟ ಹಾಕಿಸಿದ್ದಾರೆ. ಅಜ್ಜಿಯ ಈ ನಡೆಗೆ ರಾಜ್ಯದೆಲ್ಲೆಡೆಯಿಂದ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡ ಅಜ್ಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಗೃಹಲಕ್ಷ್ಮೀ ಹಣದಿಂದ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿರುವ ಅಜ್ಜಿ ಅಕ್ಕಾತಾಯಿ ಲಂಗೋಟಿ ಅವರನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ದೂರವಾಣಿ ಮೂಲಕ ಸಂಪರ್ಕಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ. ದೂರವಾಣಿಯಲ್ಲಿ ಅಜ್ಜಿಯೊಂದಿಗೆ ಬಹಳ ಹೊತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅತ್ಯಂತ ಗೌರವ ಮತ್ತು ಸಂಯಮದಿಂದ, ಬೆಳಗಾವಿ ಶೈಲಿಯಲ್ಲೇ ಮಾತನಾಡಿದರು.
ಈಗ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ್ದಿ, ನಿನ್ನ ಮಗಳಾದ ನನಗೆ ಯಾವಾಗ ಊಟ ಹಾಕಿಸುತ್ತೀ ಎನ್ನುವ ಸಚಿವರ ಪ್ರಶ್ನೆಗೆ, ಜರೂರೇ ಬಾ ನಿನಗೂ ಊಟ ಹಾಕಿಸ್ತೀನಿ, ನೀನೇ ನಮಗೆಲ್ಲ ಗೃಹಲಕ್ಷ್ಮೀ ಹಣ ಕೊಡುವ ಮನೆ ಮಗಳು.. ನಿನಗೆ ಇಲ್ಲ ಎನ್ನಲಾಗುವುದೇ ಎಂದು ಅಜ್ಜಿ ಹೇಳಿದ್ದಾರೆ. ಅಜ್ಜಿ ಮಾತುಗಳಿಂದ ಬಹಳ ಸಂತಸಗೊಂಡ ಸಚಿವರು, ನಿನಗೊಂದು ರೇಷ್ಮೆ ಸೀರೆ ಕಳುಹಿಸಿರುವುದಾಗಿ ತಿಳಿಸಿದರು.
ಗೃಹಲಕ್ಷ್ಮೀ ಯೋಜನೆ ನಿಮ್ಮಂತವರ ಮನೆಗೆ ತಲುಪುತ್ತಿರುವುದರಿಂದ ಏನೆಲ್ಲ ಅನುಕೂಲವಾಗುತ್ತಿದೆ ಎಂದು ತಿಳಿದು ಸಂತಸವಾಗುತ್ತಿದೆ, ಬಡ ಜನರ ಬದುಕಿಗೆ ನೆರವಾಗಬೇಕು. ನೊಂದವರ ಬಾಳಲ್ಲಿ ನೆಮ್ಮದಿ ಮೂಡಿಸಬೇಕು ಎಂಬ ತಮ್ಮ ಸರ್ಕಾರದ ಉದ್ದೇಶವನ್ನು ಗೃಹಲಕ್ಷ್ಮೀ ಯೋಜನೆ ಈಡೇರಿಸುತ್ತಿದೆ. ಯೋಜನೆ ಜಾರಿಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಸಚಿವರು ಹೇಳಿದರು.
ತಮ್ಮ ಸಾರ್ವಜನಿಕ ಸಂಪರ್ಕ ಅಧಿಕಾರಿ ಮೂಲಕ ಸಚಿವರು ಅಜ್ಜಿಗೆ ರೇಷ್ಮೆ ಸೀರೆ ಮತ್ತು ಹೋಳಿಗೆ ಕಳುಹಿಸಿ ಕೊಟ್ಟಿದ್ದು, ಅಜ್ಜಿಗೆ ಶಾಲು ಹೊದಿಸಿ ಸನ್ಮಾನ ಮಾಡಲಾಗಿದೆ.
ಇದನ್ನೂ ಓದಿ | Basavaraj Bommai: ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ: ಬೊಮ್ಮಾಯಿ ಕಿಡಿ
ಊರಿಗೆಲ್ಲಾ ಹೋಳಿಗೆ ಊಟ ಹಾಕಿಸಿದ್ದ ಅಜ್ಜಿ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ವೃದ್ಧೆ ಅಕ್ಕಾತಾಯಿ ಲಂಗೋಟಿ ಅವರು ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣದಿಂದ ಊರಿಗೆ ಹೋಳಿಗೆ ಊಟ ಹಾಕಿಸಿದ್ದರು. ಸಿದ್ದರಾಮಯ್ಯನವರು ಪ್ರತಿ ತಿಂಗಳು ನಮಗೆಲ್ಲಾ 2000 ಹಣ ನೀಡ್ತಿದ್ದಾರೆ, ರಾಜಕೀಯವಾಗಿ ಸಿದ್ದರಾಮಯ್ಯನವರು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು. ಹೀಗಾಗಿ ಗ್ರಾಮದ ದೇವತೆಗೆ ಪೂಜೆ ಸಲ್ಲಿಸಿ ಊರಿಗೆ ಹೋಳಿಗೆ ಊಟವನ್ನು ಅಜ್ಜಿ ಹಾಕಿಸಿದ್ದರು. ಅಲ್ಲದೇ ಐದು ಜನ ಮುತ್ತೈದೆಯರಿಗೆ ಉಡಿ ತುಂಬಿ ಹರಸಿದ್ದರು. ಅಜ್ಜಿಯ ಕಾರ್ಯಕ್ಕೆ ಸುಟ್ಟಟ್ಟಿ ಗ್ರಾಮದ ಮಹಿಳೆಯರು ಸಾಥ್ ನೀಡಿದ್ದರು.