Site icon Vistara News

Gruha Lakshmi Scheme : ಗೃಹಲಕ್ಷ್ಮಿ ಯೋಜನೆ ನೋಂದಣಿ ತಾತ್ಕಾಲಿಕ ಸ್ಥಗಿತ!

gruha lakshmi scheme with women in traditional dress

ಬೆಂಗಳೂರು: ಕಾಂಗ್ರೆಸ್‌ ಸಂಪೂರ್ಣ ಬಹುಮತ ಪಡೆಯುವಲ್ಲಿ ಗ್ಯಾರಂಟಿ ಯೋಜನೆಗಳ (Congress Guarantee Scheme) ಘೋಷಣೆ ಸಹಕಾರಿಯಾಗಿದ್ದವು. ಈಗ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಾಲ್ಕು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಅದರಲ್ಲಿ ಪ್ರಮುಖವಾಗಿರುವುದು “ಗೃಹಲಕ್ಷ್ಮಿ” ಯೋಜನೆ (Gruha Lakshmi Scheme) ಆಗಿದೆ. ಈ ಯೋಜನೆಗೆ ಮಹಿಳೆಯರಿಂದ ಅಭೂತಪೂರ್ಯ ಪ್ರತಿಕ್ರಿಯೆಯೂ ದೊರಕಿದೆ. ಈಗಾಗಲೇ ಮೊದಲ ಕಂತಿನ ಹಣ ಬಿಡುಗಡೆಯೂ ಪ್ರಾರಂಭವಾಗಿದೆ. ಈ ಯೋಜನೆಯ ಫಲಾನುಭವಿಗಳಾಗಲು ಯಾವುದೇ ಕಾಲಮಿತಿ ಇಲ್ಲ ಎಂದೂ ಹೇಳಲಾಗಿತ್ತು. ಹೀಗಾಗಿ ಇನ್ನೂ ನೋಂದಣಿ (Gruha Lakshmi Scheme Registration) ಮಾಡಿಸಿಕೊಳ್ಳದವರು ನಿಗದಿತ ಕೇಂದ್ರಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದರು. ಈಗ ಮಹಿಳೆಯರ 2000 ರೂಪಾಯಿ ಪಡೆಯುವ ಕನಸಿಗೆ ಸ್ವಲ್ಪ ಮಟ್ಟಿಗೆ ಬ್ರೇಕ್‌ ಬಿದ್ದಿದೆ. ನೋಂದಣಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಈ ಆಗಸ್ಟ್‌ 30ಕ್ಕೆ ಮೈಸೂರಿನಲ್ಲಿ ಈ ಯೋಜನೆಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಅಧಿಕೃತವಾಗಿ ಚಾಲನೆ ನೀಡಿದ್ದರು. ಗೃಹ ಲಕ್ಷ್ಮಿಯರ ಖಾತೆಗೆ ಅಂದಿನಿಂದಲೇ ಹಣ ಪಾವತಿ ಆರಂಭವಾಗಿತ್ತು. ಸರ್ಕಾರದ ಲೆಕ್ಕಾಚಾರದ ಪ್ರಕಾರ ನೋಂದಣಿಯಾಗಬೇಕಾದ ಒಟ್ಟು ಯಜಮಾನಿಯರ ಸಂಖ್ಯೆ 1.28 ಕೋಟಿ. ಕಳೆದ ಜುಲೈ 20ರಿಂದ ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಇದುವರೆಗೆ ಒಟ್ಟಾರೆಯಾಗಿ 1.12 ಕೋಟಿಗೂ ಹೆಚ್ಚು ಮಹಿಳೆಯರಿಂದ ಅರ್ಜಿ (Application Submission) ಸಲ್ಲಿಕೆಯಾಗಿದೆ. ಇನ್ನೂ 16 ಲಕ್ಷ ಮಹಿಳೆಯರು ನೋಂದಣಿ ಮಾಡಿಸಿಕೊಂಡಿಲ್ಲ. ಕೆಲವರಿಗೆ ತಾಂತ್ರಿಕ ತೊಂದರೆ ಇರುವ ಕಾರಣ ಸಮಸ್ಯೆಯಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಈ ಎಲ್ಲವನ್ನೂ ಸರಿಪಡಿಸಿಕೊಂಡು ನೋಂದಣಿ ಮಾಡಿಸಿಕೊಳ್ಳಲು ಮಹಿಳೆಯರು ಮುಂದಾಗಿದ್ದರು. ಆದರೆ, ಈಗ ಅವರ 2 ಸಾವಿರ ರೂಪಾಯಿ ಪಡೆಯುವ ಆಸೆಗೆ ತಾತ್ಕಾಲಿಕವಾಗಿ ಬ್ರೇಕ್‌ ಬಿದ್ದಿದೆ.

ತಾತ್ಕಾಲಿಕ ಸ್ಥಗಿತ ಮಾಡಲಾಗಿದೆ ಎಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

2000 ನಿರೀಕ್ಷೆಯಲ್ಲಿದ್ದ ಮಹಿಳೆಯರಿಗೆ ಈಗ ಆಘಾತವಾಗಿದೆ. ಹೊಸ ನೋಂದಣಿಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. ನೋಂದಾಯಿತ ಫಲಾನುಭವಿಗಳಿಗೆ ಡಿಬಿಟಿ ಪಾವತಿಯಾಗುತ್ತಿರುವ ಹಿನ್ನೆಲೆಯಲ್ಲಿ ಗೊಂದಲಗಳು ಆಗದಿರಲಿ ಎನ್ನುವ ಕಾರಣ ಹೊಸ ನೋಂದಣಿ ಸ್ಥಗಿತ ಮಾಡಲಾಗಿದೆ ಎಂದು ಸ್ಪಷ್ಟೀಕರಣ ನೀಡಲಾಗಿದೆ. ನೋಂದಾಯಿತ ಫಲಾನುಭವಿಗಳಿಗೆ ಮೊದಲ ಕಂತಿನ ಹಣ ಜಮಾ ಆದ ಬಳಿಕ ಮತ್ತೆ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Department of Women and Child Development) ಸ್ಪಷ್ಟನೆ ನೀಡಿದೆ.

ಟ್ವೀಟ್‌ನಲ್ಲೇನಿದೆ?

“ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿತ ಫಲಾನುಭವಿಗಳ ಖಾತೆಗೆ ರೂ.2000 ಜಮಾಗೊಳಿಸುವ ಪ್ರಕ್ರಿಯೆಯಲ್ಲಿ ಗೊಂದಲವಾಗದಿರಲೆಂದು, ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಶೀಘ್ರವೇ ನೋಂದಣಿ ಪುನರಾರಂಭಗೊಳ್ಳಲಿದೆ” ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಟ್ವೀಟ್‌ ಮಾಡಿದೆ.

ಇದನ್ನೂ ಓದಿ: No Government Rules : ಸಿದ್ದು ಸರ್ಕಾರದಲ್ಲಿ ಬೇಕಾಬಿಟ್ಟಿ ಅಧಿಕಾರಿಗಳ ನಿಯೋಜನೆ; IAS ಜಾಗದಲ್ಲಿ KAS ಅಧಿಕಾರಿ!

ಮತ್ತೆ ಡಿಲೀಟ್‌ ಮಾಡಿದ ಇಲಾಖೆ

ಸರ್ಕಾರದಲ್ಲಿ ಸಮನ್ವಯ ಕೊರತೆ ಕಾಡುತ್ತಿದೆಯೇ ಎಂಬ ಪ್ರಶ್ನೆ ಕಾಡಿದೆ. ಪೋಸ್ಟ್ ಮಾಡಿ, ಒಂದೂವರೆ ಗಂಟೆಯಲ್ಲಿ ಟ್ವೀಟ್ ಅನ್ನು ಅಧಿಕಾರಿಗಳು ಡಿಲೀಟ್ ಮಾಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆಯೇ ಇದಕ್ಕೆ ಕಾರಣ ಎನ್ನಲಾಗಿದೆ.

Exit mobile version