ಬೆಂಗಳೂರು: ರಾಜ್ಯದ ಮಹಿಳೆಯರಿಗೆ ರಾಜ್ಯ ಸರ್ಕಾರ ಕೊನೆಗೂ ಸಿಹಿ ಸುದ್ದಿಯೊಂದನ್ನು ನೀಡಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಯಲ್ಲೊಂದಾದ (Congress Guarantee) ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಜಾರಿ ಸಂಬಂಧ ಅರ್ಜಿ ಸಲ್ಲಿಕೆಗೆ ಮುಹೂರ್ತ ನಿಗದಿಯಾಗಿದೆ. ಇದೇ ಜುಲೈ 17ರ ಸಂಜೆ 5 ಗಂಟೆಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರಿಂದ ಲೋಕಾರ್ಪಣೆಗೊಳಿಸಲಾಗುವುದು. ಒಂದು ವೇಳೆ ಅಂದು ಸಾಧ್ಯವಾಗದೇ ಇದ್ದರೆ ಜುಲೈ 19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಅನಾವರಣಗೊಳಿಸಲಿದ್ದಾರೆ ಎಂದು ಮಹಿಳಾ ಮತ್ತು ಕುಟುಂಬ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದರು.
ವಿಧಾನಸೌಧದಲ್ಲಿ ಶನಿವಾರ (ಜುಲೈ 15) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಈಗ ದಿನಾಂಕವನ್ನು ನಿಗದಿ ಮಾಡಿದ್ದೇವೆ. ಯೋಜನೆ ಅನಾವರಣ ಸಂಬಂಧ ಕಾಂಗ್ರೆಸ್ ಹೈಕಮಾಂಡ್ (Congress high command) ನಾಯಕರ ಕಾಲಾವಕಾಶ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ. ಅವರ ಸಮಯ ನೋಡಿಕೊಂಡು ಅಂತಿಮವಾಗಿ ದಿನಾಂಕವನ್ನು ನಿರ್ಧಾರ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಇದನ್ನೂ ಓದಿ: Congress Guarantee: ಗ್ಯಾರಂಟಿ ಯೋಜನೆಗಳಿಗೆ ಹಣ ಸಂಗ್ರಹಿಸಲು ಅಕ್ರಮ ಸಕ್ರಮಕ್ಕೆ ಮುಂದಾದ ಸರ್ಕಾರ
ಇನ್ನು ಫಲಾನುಭವಿಗಳ ಖಾತೆಗೆ ಹಣ ಹಾಕುವ ಬಗ್ಗೆ ಈಗಾಗಲೇ ತಿಳಿಸಿದಂತೆ ಆಗಸ್ಟ್ 16 ಅಥವಾ 17ರಿಂದ ಖಾತೆಗೆ ಹಣ ಸಂದಾಯ ಮಾಡಲು ಆರಂಭಿಸಲಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಈ ಯೋಜನೆ ಅರ್ಜಿಯು ಕರ್ನಾಟಕ ಒನ್ (Karnataka One), ಗ್ರಾಮ ಒನ್ (Grama One) ಹಾಗೂ ಬಾಪೂಜಿ ಸೇವಾ ಕೇಂದ್ರ (Bapuji Seva Kendra) ಗಳಲ್ಲಿ ಪಡೆಯಬಹುದಾಗಿದೆ. ಎಪಿಎಲ್, ಬಿಪಿಎಲ್, ಅಂತ್ಯೋದಯ ಕಾರ್ಡ್ (APL BPL and Antyodaya Card) ಇದ್ದವರು ಇದರ ಫಲಾನುಭವಿಗಳಾಗಿದ್ದಾರೆ ಎಂದು ತಿಳಿಸಿದರು.
ಫಲಾನುಭವಿಯಾದವರು ಅವರ ಹಾಗೂ ಪತಿಯ ಆಧಾರ್ ಕಾರ್ಡ್ (Aadhar Card) ಅನ್ನು ತೆಗೆದುಕೊಂಡು ಹೋಗಿ ಅರ್ಜಿ ಸಲ್ಲಿಸಬಹುದು. ಆದರೆ, ಪತಿಯು ಜಿಎಸ್‌ಟಿ ಅಥವಾ ಐಟಿ ರಿಟರ್ನ್ ಮಾಡುವವರಾಗಿರಬಾರದು ಎಂದು ಇದೇ ಸಂದರ್ಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಆಧಾರ್ ಕಾರ್ಡ್ ಲಿಂಕ್ ಆಗದಿದ್ದರೆ?
ಆಧಾರ್ ಲಿಂಕ್ ಇಲ್ಲದವರು ಬೇರೆ ಪಾಸ್ ಬುಕ್ (Bank Passbook) ಅನ್ನು ತೆಗೆದುಕೊಂಡು ಹೋಗಬಹುದು. ಆ ಪಾಸ್ ಬುಕ್ ಅನ್ನು ನಾವು ಸಾಫ್ಟ್‌ವೇರ್‌ನಲ್ಲಿ ಅಪ್ಲೋಡ್ ಮಾಡುತ್ತೇವೆ. ಅದು ತಹಸೀಲ್ದಾರ್, ಸಿಇಒ ಅವರ ಬಳಿಗೆ ಅನುಮತಿಗೆ ಹೋಗುತ್ತದೆ. ಅಲ್ಲಿ ಪರಿಶೀಲನೆಯಾಗಿ ಅವರವರ ಮನೆಗಳಿಗೆ ಅನುಮತಿಯ ಪ್ರಮಾಣ ಪತ್ರವನ್ನು ತಲುಪಿಸುತ್ತೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ಅನ್ನು ತೆಗೆದುಕೊಂಡು ಹೋಗಬೇಕು. ಪಾಸ್ ಬುಕ್ ಮತ್ತು ರೇಷನ್ ಕಾರ್ಡ್‌ನಲ್ಲಿ ಒಂದೇ ಹೆಸರು ಇರಬೇಕು. ಗೃಹಲಕ್ಷ್ಮಿ ಯೋಜನೆ ಫಲಾನುಭವಿಯಾಗಲು ಯಾವುದೇ ಕಾಲ ಮಿತಿ ಇಲ್ಲ. 1.28 ಕೋಟಿ ಕುಟುಂಬದವರು ಈ ಯೋಜನೆಗೆ ಅರ್ಹರಿರುತ್ತಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಸಮಯ, ಸ್ಥಳ ನಿಗದಿ
ಸಮಯ, ಸ್ಥಳ, ದಿನಾಂಕವನ್ನು ನಿಗದಿ ಮಾಡಲಾಗುವುದು. ಆ ನಿಗದಿತ ಸಮಯಕ್ಕೆ ಹೋಗಬೇಕಾಗುತ್ತದೆ. ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಸಮಯವನ್ನು ನಿಗದಿ ಪಡಿಸಲಾಗುತ್ತದೆ. ಒಂದು ವೇಳೆ ನಿಗದಿತ ಸಮಯಕ್ಕೆ ಹೋಗಲು ಆಗದೇ ಇದ್ದವರಿಗೆ ಸಂಜೆ 5 ಗಂಟೆ ನಂತರ ಹೋಗಲು ಅವಕಾಶವನ್ನು ಕಲ್ಪಿಸಲಾಗುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಪ್ರಜಾಪ್ರತಿನಿಧಿಗಳ (Prajapratinidhi) ನೇಮಕ, ಇವರಿಗೆ ದುಡ್ಡು ಕೊಡಬೇಡಿ
1 ಸಾವಿರ ಜನಸಂಖ್ಯೆಯಿದ್ದ ಕಡೆಗೆ ಇಬ್ಬರು ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡುತ್ತಿದ್ದೇವೆ. ಇವರಲ್ಲಿ ಒಬ್ಬರು ಮಹಿಳೆ ಮತ್ತು ಒಬ್ಬ ಪುರುಷ ಪ್ರಜಾಪ್ರತಿನಿಧಿಗಳು ಇರುತ್ತಾರೆ. ಇದು ಸಂಪೂರ್ಣ ಉಚಿತವಾಗಿರಲಿದೆ. ಮಧ್ಯವರ್ತಿಗಳು ಕಂಡು ಬಂದರೆ, ಪ್ರಜಾಪ್ರತಿನಿಧಿಗಳ ಸಹಿತ ಯಾರೇ ದುಡ್ಡು ಕೇಳಿದರೂ ದೂರು ಕೊಡಿ. ಅಂಥವರ ಮೇಲೆ ನಾವು ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಇದನ್ನೂ ಓದಿ: Weather report : 4 ದಿನ ಮಳೆ ಅಬ್ಬರ; ದಕ್ಷಿಣ ಒಳನಾಡಿನಲ್ಲಿ ಚಕ್ಕರ್, ಕರಾವಳಿಯಲ್ಲಿ ಹಾಜರ್
8147500500 ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮಾಡಿ
8147500500 ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ (Mobile SMS) ಮಾಡುವುದರ ಮೂಲಕ ಯಾವುದೇ ಸಮಸ್ಯೆಗಳನ್ನು ಕೇಳಬಹುದು.
ಈ ದಿನವೇ ಏಕೆ?
ಇದೇ ಜುಲೈ 18 ಮತ್ತು 19ರಂದು ಮಹಾಘಟ್ ಬಂಧನ ಸಭೆಯು ಬೆಂಗಳೂರಿನಲ್ಲಿ ನಡೆಯುತ್ತಿದೆ. ಇದಕ್ಕೆ ಬಿಜೆಪಿಯೇತರ ಕೆಲವು ಪ್ರಮುಖ ಪಕ್ಷಗಳ ಮುಖಂಡರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಅಲ್ಲದೆ, ಕಾಂಗ್ರೆಸ್ ಹೈಕಮಾಂಡ್ ನಾಯಕರೂ ಬರುತ್ತಿದ್ದಾರೆ. ಹೀಗಾಗಿ ಅವರ ಕೈಯಿಂದಲೇ ಗೃಹಲಕ್ಷ್ಮಿಗೆ ಚಾಲನೆ ನೀಡಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಯೋಜಿಸಿದ್ದರು.