Site icon Vistara News

Gruhajyothi scheme : ಉಚಿತ ವಿದ್ಯುತ್‌ಗೆ ಭರ್ಜರಿ ರೆಸ್ಪಾನ್ಸ್;‌ 17 ದಿನದಲ್ಲಿ 1 ಕೋಟಿ ಗ್ರಾಹಕರ ನೋಂದಣಿ

Gruhajyothi

ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ (Congress Guarantee) ಯೋಜನೆಯಾದ ಗೃಹ ಜ್ಯೋತಿ (Gruhajyothi scheme) ನೋಂದಣಿಗೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದ್ದು, ಕೇವಲ 17 ದಿನದ ಅವಧಿಯಲ್ಲಿ ಹೆಚ್ಚು ಕಡಿಮೆ ಒಂದು ಕೋಟಿ ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ. ಜೂನ್‌ 18ರಂದು ಗೃಹಜ್ಯೋತಿ ನೋಂದಣಿ (Gruhajyothi scheme Registration) ಆರಂಭಗೊಂಡಿದ್ದು, ಜುಲೈ 4ರ ಸಂಜೆ 5 ಗಂಟೆಯ ಹೊತ್ತಿಗೆ ಅರ್ಜಿ ಸಲ್ಲಿಸಿದ ಗ್ರಾಹಕರ ಒಟ್ಟು ಸಂಖ್ಯೆ 97,09,259 ಆಗಿದೆ. ಅಂದರೆ, ಒಂದು ಕೋಟಿ ಗ್ರಾಹಕರನ್ನು ತಲುಪಲು ಇನ್ನು ಕೇವಲ 2,90,741 ಅರ್ಜಿಗಳು ಮಾತ್ರ ಬಾಕಿ ಇದೆ. ಜುಲೈ ಐದರಂದು ಇದು ಒಂದು ಕೋಟಿ ತಲುಪುವುದು ಗ್ಯಾರಂಟಿಯಾಗಿದೆ.

ಪ್ರತಿ ಮನೆಗೆ ಗರಿಷ್ಠ 200 ಯುನಿಟ್‌ ಉಚಿತ ವಿದ್ಯುತ್‌ (Free Electricity) ನೀಡುವ ಗೃಹಜ್ಯೋತಿ ಸ್ಕೀಮ್‌ಗೆ ಜನರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಜೂನ್‌ 18ರಿಂದ ಆರಂಭಗೊಂಡಿರುವ ನೋಂದಣಿ ಪ್ರಕ್ರಿಯೆಯಲ್ಲಿ ಆರಂಭದಲ್ಲಿ ಸ್ವಲ್ಪ ನಿಧಾನಗತಿ ಇದ್ದರೂ ಈಗ ಸರಾಗವಾಗಿ ಸಾಗುತ್ತಿದೆ. ಜೂನ್‌ 27ರಂದು ಒಂದೇ ದಿನ 8,18,741 ಮಂದಿ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದರು. ಮೊದಲ 10 ದಿನಗಳಲ್ಲಿ 77,20,207 ಮಂದಿ ನೋಂದಣಿ ಮಾಡಿಕೊಂಡಿದ್ದು, ದಿನಕ್ಕೆ ಸರಾಸರಿ 8 ಲಕ್ಷ ಮಂದಿ ನೋಂದಣಿ ಮಾಡಿಕೊಂಡಂತಾಗಿದೆ.

ಜೂನ್‌ 18ರಿಂದ ಜುಲೈ 3ರವರೆಗೆ ಒಟ್ಟು 95,12,276 ಮಂದಿ ನೋಂದಣಿ ಮಾಡಿಕೊಂಡಿದ್ದರು. ಜುಲೈ ನಾಲ್ಕರಂದು ಸಂಜೆ 5.30ರವರೆಗೆ 1,96,983 ನೋಂದಣಿ ಮಾಡಿಕೊಂಡಿದ್ದಾರೆ. ಅಲ್ಲಿಗೆ ಒಟ್ಟು 97,09,259 ಮಂದಿ ಅರ್ಜಿ ಸಲ್ಲಿಸಿದಂತಾಗಿದೆ. ಜುಲೈ ನಾಲ್ಕರಂದೇ ಇನ್ನು 2,90,741 ಮಂದಿ ಅರ್ಜಿ ಸಲ್ಲಿಸಿದರೆ ಒಟ್ಟಾರೆ ಅರ್ಜಿ ಸಲ್ಲಿಕೆ ಒಂದು ಕೋಟಿ ತಲುಪಲಿದೆ.

ಯಾವ ವಿಭಾಗದಲ್ಲಿ ಎಷ್ಟು ನೋಂದಣಿ?

ಈಗ ಆಗಿರುವ ಒಟ್ಟು 97,09,259 ಗ್ರಾಹಕರ ನೋಂದಣಿ ಪೈಕಿ ನಾನಾ ವಿಭಾಗದಲ್ಲಿ ಆಗಿರುವ ನೋಂದಣಿಗಳ ಪ್ರಮಾಣ ಹೀಗಿದೆ.

ಬೆಸ್ಕಾಂ: 39,80,901
ಸಿಇಎಸ್‌ಸಿ: 14,94,545
ಜೆಸ್ಕಾಂ: 10,17,080
ಹೆಸ್ಕಾಂ: 20,39,277
ಎಚ್‌ಆರ್‌ಇಸಿಎಸ್‌: 48,436
ಮೆಸ್ಕಾಂ: 11,29,020
ಒಟ್ಟು: 97,09,259

ರಾಜ್ಯದಲ್ಲಿ ಒಟ್ಟು 2.40 ಕೋಟಿ ವಿದ್ಯುತ್‌ ಬಳಕೆದಾರರಿದ್ದಾರೆ ಎಂಬ ಲೆಕ್ಕಾಚಾರವಿದ್ದು, ಅದರಲ್ಲಿ 2.14 ಕೋಟಿ ಗ್ರಾಹಕರು ಗೃಹ ಜ್ಯೋತಿ ವ್ಯಾಪ್ತಿಗೆ ಬರುತ್ತಾರೆ. ಇದೀಗ 17 ದಿನದಲ್ಲಿ ಒಂದು ಕೋಟಿ ಮಂದಿ ನೋಂದಣಿ ಮಾಡಿಕೊಂಡಂತಾಗಿದೆ.

ಈಗಿನ ಲೆಕ್ಕಾಚಾರವನ್ನು ಗಮನಿಸಿದರೆ, ದಿನಕ್ಕೆ ಸರಾಸರಿ 5.7 ಲಕ್ಷ ಮಂದಿ ನೋಂದಣಿ ಮಾಡಿಕೊಂಡಂತಾಗಿದೆ. ನಿಜವೆಂದರೆ, ಮೊದಲ ಹತ್ತು ದಿನದಲ್ಲಿ ನೋಂದಣಿ ಕಾರ್ಯ ವೇಗವಾಗಿತ್ತು. ಹತ್ತೇ ದಿನದಲ್ಲಿ ಸರಕಾರಿ 7.7 ಲಕ್ಷ ಗ್ರಾಹಕರಂತೆ 77 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದರು. ಆದರೆ, ಮುಂದಿನ 8 ದಿನದಲ್ಲಿ ನೋಂದಣಿಯಾಗಿರುವುದು ಕೇವಲ 20 ಲಕ್ಷ ಮಾತ್ರ. ಅಂದರೆ ದಿನಕ್ಕೆ 2.5 ಲಕ್ಷ ಮಾತ್ರ.

ನೀವಿನ್ನೂ ನೋಂದಣಿ ಮಾಡಿಸಿಕೊಂಡಿಲ್ಲವೇ?

ಕುಟುಂಬವೊಂದಕ್ಕೆ ಗರಿಷ್ಠ 200 ಯುನಿಟ್‌ ವಿದ್ಯುತ್‌ ಉಚಿತವಾಗಿ ನೀಡುವ ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಬೇಕೆಂದರೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ನೀವಿನ್ನೂ ನೋಂದಣಿ ಮಾಡಿಕೊಂಡಿಲ್ಲ ಎಂದಾದರೆ ಈ ಅಂಶಗಳನ್ನು ಗಮನಿಸಿ

ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು?

ಗೃಹಜ್ಯೋತಿ ಯೋಜನೆಗೆ ನೀವು ಹತ್ತಿರದ ವಿದ್ಯುತ್‌ ಕಚೇರಿ, ನಾಡಕಚೇರಿ, ಕಂಪ್ಯೂಟರ್‌, ಮೊಬೈಲ್‌, ಲ್ಯಾಪ್‌ಟಾಪ್‌ನಲ್ಲಿ ಅಧಿಕೃತ ಪೋರ್ಟಲ್‌ನಲ್ಲಿ https://sevasindugs.karnataka.gov.in ನಲ್ಲಿ ಲಾಗಿನ್‌ ಆಗುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಬೇಕಿರುವ ದಾಖಲೆಗಳು: ವಿದ್ಯುತ್ ಬಿಲ್‌’ನಲ್ಲಿರುವ ಖಾತೆ ಸಂಖ್ಯೆ, ಗ್ರಾಹಕರ ಆಧಾರ್ ಸಂಖ್ಯೆ ಹಾಗು ಮೊಬೈಲ್ ಸಂಖ್ಯೆಯನ್ನಷ್ಟೇ ನಮೂದಿಸಿದರೆ ಸಾಕು.

ಇದನ್ನೂ ಓದಿ: Free Electricity: ಉಚಿತ ವಿದ್ಯುತ್‌ ಅರ್ಜಿ ಪೋರ್ಟಲ್‌ ಓಪನ್‌ ಆಗ್ತಿಲ್ವಾ? ಈ ಲಿಂಕ್‌ ಬಳಸಿ, ನೇರ ಕನೆಕ್ಟ್‌ ಆಗುತ್ತೆ

Exit mobile version