Site icon Vistara News

Gruhajyoti scheme : ಉಚಿತ ವಿದ್ಯುತ್‌ಗೆ ನೀವಿನ್ನೂ ಅರ್ಜಿ ಹಾಕಿಲ್ಲವೇ? ಜುಲೈ 27 ಲಾಸ್ಟ್‌ ಡೇಟ್‌!

Last date for Gruhajyoti applicatiin

ಬೆಂಗಳೂರು: ಪ್ರತಿ ಕುಟುಂಬಕ್ಕೆ 200 ಯುನಿಟ್‌ವರೆಗೆ ವಿದ್ಯುತ್‌ ನೀಡುವ ರಾಜ್ಯದ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ (Congress Guarantee) ಗೃಹ ಜ್ಯೋತಿ ಯೋಜನೆ (Gruhajyoti scheme) ನೀವಿನ್ನೂ ಅರ್ಜಿ ಹಾಕಿಲ್ಲವೇ? ಹಾಗಿದ್ದರೆ ತ್ವರೆ ಮಾಡಿ. ಯಾಕೆಂದರೆ, ಅರ್ಜಿ ಸಲ್ಲಿಸಲು ಜುಲೈ 27 ಕೊನೆಯ ದಿನ (Last date for application) ಎಂದು ಇಂಧನ ಖಾತೆ ಸಚಿವ ಕೆ.ಜೆ. ಜಾರ್ಜ್‌ (Minister KJ George) ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ.

ಗೃಹ ಜ್ಯೋತಿ (Gruhajyothi scheme) ನೋಂದಣಿಗೆ ಆರಂಭದಲ್ಲಿ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿತ್ತು. ಈಗ ಕೆಲವು ದಿನಗಳಿಂದ ನಿಧಾನಗತಿಯಲ್ಲಿ ಸಾಗುತ್ತಿದೆ. ಆರಂಭದ ದಿನಗಳಲ್ಲಿ ದಿನಕ್ಕೆ 7ರಿಂದ 8 ಲಕ್ಷ ನೋಂದಣಿ ಆಗುತ್ತಿದ್ದರೆ ಈಗ ದಿನಕ್ಕೆ 1ರಿಂದ 2 ಲಕ್ಷ ಮಾತ್ರ ನೋಂದಣಿ ಆಗುತ್ತಿದೆ. ರಾಜ್ಯದಲ್ಲಿ 2.14 ಕೋಟಿ ಅರ್ಹ ಗ್ರಾಹಕರಿದ್ದಾರೆ. ಆದರೆ, ಇದುವರೆಗೆ ಕೇವಲ 50% ಗ್ರಾಹಕರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ.

ಗೃಹ ಜ್ಯೋತಿ ನೋಂದಣಿಗೆ ಅಂತಿಮ ಗಡು ಏನೂ ಇಲ್ಲವಾದರೂ ಆಗಸ್ಟ್‌ ತಿಂಗಳ ಮೊದಲ ವಾರದಲ್ಲಿ ಬರುವ ಜುಲೈ ತಿಂಗಳ ವಿದ್ಯುತ್‌ ಬಳಕೆಯ ಬಿಲ್‌ ಶೂನ್ಯ ಬರಬೇಕಾದರೆ ಅದಕ್ಕಿಂತ ಮೊದಲು ನೋಂದಣಿ ಮಾಡಿಕೊಳ್ಳಲೇಬೇಕು. ಇದಕ್ಕಾಗಿ ಈಗ ಅಂತಿಮ ಗಡುವನ್ನು ನೀಡಲಾಗಿದೆ. ಆಗಸ್ಟ್‌ ತಿಂಗಳು ಬರುವ ಬಿಲ್‌ ಶೂನ್ಯ ಆಗಿರಬೇಕು ಅಂತಿದ್ದರೆ ನೀವು ಜುಲೈ 26 ಇಲ್ಲವೇ 27ರ ಒಳಗೆ ನೋಂದಣಿ ಮಾಡಿಕೊಳ್ಳಲೇಬೇಕು. ಈ ಗಡುವನ್ನು ದಾಟಿದರೆ ಶೂನ್ಯ ಬಿಲ್‌ ಬರುವುದಿಲ್ಲ. ಎಂದಿನಂತೆ ಮನೆಯ ಬಳಕೆಗೆ ಅನುಸಾರವಾಗಿ ರೆಗ್ಯುಲರ್‌ ಬಿಲ್‌ ಬರಲಿದೆ. ಆಗಸ್ಟ್‌ ಆರಂಭದಲ್ಲಿ ಬಿಲ್‌ ಬಂದಾದ ಪಕ್ಕದ ಮನೆಯವರಿಗೆ ಶೂನ್ಯ ಬಿಲ್‌ ಬಂದಿದೆ, ನಮಗೆ ಬಂದಿಲ್ಲ ಎಂದು ಬೇಸರ ಮಾಡಿಕೊಳ್ಳುವ ಮೊದಲು ಆದಷ್ಟು ಬೇಗನೆ ನೋಂದಣಿ ಮಾಡಿಸಿಕೊಳ್ಳಿ ಎಂದು ಗೃಹ ಸಚಿವ ಜಾರ್ಜ್‌ ಹೇಳಿದ್ದಾರೆ.

ಬರೀ ನೋಂದಣಿಯಾದರೆ ಸಾಕಾಗುವುದಿಲ್ಲ.. ಇದೆ ಹಲವು ಪ್ರಕ್ರಿಯೆ

ಗ್ರಾಹಕರು ತಮ್ಮ ಮನೆಯ ವಿದ್ಯುತ್‌ ಖಾತೆ ಸಂಖ್ಯೆ ಮತ್ತು ಆಧಾರ್‌ ನಂಬರ್‌ ಬಳಸಿ ಸೇವಾ ಸಿಂಧು ಪೋರ್ಟಲ್‌ ಅಥವಾ ಅದಕ್ಕೆಂದೇ ನಿಗದಿಯಾದ ಆಪ್‌ ಮೂಲಕ ಸುಲಭದಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಹೆಚ್ಚಿನ ಸಂದರ್ಭದಲ್ಲಿ ಸಲ್ಲಿಕೆಯಾದ ಅರ್ಜಿಗಳೆಲ್ಲವನ್ನೂ ಸೇವಾ ಸಿಂಧು ಪೋರ್ಟಲ್‌ ಸ್ವೀಕರಿಸುತ್ತದೆ. ಆದರೆ, ನಿಜವಾಗಿ ಅರ್ಜಿ ಸ್ವೀಕಾರವಾಗಿದೆಯೇ? ಉಚಿತ ವಿದ್ಯುತ್‌ಗೆ ಅರ್ಹತೆ ದೊರೆತಿದೆಯೇ ಎಂದು ಪರಿಶೀಲಿಸಬೇಕಾಗುತ್ತದೆ.

ಈ ರೀತಿ ಅರ್ಹತೆಯನ್ನು ಪರಿಶೀಲಿಸಿಕೊಳ್ಳಲು ಕೂಡಾ ಇಲಾಖೆ ಒಂದು ಲಿಂಕನ್ನು ನೀಡಿದೆ. ಅದರ ಮೂಲಕ ಚೆಕ್‌ ಮಾಡಿದಾಗ ಒಂದೋ ಅರ್ಜಿ ಸ್ವೀಕಾರಗೊಂಡು ಅರ್ಹತೆ ಲಭಿಸಿದೆ ಅಂತಲೋ, ಅರ್ಜಿ ಪರಿಶೀಲನೆಯಲ್ಲಿದೆ ಅಂತಲೋ ಅಥವಾ ಅರ್ಜಿ ತಿರಸ್ಕೃತವಾಗಿದೆ ಅಂತಲೋ ಸಂದೇಶ ಬರುತ್ತದೆ. ಒಂದೊಮ್ಮೆ ಅರ್ಹರಾಗಿದ್ದೀರಿ ಎಂಬ ಸಂದೇಶ ಬಂದರೆ ಮುಂದೆ ಫಾಲೋಅಪ್‌ ಮಾಡಬೇಕಾಗಿಲ್ಲ. ಒಂದು ವೇಳೆ ಪರಿಶೀಲನೆಯಲ್ಲಿದೆ ಎಂಬ ಸಂದೇಶ ಬಂದರೆ ಮುಂದಿನ ದಿನಗಳಲ್ಲಿ ಮತ್ತೆ ಚೆಕ್‌ ಮಾಡಬೇಕಾಗುತ್ತದೆ. ತಿರಸ್ಕೃತವಾಗಿದೆ ಎಂಬ ಸಂದೇಶ ಬಂದರೆ ಮರು ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ ಅಥವಾ ನಿಯಮಾವಳಿಗಳನ್ನು ಮರಳಿ ಪರಿಶೀಲಿಸಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಈ ಎಲ್ಲ ಪ್ರಕ್ರಿಯೆಗಳಿಗೆ ಕನಿಷ್ಠ ಕೆಲವು ದಿನಗಳಾದರೂ ಬೇಕಾಗುತ್ತದೆ. ಹೀಗಾಗಿ ಅಂತಿಮ ದಿನದವರೆಗೆ ಕಾಯದೆ ಆದಷ್ಟು ಬೇಗನೆ ನೋಂದಣಿ ಮಾಡಿಕೊಂಡು ಅರ್ಹತೆಯನ್ನು ಪರಿಶೀಲಿಸಿ, ಉಚಿತ ವಿದ್ಯುತ್‌ ಖಾತ್ರಿ ಮಾಡಿಕೊಳ್ಳುವುದು ಉತ್ತಮ.

ಕೊನೆಯ ದಿನ ನೋಂದಣಿ ಮಾಡಿಕೊಂಡರೆ ಅದರ ಅರ್ಹತೆಯನ್ನು ಪರಿಶೀಲಿಸಲು ಅವಕಾಶವೇ ಸಿಗುವುದಿಲ್ಲ. ಕೊನೆಯ ದಿನಾಂಕದ ಹೊತ್ತಿಗೆ ಅರ್ಜಿ ಇನ್ನೂ ಪರಿಶೀಲನೆಯಲ್ಲೇ ಇದ್ದರೆ ಅಥವಾ ತಿರಸ್ಕೃತವಾಗಿದ್ದರೆ ಆಗಸ್ಟ್‌ ಮೊದಲ ವಾರದಲ್ಲಿ ಬರುವ ಬಿಲ್‌ ಪೂರ್ಣ ರೂಪದಲ್ಲೇ ಇರುತ್ತದೆ, ಶೂನ್ಯ ಬಿಲ್‌ ಆಗಿರುವುದಿಲ್ಲ.

ಇದಕ್ಕೆ ಕೊನೆಯ ದಿನಾಂಕ ಇಲ್ಲ.. ಆದರೆ,

ವಿದ್ಯುತ್‌ ನೋಂದಣಿಗೆ ಕೊನೆಯ ದಿನಾಂಕವೇನೂ ಇಲ್ಲ. ಆದರೆ, ಪ್ರತಿ ತಿಂಗಳ ವಿದ್ಯುತ್‌ ಲೆಕ್ಕಾಚಾರ ಮಾಡಬೇಕಾಗಿರುವುದರಿಂದ ಆದಷ್ಟು ಬೇಗನೆ ಅರ್ಹ ಮತ್ತು ಅಗತ್ಯ ಇರುವ ಫಲಾನುಭವಿಗಳು ನೋಂದಣಿ ಮಾಡಿಕೊಳ್ಳುವ ಅಗತ್ಯವಿದೆ. ಇಂಧನ ಖಾತೆ ಸಚಿವ ಕೆ.ಜೆ. ಜಾರ್ಜ್‌ ಅವರ ಪ್ರಕಾರ, ಮೂರು ತಿಂಗಳವರೆಗೂ ಈ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ.

ಆದರೆ, ಗ್ರಾಹಕರು ಆದಷ್ಟು ಬೇಗನೆ ನೋಂದಣಿ ಮಾಡಿಕೊಳ್ಳುವುದು ಅನಿವಾರ್ಯ. ಯಾಕೆಂದರೆ, ಈಗಾಗಲೇ ಜುಲೈ ತಿಂಗಳಲ್ಲಿ 10ನೇ ದಿನಾಂಕ. ಬಂದಿದೆ. ಜುಲೈ ತಿಂಗಳ ವಿದ್ಯುತ್‌ ಬಳಕೆ ಲೆಕ್ಕಾಚಾರ ಈಗಾಗಲೇ ಆರಂಭವಾಗಿದ್ದು, ಆಗಸ್ಟ್‌ ಆರಂಭದಲ್ಲೇ ಬಿಲ್‌ ಬರಲಿದೆ.

ಈ ಬಿಲ್‌ ಬರುವ ಹೊತ್ತಿಗೆ ನೋಂದಣಿಯಾಗಿದ್ದರೆ ಮಾತ್ರ ಝೀರೋ ಬಿಲ್‌ ಬರಲಿದೆ. ನೋಂದಣಿ ಮಾಡಿಕೊಳ್ಳದಿದ್ದರೆ ಪೂರ್ಣ ಪ್ರಮಾಣದಲ್ಲಿ ಬಿಲ್‌ ಕಟ್ಟಬೇಕಾಗುತ್ತದೆ. ಇನ್ನು ಗೃಹಜ್ಯೋತಿ ನೋಂದಣಿ ಮಾಡಿಕೊಂಡಿದ್ದರೂ ಅದು ಸ್ವೀಕರಿಸಲ್ಪಟ್ಟಿದೆಯೇ ಎನ್ನುವುದನ್ನು ಮತ್ತೊಮ್ಮೆ ಕ್ರಾಸ್‌ ಚೆಕ್‌ ಮಾಡಿಕೊಳ್ಳಬೇಕಾಗುತ್ತದೆ. ಒಂದೊಮ್ಮೆ ನೋಂದಣಿ ಆಗದೆ ಇದ್ದರೆ ಏನು ಸಮಸ್ಯೆ ಎಂದು ಪರಿಶೀಲಿಸಬೇಕಾಗುತ್ತದೆ. ಹೀಗಾಗಿ ಸಮಯಾವಕಾಶ ಬೇಕಾಗುತ್ತದೆ. ಇದರಿಂದಾಗಿ ತ್ವರಿತವಾಗಿ ನೋಂದಣಿ ಮಾಡಿಕೊಳ್ಳುವುದು ಉತ್ತಮ.

ವಿಧಾನಸಭೆಯಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದೇನು?

ವಿಧಾನಸಭೆ

ಗೃಹ ಜ್ಯೋತಿ ಯೋಜನೆಯಡಿ ಜುಲೈ ತಿಂಗಳ ಬಿಲ್ ಶೂನ್ಯವಾಗಿ ಬರಬೇಕು ಎಂದರೆ ಈ ತಿಂಗಳ 26, 27ರ ತನಕ ಜನ ಅರ್ಜಿ ಹಾಕಬಹುದು. ಈ ತಿಂಗಳ ಬಿಲ್ ಮುಂದಿನ ತಿಂಗಳ ಮೊದಲ ವಾರ ಬರುತ್ತದೆ. ಆಗ ಅರ್ಜಿ ಪರಿಶೀಲಿಸಿ ಶೂನ್ಯ ಬಿಲ್‌ ಮಾಡಲು ಸಮಯ ಬೇಕಾಗುತ್ತದೆ. ಹೀಗಾಗಿ ಜುಲೈ 26, 27ರ ಒಳಗೇ ಅರ್ಜಿ ಸಲ್ಲಿಸಿ.

ಹಾಗಂತ, ಗೃಹ ಜ್ಯೋತಿ ಅನುಕೂಲ ಪಡೆಯಲು ಕೊನೆಯ ದಿನಾಂಕ ಎಂದೇನಿಲ್ಲ. ಯಾವಾಗ ಬೇಕಾದರೂ ಹಾಕಬಹುದು. ಎರಡು ತಿಂಗಳ ಅವಕಾಶ ಕೊಡಲಾಗುತ್ತದೆ. ಅರ್ಜಿ ಸ್ವೀಕರಿಸಿ ಓಕೆ ಆದ ಬಳಿಕದ ತಿಂಗಳಿನಿಂದ ಶೂನ್ಯ ಬಿಲ್‌ ಬರುತ್ತದೆ.

ಇನ್ನೂ ಅರ್ಜಿ ಸಲ್ಲಿಸದ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಮುಂದಿನ ಎರಡು ತಿಂಗಳ ಕಾಲ ಎಲ್ಲ ವಿದ್ಯುತ್‌ ಇಲಾಖೆ ಕಚೇರಿಗಳಲ್ಲಿ ಅದಾಲತ್ ನಡೆಸುತ್ತೇವೆ. ಯಾರೆಲ್ಲ ಗೃಹಜ್ಯೋತಿಯಡಿ ಅರ್ಜಿ ಹಾಕುವುದರಿಂಧ ಬಿಟ್ಟು ಹೋಗಿದಾರೋ ಅವರಿಗಾಗಿ ಈ ಅದಾಲತ್ ನಡೆಯಲಿದೆ. ಆದಷ್ಟು ಎಲ್ಲ ಅರ್ಹರಿಗೂ ಉಚಿತ ವಿದ್ಯುತ್ ಕೊಡಲು ಪ್ರಯತ್ನ ಮಾಡುತ್ತೇವೆ ಎಂದು ವಿಧಾನಸಭೆಯಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದರು.

ನೀವಿನ್ನೂ ನೋಂದಣಿ ಮಾಡಿಸಿಕೊಂಡಿಲ್ಲವೇ?

ಕುಟುಂಬವೊಂದಕ್ಕೆ ಗರಿಷ್ಠ 200 ಯುನಿಟ್‌ ವಿದ್ಯುತ್‌ ಉಚಿತವಾಗಿ ನೀಡುವ ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಬೇಕೆಂದರೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ನೀವಿನ್ನೂ ನೋಂದಣಿ ಮಾಡಿಕೊಂಡಿಲ್ಲ ಎಂದಾದರೆ ಈ ಅಂಶಗಳನ್ನು ಗಮನಿಸಿ

ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು?

ಗೃಹಜ್ಯೋತಿ ಯೋಜನೆಗೆ ನೀವು ಹತ್ತಿರದ ವಿದ್ಯುತ್‌ ಕಚೇರಿ, ನಾಡಕಚೇರಿ, ಕಂಪ್ಯೂಟರ್‌, ಮೊಬೈಲ್‌, ಲ್ಯಾಪ್‌ಟಾಪ್‌ನಲ್ಲಿ ಅಧಿಕೃತ ಪೋರ್ಟಲ್‌ನಲ್ಲಿ https://sevasindugs.karnataka.gov.in ನಲ್ಲಿ ಲಾಗಿನ್‌ ಆಗುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಬೇಕಿರುವ ದಾಖಲೆಗಳು: ವಿದ್ಯುತ್ ಬಿಲ್‌’ನಲ್ಲಿರುವ ಖಾತೆ ಸಂಖ್ಯೆ, ಗ್ರಾಹಕರ ಆಧಾರ್ ಸಂಖ್ಯೆ ಹಾಗು ಮೊಬೈಲ್ ಸಂಖ್ಯೆಯನ್ನಷ್ಟೇ ನಮೂದಿಸಿದರೆ ಸಾಕು.

ಇದನ್ನೂ ಓದಿ: Gruhajyoti Scheme : ಉಚಿತ ವಿದ್ಯುತ್‌ ನೋಂದಣಿಗೆ ಯಾಕಿಷ್ಟು ನಿರಾಸಕ್ತಿ? Offer Closes soon!
ಇದನ್ನೂ ಓದಿ: Gruha Jyoti Scheme: ಗೃಹಜ್ಯೋತಿಗೆ ಅರ್ಜಿ ಸಲ್ಲಿಸಿದ್ದೀರಾ? ಸ್ವೀಕೃತವಾಗಿದೆಯೋ, ಇಲ್ಲವೋ ಪರಿಶೀಲಿಸಿಕೊಳ್ಳಿ!

ನೋಂದಣಿ ಆಗಿದೆಯೇ ಎಂದು ಚೆಕ್‌ ಮಾಡಿ

ಒಂದೊಮ್ಮೆ ನೀವು ನೋಂದಣಿ ಮಾಡಿಕೊಂಡಿದ್ದರೂ ನಿಮ್ಮ ಅರ್ಜಿ ಸ್ವೀಕೃತವಾಗಿದೆಯೇ ಎಂದು ಪರಿಶೀಲಿಸಬೇಕಾಗುತ್ತದೆ. ಕೆಲವೊಮ್ಮೆ ಸ್ವೀಕೃತವಾಗದೆ ಇರುವ ಸಾಧ್ಯತೆಯೂ ಇದೆ. ಹೀಗಿದ್ದರೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗುತ್ತದೆ. ನಿಮ್ಮ ಅರ್ಜಿ ಸ್ವೀಕೃತವಾಗಿದೆಯೇ ಎಂದು ಚೆಕ್‌ ಮಾಡಲು ಈ ಲಿಂಕ್‌ ಕ್ಲಿಕ್‌ ಮಾಡಿ

ಅರ್ಜಿಯನ್ನು ಸರ್ಕಾರದಿಂದ ಪರಿಶೀಲನೆ ಮಾಡಿ ಒಪ್ಪಿಗೆ ಸೂಚಿಸಿದಲ್ಲಿ ‘Gruhajyothi scheme your application successful’ ಎಂದು ತೋರಿಸಲುತ್ತದೆ. ಇಲ್ಲವಾದಲ್ಲಿ ‘your application for Gruhajyothi scheme is received and sent to ESCOM for processing’ ಎಂದು ತೋರಿಸುತ್ತದೆ. ಒಂದು ವೇಳೆ ಅರ್ಜಿ ತಿರಸ್ಕೃತವಾಗಿದ್ದಲ್ಲಿ ‘your application rejected’ ಎಂದು ತೋರಿಸುತ್ತದೆ. ಇದನ್ನು ಗಮನಿಸಿ ಮುಂದಿನ ಕ್ರಮ ಕೈಗೊಳ್ಳಿ…

Exit mobile version