ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ (Congress Guarantee) ಯೋಜನೆಯಾದ ಗೃಹ ಜ್ಯೋತಿ (Gruhajyothi scheme) ನೋಂದಣಿಗೆ ಆರಂಭದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಜನರ ಪ್ರತಿಕ್ರಿಯೆ ತೀರಾ ಕಡಿಮೆಯಾಗಿದ್ದು, ನಿರಾಸಕ್ತಿ ಕಾಣುತ್ತಿದೆ. ಜೂನ್ 18ರಂದು ಆರಂಭವಾದ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಗರಿಷ್ಠ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ನೋಂದಣಿಯಲ್ಲಿ ಜುಲೈ 9ರವರೆಗೆ ಕೇವಲ 1.02 ಕೋಟಿ ಗ್ರಾಹಕರು ಮಾತ್ರ ನೋಂದಣಿಯಾಗಿದೆ (Gruhajyoti scheme Registration). ಇದು ಆರಂಭದ ಉತ್ಸಾಹಕ್ಕೆ ಹೋಲಿಸಿದರೆ ಭಾರಿ ನಿರಾಶಾಯಕವಾಗಿದೆ.
ಸೇವಾ ಸಿಂಧು ಪೋರ್ಟಲ್‌ನಲ್ಲಿ ಗೃಹ ಜ್ಯೋತಿ ನೋಂದಣಿ ಆರಂಭವಾದಾಗ ಜನರು ಮುಗಿಬಿದ್ದಿದ್ದರು. ಆರಂಭಿಕ ಹಂತದಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಎದುರಾದಾಗ ರಾದ್ಧಾಂತಗಳೇ ಆಗಿಹೋಗಿದ್ದವು. ಆರಂಭಿಕ ಹಂತದಲ್ಲಿ ದಿನಕ್ಕೆ 8ರಿಂದ 9 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದರು. ಕೇವಲ ಹತ್ತೇ ದಿನದಲ್ಲಿ 77 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದರು. ಜುಲೈ ಒಂಬತ್ತಕ್ಕೆ ನೋಂದಣಿ ಆರಂಭಗೊಂಡು 22 ದಿನಗಳು ಕಳೆದಿವೆ. ಈಗಲೂ ನೋಂದಣಿ 10.2 ಕೋಟಿ ದಾಟಿಲ್ಲ. ಅಂದರೆ ಕಳೆದ 13 ದಿನಲ್ಲಿ ಆಗಿರುವ ಒಟ್ಟಾರೆ ನೋಂದಣಿ 25 ಲಕ್ಷವನ್ನೂ ದಾಟಿಲ್ಲ. ಅಂದರೆ ಕಳೆದ ಕೆಲವು ದಿನಗಳಿಂದ ದಿನಕ್ಕೆ 1ರಿಂದ 2 ಲಕ್ಷವಷ್ಟೇ ನೋಂದಣಿ ಆಗಿದೆ.
ಜೂನ್ 27ರಂದು ಒಂದೇ ದಿನ 8,18,741 ಮಂದಿ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದರು. ಮೊದಲ 10 ದಿನಗಳಲ್ಲಿ 77,20,207 ಮಂದಿ ನೋಂದಣಿ ಮಾಡಿಕೊಂಡಿದ್ದು, ದಿನಕ್ಕೆ ಸರಾಸರಿ 8 ಲಕ್ಷ ಮಂದಿ ನೋಂದಣಿ ಮಾಡಿಕೊಂಡಂತಾಗಿತ್ತು. ಆದರೆ, ಜುಲೈ 5ರಂದು ನೋಂದಣಿ ಒಂದು ಕೋಟಿ ತಲುಪಿತ್ತು. ಆದರೆ, ಬಳಿಕ ಇನ್ನೂ ನಿಧಾನಗತಿಯನ್ನು ಕಾಣುತ್ತಿದೆ.
ರಾಜ್ಯದಲ್ಲಿ ಒಟ್ಟು 2.1೪ ಕೋಟಿ ಗೃಹ ಬಳಕೆದಾರರಿದ್ದಾರೆ. ಇವರ ಪೈಕಿ ಈವರೆಗೆ ಸುಮಾರು 1.02 ಕೋಟಿ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು 50% ಕೂಡಾ ನೋಂದಣಿ ಮಾಡಿಕೊಂಡಿಲ್ಲ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಈ ನೋಂದಣಿ ಪ್ರಮಾಣ ಕಡಿಮೆಯಾಗಿದೆ.
ಇದಕ್ಕೆ ಕೊನೆಯ ದಿನಾಂಕ ಇಲ್ಲ.. ಆದರೆ,
ವಿದ್ಯುತ್ ನೋಂದಣಿಗೆ ಕೊನೆಯ ದಿನಾಂಕವೇನೂ ಇಲ್ಲ. ಆದರೆ, ಪ್ರತಿ ತಿಂಗಳ ವಿದ್ಯುತ್ ಲೆಕ್ಕಾಚಾರ ಮಾಡಬೇಕಾಗಿರುವುದರಿಂದ ಆದಷ್ಟು ಬೇಗನೆ ಅರ್ಹ ಮತ್ತು ಅಗತ್ಯ ಇರುವ ಫಲಾನುಭವಿಗಳು ನೋಂದಣಿ ಮಾಡಿಕೊಳ್ಳುವ ಅಗತ್ಯವಿದೆ. ಇಂಧನ ಖಾತೆ ಸಚಿವ ಕೆ.ಜೆ. ಜಾರ್ಜ್ ಅವರ ಪ್ರಕಾರ, ಮೂರು ತಿಂಗಳವರೆಗೂ ಈ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ.
ಆದರೆ, ಗ್ರಾಹಕರು ಆದಷ್ಟು ಬೇಗನೆ ನೋಂದಣಿ ಮಾಡಿಕೊಳ್ಳುವುದು ಅನಿವಾರ್ಯ. ಯಾಕೆಂದರೆ, ಈಗಾಗಲೇ ಜುಲೈ ತಿಂಗಳಲ್ಲಿ 10ನೇ ದಿನಾಂಕ. ಬಂದಿದೆ. ಜುಲೈ ತಿಂಗಳ ವಿದ್ಯುತ್ ಬಳಕೆ ಲೆಕ್ಕಾಚಾರ ಈಗಾಗಲೇ ಆರಂಭವಾಗಿದ್ದು, ಆಗಸ್ಟ್ ಆರಂಭದಲ್ಲೇ ಬಿಲ್ ಬರಲಿದೆ.
ಈ ಬಿಲ್ ಬರುವ ಹೊತ್ತಿಗೆ ನೋಂದಣಿಯಾಗಿದ್ದರೆ ಮಾತ್ರ ಝೀರೋ ಬಿಲ್ ಬರಲಿದೆ. ನೋಂದಣಿ ಮಾಡಿಕೊಳ್ಳದಿದ್ದರೆ ಪೂರ್ಣ ಪ್ರಮಾಣದಲ್ಲಿ ಬಿಲ್ ಕಟ್ಟಬೇಕಾಗುತ್ತದೆ. ಇನ್ನು ಗೃಹಜ್ಯೋತಿ ನೋಂದಣಿ ಮಾಡಿಕೊಂಡಿದ್ದರೂ ಅದು ಸ್ವೀಕರಿಸಲ್ಪಟ್ಟಿದೆಯೇ ಎನ್ನುವುದನ್ನು ಮತ್ತೊಮ್ಮೆ ಕ್ರಾಸ್ ಚೆಕ್ ಮಾಡಿಕೊಳ್ಳಬೇಕಾಗುತ್ತದೆ. ಒಂದೊಮ್ಮೆ ನೋಂದಣಿ ಆಗದೆ ಇದ್ದರೆ ಏನು ಸಮಸ್ಯೆ ಎಂದು ಪರಿಶೀಲಿಸಬೇಕಾಗುತ್ತದೆ. ಹೀಗಾಗಿ ಸಮಯಾವಕಾಶ ಬೇಕಾಗುತ್ತದೆ. ಇದರಿಂದಾಗಿ ತ್ವರಿತವಾಗಿ ನೋಂದಣಿ ಮಾಡಿಕೊಳ್ಳುವುದು ಉತ್ತಮ.
ಗ್ರಾಹಕರಿದ್ದಲ್ಲೇ ಹೋಗಿ ನೋಂದಣಿಗೆ ಪ್ಲ್ಯಾನ್?
ಈಗ ಗೃಹಜ್ಯೋತಿ ನೋಂದಣಿ ಸೇವಾಸಿಂಧು ಪೋರ್ಟಲ್, ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬೆಂಗಳೂರು ಒನ್ ಸೇವಾ ಕೇಂದ್ರಗಳ ಮೂಲಕ ನಡೆಯುತ್ತಿದೆ. ಮುಂದೆ ಅಗತ್ಯಬಿದ್ದರೆ ಗ್ರಾಹಕರಿದ್ದಲ್ಲಿಗೆ ಹೋಗಿ ಹೆಸರು ನೋಂದಾಯಿಸಿಕೊಳ್ಳಲು ಎಸ್ಕಾಂಗಳು ಚಿಂತನೆ ನಡೆಸುತ್ತಿವೆ. ಅದರಲ್ಲೂ ನೀರಸ ಪ್ರತಿಕ್ರಿಯೆ ಇರುವ ಕಡೆಗಳಿಗೆ ತೆರಳಿ ನೋಂದಣಿ ಮಾಡುವ ಬಗ್ಗೆ ಯೋಚನೆ ನಡೆದಿದೆ.
ಮನೆ ಮನೆ ಸಮೀಕ್ಷೆ ಅಥವಾ ನಿರ್ದಿಷ್ಟ ಪ್ರದೇಶದಲ್ಲಿ ಸೇವಾ ಕೇಂದ್ರ ತೆರೆದು, ಪರಿಣಾಮಕಾರಿಯಾಗಿ ನೋಂದಣಿ ಪ್ರಕ್ರಿಯೆ ಕೈಗೊಳ್ಳುವ ಯೋಚನೆ ಇದೆ ಎನ್ನಲಾಗಿದೆ.
ನೀವಿನ್ನೂ ನೋಂದಣಿ ಮಾಡಿಸಿಕೊಂಡಿಲ್ಲವೇ?
ಕುಟುಂಬವೊಂದಕ್ಕೆ ಗರಿಷ್ಠ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಬೇಕೆಂದರೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ನೀವಿನ್ನೂ ನೋಂದಣಿ ಮಾಡಿಕೊಂಡಿಲ್ಲ ಎಂದಾದರೆ ಈ ಅಂಶಗಳನ್ನು ಗಮನಿಸಿ
ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು?
ಗೃಹಜ್ಯೋತಿ ಯೋಜನೆಗೆ ನೀವು ಹತ್ತಿರದ ವಿದ್ಯುತ್ ಕಚೇರಿ, ನಾಡಕಚೇರಿ, ಕಂಪ್ಯೂಟರ್, ಮೊಬೈಲ್, ಲ್ಯಾಪ್‌ಟಾಪ್‌ನಲ್ಲಿ ಅಧಿಕೃತ ಪೋರ್ಟಲ್‌ನಲ್ಲಿ https://sevasindugs.karnataka.gov.in ನಲ್ಲಿ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಬೇಕಿರುವ ದಾಖಲೆಗಳು: ವಿದ್ಯುತ್ ಬಿಲ್’ನಲ್ಲಿರುವ ಖಾತೆ ಸಂಖ್ಯೆ, ಗ್ರಾಹಕರ ಆಧಾರ್ ಸಂಖ್ಯೆ ಹಾಗು ಮೊಬೈಲ್ ಸಂಖ್ಯೆಯನ್ನಷ್ಟೇ ನಮೂದಿಸಿದರೆ ಸಾಕು.
ಇದನ್ನೂ ಓದಿ : Gruhajyothi Scheme: 1 ಕೋಟಿ ತಲುಪಿದ ಗೃಹಜ್ಯೋತಿ ಯೋಜನೆ ನೋಂದಣಿ
ನೋಂದಣಿ ಆಗಿದೆಯೇ ಎಂದು ಚೆಕ್ ಮಾಡಿ
ಒಂದೊಮ್ಮೆ ನೀವು ನೋಂದಣಿ ಮಾಡಿಕೊಂಡಿದ್ದರೂ ನಿಮ್ಮ ಅರ್ಜಿ ಸ್ವೀಕೃತವಾಗಿದೆಯೇ ಎಂದು ಪರಿಶೀಲಿಸಬೇಕಾಗುತ್ತದೆ. ಕೆಲವೊಮ್ಮೆ ಸ್ವೀಕೃತವಾಗದೆ ಇರುವ ಸಾಧ್ಯತೆಯೂ ಇದೆ. ಹೀಗಿದ್ದರೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗುತ್ತದೆ. ನಿಮ್ಮ ಅರ್ಜಿ ಸ್ವೀಕೃತವಾಗಿದೆಯೇ ಎಂದು ಚೆಕ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ
ಅರ್ಜಿಯನ್ನು ಸರ್ಕಾರದಿಂದ ಪರಿಶೀಲನೆ ಮಾಡಿ ಒಪ್ಪಿಗೆ ಸೂಚಿಸಿದಲ್ಲಿ ‘Gruhajyothi scheme your application successful’ ಎಂದು ತೋರಿಸಲುತ್ತದೆ. ಇಲ್ಲವಾದಲ್ಲಿ ‘your application for Gruhajyothi scheme is received and sent to ESCOM for processing’ ಎಂದು ತೋರಿಸುತ್ತದೆ. ಒಂದು ವೇಳೆ ಅರ್ಜಿ ತಿರಸ್ಕೃತವಾಗಿದ್ದಲ್ಲಿ ‘your application rejected’ ಎಂದು ತೋರಿಸುತ್ತದೆ. ಇದನ್ನು ಗಮನಿಸಿ ಮುಂದಿನ ಕ್ರಮ ಕೈಗೊಳ್ಳಿ.