ಬೆಂಗಳೂರು: ರಾಜ್ಯದಲ್ಲೀಗ ಹೊಸ ಟ್ಯಾಕ್ಸ್ ಆರಂಭವಾಗಿದೆ. ದೇಶದಲ್ಲಿ ಜಿಎಸ್‌ಟಿ ಇದ್ದ ಹಾಗೆ, ಈಗ ರಾಜ್ಯದಲ್ಲಿ ವೈಎಸ್‌ಟಿ ತೆರಿಗೆ ಶುರುವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಸಿಎಂ ಸಿದ್ದರಾಮಯ್ಯ (CM siddaramaiah) ಮತ್ತು ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ (yathindra siddaramaiah) ಬಗ್ಗೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದವರೊಂದಿಗೆ ಭಾನುವಾರ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ರಾಜ್ಯದಲ್ಲಿ ವೈಎಸ್‌ಟಿ ತೆರಿಗೆ ಬಂದಿದೆ. ಇದರ ಬಗ್ಗೆ ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಜನ ಮಾತನಾಡುವುದನ್ನು ನಾನು ಸದನದಲ್ಲಿ ಪ್ರಸ್ತಾಪ ಮಾಡುತ್ತೇನೆ. ನನಗೆ ಯಾವುದೇ ಮುಜುಗರ ಇಲ್ಲ. ಯಾರ ಬಳಿಯೂ ನಾನು 5 ರೂಪಾಯಿ ತಗೆದುಕೊಂಡಿಲ್ಲ. ನನಗೆ ಮಾತನಾಡೋಕೆ ನೈತಿಕತೆ ಇದೆ ಎಂದು ಹೇಳಿದರು.
ಇದನ್ನೂ ಓದಿ: Pratap Simha : ಸಂಸದ ಪ್ರತಾಪ್ ಸಿಂಹ ವಿರುದ್ಧ ಅವಹೇಳನಕಾರಿ ಕಮೆಂಟ್; ಮುಖ್ಯ ಪೇದೆ ಅಮಾನತು
ಏನಿದು ವೈಎಸ್‌ಟಿ ಟ್ಯಾಕ್ಸ್?
ವೈಎಸ್‌ಟಿ ಟ್ಯಾಕ್ಸ್ ಅಂದರೆ ಏನು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಚ್.ಡಿ. ಕುಮಾರಸ್ವಾಮಿ, ಅದನ್ನು ನೀವೆ ಡೀಪ್ ಆಗಿ ನೋಡಿ, ಗೊತ್ತಾಗುತ್ತದೆ ಎಂದಷ್ಟೇ ಹೇಳಿದರು. ಈ ಮೂಲಕ “ಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್” ಎಂದು ಪರೋಕ್ಷ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ YST ಬಗ್ಗೆ ಎಚ್‌ಡಿಕೆ ಹೇಳಿದ್ದೇನು? ಇಲ್ಲಿದೆ ವಿಡಿಯೊ
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ಟಾರ್ಗೆಟ್?
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಪರೋಕ್ಷವಾಗಿ ಟಾರ್ಗೆಟ್ ಮಾಡಿದರೇ ಎಂಬ ಅನುಮಾನವೂ ಮೂಡತೊಡಗಿದೆ. ಪದೇ ಪದೆ ಪರೋಕ್ಷವಾಗಿ ಯತೀಂದ್ರ ಸಿದ್ದರಾಮಯ್ಯ ಬಗ್ಗೆ ಉಲ್ಲೇಖ ಮಾಡುತ್ತಾ ಬರುತ್ತಿದ್ದಾರೆ. ಕಳೆದ ವಾರ ಟ್ವೀಟ್ ಮೂಲಕ ಆಕ್ರೋಶವನ್ನು ಹೊರಹಾಕಿದ್ದರು. ಟ್ರಾನ್ಸ್‌ಫರ್ ದಂಧೆಯ ಹಿಂದೆ ಇರುವ ಅತೀಂದ್ರ ಶಕ್ತಿ, ರಿಮೋಟ್ ಕಂಟ್ರೋಲ್ ಯಾವುದು ಎಂದು ಟ್ವೀಟ್ ಮಾಡಿದ್ದರು. ಈಗ ವೈಎಸ್‌ಟಿ ಎಂದು ಆರೋಪ ಮಾಡಿದ್ದಾರೆ. ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.
ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ; ವಿಡಿಯೊ ಇಲ್ಲಿದೆ
ಸಮನ್ವಯತೆ ಕೊರತೆ
ಸಚಿವರು ಮತ್ತು ಸಿಎಂ ನಡುವೆ ಸಮನ್ವಯದ ಕೊರತೆ ಎದುರಾಗಿದೆ. ಇಲ್ಲಿ ಹಲವಾರು ಜನ ಸಿಎಂ ಇದ್ದಾರೆ. ಸಿದ್ದರಾಮಯ್ಯ ಒಬ್ಬರೇನಾ ಸಿಎಂ ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು. ಅಕ್ಕಿಯನ್ನು 15 ದಿನದಲ್ಲಿ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಸಚಿವ ಸತೀಶ್ ಜಾರಕಿಹೊಳಿ ಅವರು ಆಗಸ್ಟ್ ಎಂದು ಹೇಳುತ್ತಾರೆ. ಈ ಆಡಳಿತದಲ್ಲಿ ಎಷ್ಟು ಜನ ಸಿಎಂ ಇದ್ದೀರಾ? ಎಷ್ಟು ಜನ ಮಾತನಾಡುತ್ತೀರಾ? ನಿಮ್ಮ ಹೈಕಮಾಂಡ್ ಎಷ್ಟು ಜನಕ್ಕೆ ಅಧಿಕಾರ ನೀಡಿದೆ? ಎಂದು ಲೇವಡಿ ಮಾಡಿದರು.
ಈ ಸರ್ಕಾರ ಪಾರದರ್ಶಕವಾಗಿಲ್ಲ ಎಂಬುದು ಜಗಜ್ಜಾಹಿರಾಗಿದೆ. ಟ್ರಾನ್ಸ್‌ಫರ್ ಶುರುವಾಗದೆ ಇಷ್ಟು ನಡೆದಿದೆ. ಇನ್ನು ಅದು ಅಧಿಕೃತವಾಗಿ ಶುರುವಾದರೆ ಇನ್ನೂ ಏನೇನು ನಡೆಯತ್ತದೋ? ಅಧಿಕಾರಿಗಳನ್ನು ಮಧ್ಯರಾತ್ರಿ ಒಂದು ಗಂಟೆವರೆಗೂ ಕೂರಿಸಿಕೊಂಡು ಯಾಕೆ ಸಭೆ ನಡೆಸಬೇಕು? ಅನೌಪಚಾರಿಕ ಸ್ಥಳದಲ್ಲಿ ಕೂರಿಸಿಕೊಂಡು ಸಭೆ ನಡೆಸುವ ಅನಿವಾರ್ಯತೆ ಏನಿತ್ತು? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು. ಯಾರು ಸಭೆ ನಡೆಸಿದರು ಎಂಬ ಪ್ರಶ್ನೆಗೆ, ಸಭೆ ನಡೆಸಿದವರನ್ನೇ ಕೇಳಿ ಎಂದು ಹೇಳಿದರು.
ಇದನ್ನೂ ಓದಿ: Weather Report: ರಾಜ್ಯಕ್ಕಿಲ್ಲ ಮುಂಗಾರು ಮೋಡಿ; ಮಳೆ ನೋಡಿ ನಾಟಿ ಮಾಡಿ
ತೃತೀಯ ರಂಗಕ್ಕೆ ಕರೆದಿಲ್ಲ, ನಾವೇಕೆ ಹೋಗೋಣ?
ತೃತೀಯ ರಂಗ ಸಭೆಗೆ ನಮ್ಮನ್ನು ಕರೆದಿಲ್ಲ. ಕರೆಯದೇ ನಾವ್ಯಾಕೆ ಹೋಗೋಣ. ಕರೆಯದಿರುವ ಮನೆಗೆ ಹೋದರೆ ಅದೆನೋ ಗಾದೆ ಮಾತು ಇದೆಯಲ್ಲವೇ? ಹಾಗೆ ಆಗುತ್ತದೆ. ನಮ್ಮದು ಸಣ್ಣ ಪಕ್ಷ, ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ. ಒಂದು ಚುನಾವಣೆ ಸೋತರೆ ಪಕ್ಷ ಮುಳುಗಲ್ಲ. ಈ ಪಕ್ಷಕ್ಕೆ ಇತಿಹಾಸವಿದೆ. ಅಷ್ಟು ಸುಲಭವಾಗಿ ಜಗ್ಗಲ್ಲ. ನಮ್ಮ ಪಕ್ಷದಲ್ಲಿ ಕೆಲಸ ಮಾಡುವವರಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.