Site icon Vistara News

ಸಹಕಾರ ಸಂಘಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ: ಕೆಂದ್ರ, ರಾಜ್ಯ ಸರ್ಕಾರಕ್ಕೆ ಜಿ.ಟಿ. ದೇವೇಗೌಡ ಮನವಿ

ಜಿ.ಟಿ.ದೇವೇಗೌಡ

ಬೆಂಗಳೂರು: ಈ ಹಿಂದೆ ರೈತರಿಗೆ ಅವಶ್ಯಕವಾದ ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳು ಮತ್ತು ಕೃಷಿ ಉಪಕರಣಗಳು ನೇರವಾಗಿ ಟಿಎಪಿಸಿಎಂಎಸ್‌ ನಂತಹ ಸಹಕಾರ ಸಂಘಗಳ ಮೂಲಕ ರೈತರಿಗೆ ಹಂಚಿಕೆಯಾಗುತ್ತಿತ್ತು. ಈ ಕ್ಷೇತ್ರಕ್ಕೆ ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣದ ನಂತರ ಖಾಸಗಿ ಕಂಪನಿಗಳು ಲಗ್ಗೆ ಇಟ್ಟ ಕಾರಣ ವ್ಯಾಪಾರ ವಹಿವಾಟು ಕುಂಠಿತವಾಗಿದೆ. ಹೀಗಾಗಿ ಸಹಕಾರ ಸಂಘಗಳ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶಾಸಕ, ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ ಮನವಿ ಮಾಡಿದರು.

ನಗರದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದಲ್ಲಿ ಮಾಜಿ ಕೇಂದ್ರ ಸಚಿವ ಹಾಗೂ ಹೊಸ ರಾಷ್ಟ್ರೀಯ ಸಹಕಾರ ನೀತಿ ಕರಡು ಸಮಿತಿ ಅಧ್ಯಕ್ಷ ಸುರೇಶ್ ಪ್ರಭು ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಹೊಸ ರಾಷ್ಟ್ರೀಯ ಸಹಕಾರ ನೀತಿ ಕರಡು ಸಮಿತಿ ಸಭೆಯಲ್ಲಿ ಮಾತನಾಡಿದರು.

ಈಗ ಸರ್ಕಾರದ ನೀತಿಯಿಂದಾಗಿ ಬ್ಯಾಂಕ್‌ಗಳಲ್ಲಿ ರೈತರಿಗೆ ಹೆಚ್ಚು ಸಾಲ ಸೌಲಭ್ಯ ದೊರಕುತ್ತಿಲ್ಲ. ಕೇಂದ್ರ ಸರ್ಕಾರ ವಾಣಿಜ್ಯ ಬ್ಯಾಂಕುಗಳಿಗೆ ನಷ್ಟ ಭರಿಸಲು ಕೋಟ್ಯಂತರ ರೂಪಾಯಿಗಳನ್ನು ನೀಡಿದೆ. ಆದರೆ ರೈತರಿಗೆ ಸಾಲ ಸೌಲಭ್ಯ ನೀಡುವ ಸಹಕಾರ ಬ್ಯಾಂಕುಗಳಿಗೆ ಹಾಗೂ ಸಹಕಾರ ಕ್ಷೇತ್ರಕ್ಕೆ ಒಂದು ಬಾರಿಯಾದರೂ ಹಣಕಾಸಿನ ನೆರವು ನೀಡಿಲ್ಲ. ಈಗಲಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕಾರ ಸಂಸ್ಥೆಗಳಿಗೆ ಹೆಚ್ಚು ಪ್ರೋತ್ಸಾಹಧನ ನೀಡಬೇಕು ಎಂದು ಹೇಳಿದರು.

ಇದನ್ನೂ ಓದಿ | SCST ಮೀಸಲು | ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಬೇಡಿಕೆ ಇದೆ: ಎಂಟಿಬಿ ನಾಗರಾಜ್‌

ಸಹಕಾರ ಸಂಘಗಳಿಗೆ ಸೆಕ್ಷನ್ 80ಪಿ ತೆರಿಗೆ ವಿಧಿಸುತ್ತಿರುವುದು ಸರಿಯಿಲ್ಲ. ಸಹಕಾರಿ ಸಂಸ್ಥೆಗಳಲ್ಲಿ ಆಡಿಟ್ ನಡೆದು ಪಾರದರ್ಶಕ ಲೆಕ್ಕವಿರುತ್ತದೆ. ಲಾಭ ಬಂದರೆ ಅದರ ಸದಸ್ಯರಿಗೆ ಡಿವಿಡೆಂಟ್ ಕೊಡುತ್ತಾರೆ. ತೆರಿಗೆ ವಿಧಿಸುತ್ತಿರುವುದನ್ನು ವಿರೋಧಿಸಿ ಮಾಜಿ ಹಣಕಾಸು ಸಚಿವ ಚಿದಂಬರಂ ಅವರ ಕಾಲದಲ್ಲಿ ಬಿಜೆಪಿ ವತಿಯಿಂದ ತೆರಿಗೆ ಕೈಬಿಡುವಂತೆ ಪ್ರತಿಭಟನೆಗೆ ಮಾಡಲಾಗಿತ್ತು. ಈಗ ತಾವು ಹಿರಿಯ ಸಹಕಾರಿಗಳಾಗಿ ತೆರಿಗೆ ಪದ್ಧತಿಯನ್ನು ಕೈಬಿಡುವಂತೆ ಸರ್ಕಾರಕ್ಕೆ ತಿಳಿಸಬೇಕು. ಸಹಕಾರ ವಿಷಯದಲ್ಲಿ ಸಹಕಾರ ಶಿಕ್ಷಣ, ತರಬೇತಿ ಪಡೆದವರಿಗೆ ಉದ್ಯೋಗದಲ್ಲಿ ಮೀಸಲಾತಿ ಮೀಸಲಾತಿ ನೀಡುವ ಸಂಬಂಧ ರಾಷ್ಟ್ರೀಯ ಕರಡು ಸಹಕಾರ ನೀತಿಯಲ್ಲಿ ಮಾರ್ಗಸೂಚಿಯನ್ನು ಅಳವಡಿಸಬೇಕೆಂದು ಸುರೇಶ್‌ ಪ್ರಭು ಅವರನ್ನು ಕೋರಿದರು.

ರಾಷ್ಟ್ರೀಯ ಸಹಕಾರ ನೀತಿ ಕರಡು ಸಮಿತಿ ಅಧ್ಯಕ್ಷ ಸುರೇಶ್ ಪ್ರಭು ಅವರು ಮಾತನಾಡಿ, ಸಹಕಾರ ಕ್ಷೇತ್ರವನ್ನು ಬಲಪಡಿಸಿ ಸಮಗ್ರ ಅಭಿವೃದ್ಧಿಗಾಗಿ ನೂತನ ನೀತಿ ರಚಿಸಲಾಗುತ್ತಿದ್ದು, ಇದಕ್ಕೆ ತಮ್ಮೆಲ್ಲರ ಸಹಕಾರ ಅವಶ್ಯಕವಾಗಿದೆ ಎಂದು ಹೇಳಿದರು. ಈ ವೇಳೆ ಸಹಕಾರ ಕ್ಷೇತ್ರದ ವ್ಯವಹಾರ ಮತ್ತು ಆಡಳಿತದ ಎಲ್ಲಾ ಅಂಶಗಳನ್ನು ಒಳಗೊಂಡ ಪ್ರಮುಖ ವಿಷಯಗಳ ಕುರಿತು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಪ್ರಸ್ತಾಪಿಸಿದರು.

ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ.ಎಮ್.ಎನ್.ರಾಜೇಂದ್ರಕುಮಾರ್, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಹಕಾರ ಸಂಘಗಳ ನಿಬಂಧಕ ಕ್ಯಾಪ್ಟನ್ ಕೆ. ರಾಜೇಂದ್ರ, ಮಹಾಮಂಡಳದ ನಿರ್ದೇಶಕರಾದ ಜಿ.ಪಿ ಪಾಟೀಲ್, ಭೂಕಾಂತ್ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ | ರಸ್ತೆ ಗುಂಡಿ ಕಾರಣಕ್ಕೆ ಮಹಿಳೆ ಸಾವಿನ ತನಿಖೆಗೆ ಆದೇಶ ನೀಡಿದ ಸಿಎಂ ಬೊಮ್ಮಾಯಿ: ಬಿಬಿಎಂಪಿ ಅಧಿಕಾರಿಗಳಲ್ಲಿ ನಡುಕ

Exit mobile version