ಬೆಂಗಳೂರು: ಹಾವೇರಿ ಮೂಲದ ರೈತ ಫಕೀರಪ್ಪ ಅವರು ಪಂಚೆ ಧರಿಸಿದ್ದ ಹಿನ್ನೆಲೆಯಲ್ಲಿ ಜಿ.ಟಿ.ಮಾಲ್ (GT World Mall) ಪ್ರವೇಶಕ್ಕೆ ನಿರಾಕರಿಸಿದ ಘಟನೆಗೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಆಡಳಿತ ಮಂಡಳಿ ಕ್ಷಮೆಯಾಚಿಸಿತ್ತು. ಬಳಿಕ ಬಿಬಿಎಂಪಿ ಅಧಿಕಾರಿಗಳು ಮಾಲ್ ಅನ್ನು ಒಂದು ವಾರದ ಕಾಲ ಬಂದ್ ಮಾಡಿಸಿದ್ದಾರೆ. ಇದೀಗ ಮಾಲೀಕ ಎಸ್.ಟಿ.ಆನಂದ್ ಅವರು ರೈತ ಫಕೀರಪ್ಪ ಅವರನ್ನು ಮನೆಗೆ ಆಹ್ವಾನಿಸಿ ಸನ್ಮಾನ ಮಾಡಿದ್ದು, ಸಿಬ್ಬಂದಿಯಿಂದ ನಡೆದಿದ್ದ ಅಚಾತುರ್ಯಕ್ಕೆ ಕ್ಷಮೆಯಾಚಿಸಿದ್ದಾರೆ.
ಜಿ.ಟಿ.ಮಾಲ್ ಮಾಲೀಕ ಎಸ್.ಟಿ.ಆನಂದ್ ಅವರು ರೈತ ಫಕೀರಪ್ಪ ಹಾಗೂ ಪುತ್ರ ನಾಗರಾಜ್ ಅವರನ್ನು ಶುಕ್ರವಾರ ನಗರದ ನಿವಾಸಕ್ಕೆ ಕರೆಸಿಕೊಂಡು ಸನ್ಮಾನ ಮಾಡಿದ್ದಾರೆ. ಈ ವೇಳೆ ರೈತ ಫಕೀರಪ್ಪ ಹಾಗೂ ಪುತ್ರನಿಗೆ ಉಪಾಹಾರ ನೀಡಿ ಸತ್ಕರಿಸಲಾಗಿದ್ದು, ಮಾಲೀಕ ಆನಂದ್ ಅವರು ಸ್ವತಃ ಕೈತುತ್ತು ತಿನ್ನಿಸಿದ್ದು ಕಂಡುಬಂದಿದೆ. ಸನ್ಮಾನ ಮಾಡುವಾಗ ಮಾಲೀಕ ಕೂಡ ಪಂಚೆ, ಬನಿಯನ್ ಧರಿಸಿದ್ದರು.
ಈ ವೇಳೆ ಮಾತನಾಡಿರುವ ಮಾಲೀಕ ಆನಂದ್ ಅವರು, ನಾವು ಕೂಡ ರೈತ ಕುಟುಂಬದವರೇ ಆಗಿದ್ದು, ಕೃಷಿಕರ ಬಗ್ಗೆ ಅಪಾರ ಗೌರವವಿದೆ. ನೀವು ನಮ್ಮ ಮನೆಗೆ ಬಂದಿರುವುದು ಸಂತಸ ತಂದಿದೆ. ನಾನು ಕೂಡ ಸರ್ಕಾರಿ ಶಾಲೆಯಲ್ಲೇ ಓದಿದ್ದು. ನಾವು ಯಾವತ್ತೂ ಯಾರನ್ನೂ ಅವಮಾನ ಮಾಡಿಲ್ಲ, ಅನಾಗರಿಕವಾಗಿ ನಡೆದುಕೊಂಡವರಲ್ಲ. ನಮ್ಮ ಸಿಬ್ಬಂದಿಯಿಂದ ತಪ್ಪಾಗಿದೆ. ದಯವಿಟ್ಟು ನೀವು ಕ್ಷಮಿಸಬೇಕು ಎಂದು ರೈತ ಫಕೀರಪ್ಪರನ್ನು ಕೋರಿದ್ದಾರೆ.
ಇದನ್ನೂ ಓದಿ | GT World Mall: ಅನ್ನದಾತರಿಗೆ ಅವಮಾನ; ತೆರಿಗೆ ಪಾವತಿಸದ್ದಕ್ಕಾಗಿ ಜಿಟಿ ಮಾಲ್ ಸೀಲ್ ಮಾಡಿದ ಬಿಬಿಎಂಪಿ
ಏನಿದು ಘಟನೆ?
ಬೆಂಗಳೂರಿನ ಮಾಗಡಿ ರಸ್ತೆಯ ಬಳಿ ಇರುವ ಜಿಟಿ ವರ್ಲ್ಡ್ ಮಾಲ್‌ಗೆ ಜುಲೈ 16ರಂದು ಪಂಚೆ ಧರಿಸಿ ತೆರಳಿದ್ದ ಹಾವೇರಿ ಮೂಲದ ರೈತ ಫಕೀರಪ್ಪ ಅವರನ್ನು ಒಳ ಹೋಗಲು ಬಿಟ್ಟಿರಲಿಲ್ಲ. ಈ ಕುರಿತು ಪ್ರಶ್ನಿಸಿದಾಗ, ʼಪಂಚೆ ಧರಿಸಿದವರನ್ನು ಒಳಗೆ ಬಿಡುವುದಿಲ್ಲ, ಈ ಬಗ್ಗೆ ನಮಗೆ ಸೂಚನೆ ಇದೆʼ ಎಂದು ಸೆಕ್ಯುರಿಟಿ ಸಿಬ್ಬಂದಿ ಮುಖ್ಯಸ್ಥರು ಹೇಳಿದ್ದಾರೆ. ಯಾಕೆ ಬಿಡುವುದಿಲ್ಲ ಎಂದು ಮರುಪ್ರಶ್ನಿಸಿದ ರೈತರ ಮಗನಿಗೆ ʼನಿಮ್ಮ ಮೇಲೆ ಕೇಸ್ ಹಾಕುತ್ತೇವೆʼ ಎಂದು ಸೆಕ್ಯೂರಿಟಿ ಬೆದರಿಸಿದ್ದರು. ಬಳಿಕ ಘಟನೆ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರೈತ ಫಕೀರಪ್ಪಗೆ ಆಡಳಿತ ಮಂಡಳಿ ಕ್ಷಮೆಯಾಚನೆ ಮಾಡಿತ್ತು.
ಬೆಂಗಳೂರಿನ ವಿಜಯನಗರದ ನಿವಾಸಿಯಾದ ನಾಗರಾಜ್ ಎಂಬವರ ತಂದೆ ಮೂಲತಃ ರೈತರಾಗಿದ್ದಾರೆ. ಅವರು ಹಾವೇರಿಯಿಂದ ಬೆಂಗಳೂರಿನಲ್ಲಿರುವ ಮಗನ ಮನೆಗೆ ಬಂದಿದ್ದರು. ಜು. 16ರಂದು ತಮ್ಮ ವೃದ್ಧ ತಂದೆಯವರಿಗೆ ಸಿನಿಮಾ ತೋರಿಸಿ ಖುಷಿಪಡಿಸಲು ನಿರ್ಧರಿಸಿದ ನಾಗರಾಜ್, ತಂದೆಯನ್ನು ಜಿಟಿ ಮಾಲ್‌ಗೆ ಕರೆದೊಯ್ದಿದ್ದರು. ಸಾಮಾನ್ಯವಾಗಿ ಪಂಚೆ ಉಡುವ ಹವ್ಯಾಸವಿರುವ ಅವರು ಎಂದಿನಂತೆಯೇ ಪಂಚೆ ಉಟ್ಟು ಮಗನ ಜೊತೆಗೆ ಮಾಲ್‌ಗೆ ತೆರಳಿದ್ದರು. ಆದರೆ, ಮಾಲ್‌ನೊಳಗೆ ಪ್ರವೇಶಿಸಲು ಸಿಬ್ಬಂದಿ ನಿರಾಕರಿಸಿದ್ದರು. ಬಳಿಕ ಮಾಲ್ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದರಿಂದ ಬಿಬಿಎಂಪಿ ಅಧಿಕಾರಿಗಳು ಮಾಲ್ ಅನ್ನು ಒಂದು ವಾರದ ಕಾಲ ಮುಚ್ಚಿಸಿದ್ದಾರೆ.