Site icon Vistara News

ಎಚ್ಡಿಕೆಗೆ ತಾಕತ್ತಿದ್ರೆ ಗುಬ್ಬಿಯಲ್ಲಿ ಗೆದ್ದು ತೋರಿಸಲಿ : ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಓಪನ್‌ ಚಾಲೆಂಜ್

ಶಾಸಕ ಶ್ರೀನಿವಾಸ್

ತುಮಕೂರು: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲಿ ನಗರದ ವಿದ್ಯಾನಗರದ ಗುಬ್ಬಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಮನೆ ಮುಂದೆ ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನೂರಾರು ಕಾರ್ಯಕರ್ತರು ಜಮಾಯಿಸಿ ಶಾಸಕರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದರಿಂದ ಬಿಗುವಿನ ವಾತಾವರಣ ಏರ್ಪಟ್ಟಿತ್ತು. ಪರಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಈ ವೇಳೆ ಶಾಸಕರ ಬೆಂಬಲಿಗರು ಹಾಗೂ ಪ್ರತಿಭಟನಾ ನಿರತರ ನಡುವೆ ಮಾತಿನ ಚಕಮಕಿ ನಡೆಯಿತು. ಕುಮಾರಸ್ವಾಮಿಗೆ ಪಕ್ಷ ನಡೆಸುವ ಯೋಗ್ಯತೆ ಇಲ್ಲ, ಮೊದಲು ರಾಜೀನಾಮೆ ಕೊಟ್ಟು ಪಕ್ಷ ವಿಸರ್ಜಿಸಲಿ. ಅವನು ನನ್ನ ಮನೆ ಮುಂದೆ ಪ್ರತಿಭಟನೆ ಮಾಡಲು ಕಾರ್ಯಕರ್ತರನ್ನು ಕಳುಹಿಸಿದ್ದಾನೆ. ನಾನು ಸೋತರೂ ಇವನ ಅಭ್ಯರ್ಥಿಯನ್ನು ಗೆಲ್ಲೋದಕ್ಕೆ ಬಿಡಲ್ಲ ‌, ಗುಬ್ಬಿಯಲ್ಲಿ ಅವನು ನಿಂತು ಗೆದ್ದರೆ ಆತನ ಮನೆಯಲ್ಲಿ ಕೂಲಿ ಮಾಡುತ್ತೇನೆ ಎಂದು ಎಚ್‌ಡಿಕೆಗೆ ಓಪನ್‌ ಚಾಲೆಂಜ್‌ ಹಾಕಿದರು.

ನಾನು ಯಾರಿಗೂ ಹೆದರುವುದಿಲ್ಲ, ಅವರು ಬಂದರೆ ಬರಲಿ ಎಂದು ಆಕ್ರೋಶ ಹೊರಹಾಕಿದ ಅವರು, ಎಚ್‌ಡಿಕೆ ಮನೆಯವರು ನಾಟಕ ಆಡುತ್ತಾ ಬಂದಿದ್ದಾರೆ. ಅವನು ಉತ್ತಮನಾ, ಯಾವುದರಲ್ಲಿ ಉತ್ತಮ ಅಂತಾ ಹೇಳಬೇಕು. ಬೆಳಗ್ಗೆ ಒಂದು ಹೇಳ್ತಾನೆ, ಸಂಜೆ ಒಂದು ಹೇಳ್ತಾನೆ. ಪಕೀರರು, ಪೇಪರ್ ಆಯೋರು ಇರ್ತಾರಲ್ಲ ಆ ತರಾ ಅವರ ಬಳಿ ಇರಬೇಕು. ಉಟ್ರೆ, ಬೈಟ್ರೆ ಅಂತಿದ್ರೆ ಕೊನೆಯ ತನಕಾ ಇಟ್ಟುಕೊಳ್ಳುತ್ತಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ | ಅಡ್ಡಮತದಾನದ ಮೂಲಕ ನಿಷ್ಠೆಯ ಪರೀಕ್ಷೆ: ಜೆಡಿಎಸ್‌ ಶಾಸಕರೇ ಟಾರ್ಗೆಟ್‌ ಏಕೆ?

ರಾಜ್ಯಸಭೆ ಚುನಾವಣೇ ಮತದಾನದ ವೇಳೆ ನಾನು ಬ್ಯಾಲೆಟ್ ಪೇಪರ್ ತೋರಿಸುವಾಗ ಸರಿಯಾಗಿಯೇ ತೋರಿಸಿದ್ದೇನೆ. ಮೂರ್ನಾಲ್ಕು ನಿಮಿಷ ಹಿಡಿದುಕೊಂಡಿದ್ದೇನೆ. ಅವನೇನು ಕತ್ತೆ ಕಾಯುತ್ತಿದ್ನಾ, ಹೆಬ್ಬೆಟ್ಟು ತೆಗಿ ಅನ್ನಬೇಕಿತ್ತು. ನನಗಿರುವ ಮಾಹಿತಿ ಪ್ರಕಾರ ಕುಮಾರಸ್ವಾಮಿ ಮನೆಯವರೇ ನಾಟಕ ಮಾಡ್ತಿದ್ದಾರೆ. ನನ್ನನ್ನು ಮುಗಿಸಬೇಕು ಅಂತ ಅವರೇ ತಮಗೆ ಬೇಕಾದವರಿಂದ ಕ್ರಾಸ್ ವೋಟಿಂಗ್ ಮಾಡಿಸಿದ್ದಾರೆ. ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ನನಗೂ, ಅವರಿಗೂ ಆಗೊಲ್ಲ ಅನ್ನೋದು ಗೊತ್ತು. ಈಗಾಗಲೇ ನನ್ನನ್ನು ಸೋಲಿಸಲೇ ಬೇಕು ಎಂದು ಷಡ್ಯಂತ್ರ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ತಮ್ಮ ಅಭ್ಯರ್ಥಿ ಗೆಲ್ಲಲ್ಲ ಅಂತ ಕುಮಾರಸ್ವಾಮಿಗೂ ಗೊತ್ತಿತ್ತು. ಹೀಗಾಗಿ ನನ್ನ ಮೇಲೆ ಗೂಬೆ ಕೂರಿಸಿ ತೇಜೋವಧೆ ಮಾಡುವ ಪ್ರಯತ್ನ ಮಾಡಿದ್ದಾರೆ. ನಾನು ಇವನಿಗೆ ಹೆದರಿಕೊಂಡು ಅಥವಾ ಬೇರೆ ಯಾರಿಗೋ ಹೆದರಿಕೊಂಡು ಇರಲ್ಲ. ನನ್ನ ಮನಸಾಕ್ಷಿ ವಿರುದ್ಧ ನಾನು ನಡೆಯಲ್ಲ, ಆತ ನಾಚಿಕೆ ಮಾನ, ಮರ್ಯಾದೆ ಇಲ್ಲದೆ, ಗಳಿಗೆಗೊಂದು, ಗಂಟೆಗೊಂದು ಮಾತು ಹೇಳಿಕೊಂಡು ತಿರುಗುತ್ತಾನೆ. ಇವನನ್ನು ಯಾರಾದ್ರೂ ಲೀಡರ್ ಅಂತ ಹೇಳುತ್ತಾರಾ ಎಂದು ಪ್ರಶ್ನಿಸಿದರು.

ನಾನು ಬಿಜೆಪಿಯನ್ನು ಪ್ರಾರಂಭದಿಂದಲೂ ವಿರೋಧ ಮಾಡಿಕೊಂಡು ಬಂದಿದ್ದೇನೆ, ಆಪರೇಷನ್ ಕಮಲ ನಿಲ್ಲಿಸಿದ್ದೆ ನಾನು. ಮತ ಹಾಕಿದ್ದಿದ್ದರೆ ನಾನು ಕಾಂಗ್ರೆಸ್‌ಗೆ ಹಾಕಿರುತ್ತಿದ್ದೆ. ನಾನೇನು ಇವನಿಗೆ ಹೆದರಿಕೊಳ್ಳಬೇಕಾ, ನನ್ನ ವಿರುದ್ಧ ಅಭ್ಯರ್ಥಿಯನ್ನು ಹಾಕಿದ್ದ ಮೇಲೆ ಹೆದರಿಕೊಳ್ಳುವುದು ಏನಿದೆ ಹೇಗೆ ಬಂತು. ಇವನು ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಆದವನು, ಯೋಗ್ಯತೆಯಿಂದ ಮುಖ್ಯಮಂತ್ರಿ ಆದವನಾ ಎಂದು ಪ್ರಶ್ನಿಸಿದ ಅವರು, ಇನ್ನೊಂದು ಜನ್ಮ ಎತ್ತಿಬಂದರೂ ಇವನ ಪಕ್ಷಕ್ಕೆ ಬಹುಮತ ಬರಲ್ಲ. ಒಕ್ಕಲಿಗರನ್ನು ತುಳಿಯೋದೇ ಇವನ ಒನ್ ಪಾಯಿಂಟ್ ಅಜೆಂಡಾ. ಒಳ್ಳೆಯ ಕಾರು, ಒಳ್ಳೆಯ ಬಟ್ಟೆ ಹಾಕಿಕೊಂಡು ಹೋದರೆ ಅವರ ಕೆಂಗಣ್ಣಿಗೆ ಗುರಿಯಾಗುತ್ತೇವೆ ಎಂದರು.

ಇದನ್ನೂ ಓದಿ | ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಒಳ ಒಪ್ಪಂದದ ರಾಜಕಾರಣ: ಎಚ್.ಡಿ.ಕುಮಾರಸ್ವಾಮಿ

Exit mobile version