ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ಹತನಾಗುವ ಕೆಲವೇ ಸೆಕೆಂಡ್‌ಗಳಿಗೂ ಮುನ್ನ ಅತೀಕ್ ಅಹ್ಮದ್‌ನು ಗುಡ್ಡು ಮುಸ್ಲಿಂ (Guddu Muslim In Karnataka) ಬಗ್ಗೆಯೇ ಮಾತನಾಡುತ್ತಿದ್ದ. ಈ ಗುಡ್ಡು ಮುಸ್ಲಿಂ ಈಗ ಕರ್ನಾಟಕದಲ್ಲಿ ಪತ್ತೆಯಾಗಿದ್ದಾನೆ. ಎನ್‌ಕೌಂಟರ್ ಭೀತಿಯಿಂದಾಗಿ ಆತ ತಲೆಮರೆಸಿಕೊಂಡು ತಿರುಗಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.
ಉಮೇಶ್ ಪಾಲ್‌ನನ್ನು ಹತ್ಯೆಗೈದ ಆರು ಜನರಲ್ಲಿ ಗುಡ್ಡು ಮುಸ್ಲಿಂ ಕೂಡ ಒಬ್ಬನಾಗಿದ್ದಾನೆ. ಹಾಗೆಯೇ, ಹತ್ಯೆಗೈದ ಆರು ಜನರಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಎಂದರೆ ಅದು ಗುಡ್ಡು ಮುಸ್ಲಿಂ ಮಾತ್ರ. ಈತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಇತ್ತೀಚಿನ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಆತ ಕರ್ನಾಟಕದಲ್ಲಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈತನ ಶೋಧಕ್ಕಾಗಿ ಉತ್ತರ ಪ್ರದೇಶ ಪೊಲೀಸರು ಕರ್ನಾಟಕ ಪೊಲೀಸರ ನೆರವು ಕೋರಿದ್ದಾರೆ ಎಂದು ತಿಳಿದುಬಂದಿದೆ.
2005ರಲ್ಲಿ ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅವರನ್ನು ಕಳೆದ ಫೆಬ್ರವರಿಯಲ್ಲಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಆರು ಜನರ ಹೆಸರಿದ್ದು, ಅತೀಕ್ ಅಹ್ಮದ್ ಹಾಗೂ ಅಶ್ರಫ್ ಅಹ್ಮದ್‌ನನ್ನು ಎರಡು ದಿನಗಳ ಹಿಂದಷ್ಟೇ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಅತೀಕ್ ಪುತ್ರ ಅಸಾದ್ ಅಹ್ಮದ್, ಆತನ ಸಹಚರರಾದ ಅರ್ಬಾಜ್, ವಿಜಯ್ ಚೌಧರಿ ಹಾಗೂ ಗುಲಾಂ ಹಸನ್‌ನನ್ನು ಎನ್‌ಕೌಂಟರ್ ಮಾಡಲಾಗಿದೆ. ಪ್ರಕರಣದಲ್ಲಿ ಈಗ ಜೀವಂತ ಉಳಿದಿರುವುದು ಗುಡ್ಡು ಮುಸ್ಲಿಂ ಮಾತ್ರ. ಈತನಿಗೆ ಎನ್‌ಕೌಂಟರ್ ಭೀತಿ ಇರುವ ಕಾರಣ ತಲೆಮರೆಸಿಕೊಂಡು ತಿರುಗಾಡುತ್ತಿದ್ದಾನೆ.
ಗುಡ್ಡು ಮುಸ್ಲಿಂ ಹಿನ್ನೆಲೆ ಏನು?
ಅಂಡರ್‌ವರ್ಲ್ಡ್‌ನ ಪ್ರಮುಖ ಡಾನ್‌ಗಳ ಜತೆ ನಂಟು ಹೊಂದಿರುವ ಗುಡ್ಡು ಮುಸ್ಲಿಂ, ಹ್ಯಾಂಡ್ ಗ್ರೆನೇಡ್‌ಗಳನ್ನು ತಯಾರಿಸುವಲ್ಲಿ ನಿಪುಣನಾಗಿದ್ದಾನೆ. ಜನರ ಮೇಲೆ ಗುಂಡು ಹಾರಿಸಿ, ಕೊಲ್ಲುವುದಕ್ಕಿಂತ, ಗ್ರೆನೇಡ್, ಬಾಂಬ್‌ಗಳನ್ನು ಎಸೆದು ಹತ್ಯೆಗೈಯುವುದು ಸುಲಭ ಎಂದು ಬಗೆದಿದ್ದ ಈತ ಗ್ರೆನೇಡ್‌ಗಳನ್ನು ತಯಾರಿಸಿ, ಗ್ಯಾಂಗ್‌ಸ್ಟರ್‌ಗಳಿಗೆ ಪೂರೈಸುತ್ತಿದ್ದ. ಬಳಿಕ ಈತನೂ ದಾಳಿಯಲ್ಲಿ ಶಾಮೀಲಾಗತೊಡಗಿದ. ಉಮೇಶ್ ಪಾಲ್ ಮೇಲೆ ಬಾಂಬ್ ಎಸೆದವರಲ್ಲಿ ಗುಡ್ಡು ಮುಸ್ಲಿಂ ಕೂಡ ಒಬ್ಬನಾಗಿದ್ದಾನೆ. ಈತ ಬಾಂಬ್ ಎಸೆದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಅಂಡರ್‌ವರ್ಲ್ಡ್ ಡಾನ್‌ಗಳಾದ ಧನಂಜಯ್ ಸಿಂಗ್, ಅಭಯ್ ಸಿಂಗ್, ಮುಖ್ತಾರ್ ಅನ್ಸಾರಿ ಸೇರಿ ಹಲವರ ಜತೆ ಗುಡ್ಡು ಮುಸ್ಲಿಂ ಕುಕೃತ್ಯಗಳಲ್ಲಿ ತೊಡಗಿದ್ದಾನೆ. ಕಳೆದ 10 ವರ್ಷಗಳಿಂದ ಈತ ಅತೀಕ್ ಅಹ್ಮದ್‌ಗಾಗಿ ಕೆಲಸ ಮಾಡುತ್ತಿದ್ದಾನೆ. ಲಖನೌ ಪೊಲೀಸ್ ಠಾಣೆ ಬಳಿ ಬಾಂಬ್ ಎಸೆದ ಪ್ರಕರಣದಲ್ಲಿ ಬಂಧಿತನಾಗಿದ್ದ ಈತ, ಲಖನೌನ ಪ್ರಸಿದ್ಧ ಪೀಟರ್ ಗೋಮ್ಸ್ ಹತ್ಯೆ ಪ್ರಕರಣದಲ್ಲೂ ಭಾಗಿಯಾಗಿದ್ದಾನೆ.