ಬೆಂಗಳೂರು: ಮಾಜಿ ಪ್ರಧಾನಿ, ಮಣ್ಣಿನ ಮಗ, ಕರ್ನಾಟಕದ ಹಿರಿಯ ರಾಜಕಾರಣಿ ಎಚ್.ಡಿ.ದೇವೇಗೌಡ (HD Deve Gowda) ಅವರು ಶನಿವಾರ (ಮೇ 18) 93ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದೇವೇಗೌಡರ ಜನ್ಮದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದ ಹಿಡಿದು ನೂರಾರು ನಾಯಕರು ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಇನ್ನು, ಬರ್ತ್‌ಡೇಗೆ ವಿಶ್ ಮಾಡಿದ ಹಿನ್ನೆಲೆಯಲ್ಲಿ ಮೋದಿ ಅವರಿಗೆ ದೇವೇಗೌಡರು ಥ್ಯಾಂಕ್ಸ್ ಹೇಳಿದ್ದಾರೆ. ಹಾಗೆಯೇ, “ಮೂರನೇ ಬಾರಿಗೆ ಗೆದ್ದು, ನೀವು ದೇಶವನ್ನು ಮುನ್ನಡೆಸಿ” ಎಂಬುದಾಗಿಯೂ ಗೌಡರು ಆಶೀರ್ವಾದ ಮಾಡಿದ್ದಾರೆ.
“ನನ್ನ ಜನ್ಮದಿನದಂದು ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನಿಮ್ಮ ಶುಭ ಹಾರೈಕೆಗಳು ನನ್ನ ಮನಸ್ಸನ್ನು ಮತ್ತಷ್ಟು ಉಲ್ಲಾಸಗೊಳಿಸಿವೆ. ನೀವು ಶೀಘ್ರದಲ್ಲೇ ಮೂರನೇ ಬಾರಿಗೆ ದೇಶವನ್ನು ಮುನ್ನಡೆಸುವಂತಾಗಲಿ ಎಂಬುದಾಗಿ ಶುಭ ಕೋರುತ್ತೇನೆ” ಎಂದು ದೇವೇಗೌಡರು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
Thank you Prime Minister @narendramodi avaru for wishing me on my birthday. Your generous words have offered me comfort. I wish to soon see you lead our nation for a third time. @PMOIndia https://t.co/jIjFHIPnVW
— H D Deve Gowda (@H_D_Devegowda) May 18, 2024
ಎಚ್.ಡಿ. ದೇವೇಗೌಡರ ಹುಟ್ಟುಹಬ್ಬಕ್ಕೆ ಶನಿವಾರ ಬೆಳಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್ ನರೇಂದ್ರ ಮೋದಿ ಶುಭಾಶಯ ತಿಳಿಸಿದರು. ದೇಶಕ್ಕೆ ದೇವೇಗೌಡ ಸೇವೆ ಗಣನೀಯವಾಗಿದ್ದು, ರಾಜಕೀಯ ವಲಯದಲ್ಲಿ ಅವರನ್ನು ಗೌರವದಿಂದ ಕಾಣಲಾಗುತ್ತದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಅವರ ಆಸಕ್ತಿ ಗಮನಾರ್ಹವಾಗಿದೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದರು.
ಹಲಸಿನ ಹಣ್ಣು ಕೊಟ್ಟ ಕಾರ್ಯಕರ್ತ
ಕಟ್ಟಾ ಅಭಿಮಾನಿಯೊಬ್ಬ ದೇವೇಗೌಡರಿಗೆ ಹಲಸಿನ ಹಣ್ಣನ್ನು ಉಡುಗೊರೆಯಾಗಿ ನೀಡಿದ್ದಾನೆ. ಅದನ್ನು ಅಷ್ಟೇ ಪ್ರೀತಿಪೂರ್ವಕವಾಗಿ, ಖುಷಿ ಖುಷಿಯಿಂದ ದೇವೇಗೌಡ ಅವರು ಸ್ವೀಕರಿಸಿದರು. ಅಲ್ಲದೆ, ಆ ಹಲಸಿನ ಹಣ್ಣಿನ ಬಳಿಗೆ ತಮ್ಮ ಮೂಗನ್ನು ಇಟ್ಟು ಅದರ ಪರಿಮಳವನ್ನು ಆಸ್ವಾದಿಸಿದರು. ಕಾರ್ಯಕರ್ತನ ಗಿಫ್ಟ್ ಬಗ್ಗೆ ಬಹಳವೇ ಖುಷಿಪಟ್ಟರು.
ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಶನಿವಾರ ತಮ್ಮ ಹುಟ್ಟುಹಬ್ಬವನ್ನು ದೇವಾಲಯ ಭೇಟಿಯೊಂದಿಗೆ ಸರಳವಾಗಿ ಆಚರಿಸಿಕೊಂಡಿದ್ದಾರೆ. ಮೊಮ್ಮಗ ನೀಡಿದ ಏಟಿನಿಂದ ಇನ್ನೂ ಪೂರ್ಣವಾಗಿ ಚೇತರಿಸಿಕೊಳ್ಳದ ದೇವೇಗೌಡರು, ದೇವರ ಮುಂದೆ ಈ ಅವಮಾನದಿಂದ ಪಾರು ಮಾಡೆಂದು ಮೌನವಾಗಿ ಪ್ರಾರ್ಥಿಸಿದರು.
ಮೊಮ್ಮಗ ಪ್ರಜ್ವಲ್ ಪ್ರಕರಣ ತಂದಿಟ್ಟ ಸಂಕಷ್ಟದಿಂದ ನೊಂದಿರುವ ಗೌಡರು 92 ವರ್ಷದಲ್ಲಿ ಮೊದಲ ಬಾರಿಗೆ ಗಡ್ಡಧಾರಿಯಾಗಿದ್ದರು. ಇಂದು ಮನೆಯಿಂದ ಹೊರಗೆ ಬಂದು ದೇವಾಲಯಕ್ಕೆ ಹೊರಟ ಸಂದರ್ಭದಲ್ಲಿ ಮತ್ತೆ ನೀಟ್ ಶೇವ್ ಮಾಡಿಕೊಂಡಿದ್ದಾರೆ. ಇಂದು ಮುಂಜಾನೆ ಅವರು ಬೆಂಗಳೂರಿನ ಜೆಪಿ ನಗರ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ತೆರೆಳಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ಬಳಿಕ ಅವರು ಮತ್ತೆ ಮನೆ ಸೇರಿಕೊಂಡರು.
ಇದನ್ನೂ ಓದಿ: Mallikarjun Kharge: ಬುಲ್ಡೋಜರ್ ಹೇಳಿಕೆ ನೀಡಿದ ಮೋದಿ ವಿರುದ್ಧ ಕ್ರಮ ಕೈಗೊಳ್ಳಿ; ಚುನಾವಣಾ ಆಯೋಗಕ್ಕೆ ಖರ್ಗೆ