ಬೆಂಗಳೂರು: ಹಿಂದಿ ಹೇರಿಕೆ ವಿರುದ್ಧ ರಾಜ್ಯದಲ್ಲಿ ಆಗಾಗ ಆಕ್ರೋಶ ವ್ಯಕ್ತವಾಗುತ್ತದೆ. ಅದರಲ್ಲೂ, ಸೆಪ್ಟೆಂಬರ್ ೧೪ರಂದು ದೇಶಾದ್ಯಂತ “ಹಿಂದಿ ದಿವಸ” (Hindi Diwas) ಆಚರಿಸಲಾಗುತ್ತಿದೆ. ರಾಜ್ಯದಲ್ಲಿ ಹಿಂದಿ ದಿವಸ ಆಚರಿಸುವುದನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರೋಧಿಸಿದ್ದು, “ರಾಜ್ಯದ ಜನರ ತೆರಿಗೆ ಹಣದಲ್ಲಿ ಹಿಂದಿ ದಿವಸ ಆಚರಿಸದಿರಿ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.
“ಸೆಪ್ಟೆಂಬರ್ ೧೪ರಂದು ಭಾರತ ಒಕ್ಕೂಟದ ಪ್ರಾಯೋಜಿತ ಕಾರ್ಯಕ್ರಮವಾದ “ಹಿಂದಿ ದಿವಸ”ವನ್ನು ಕರ್ನಾಟಕದಲ್ಲಿ ಒತ್ತಾಯಪೂರ್ವಕವಾಗಿ ಆಚರಿಸುವುದು ರಾಜ್ಯ ಸರ್ಕಾರವು ಕನ್ನಡಿಗರಿಗೆ ಮಾಡುವ ಅನ್ಯಾಯವಾಗಿದೆ. ರಾಜ್ಯ ಸರ್ಕಾರದ ವತಿಯಿಂದ, ನಮ್ಮ ರಾಜ್ಯದ ಜನರ ತೆರಿಗೆ ಹಣದಲ್ಲಿ ಯಾವುದೇ ಕಾರಣಕ್ಕೂ ಹಿಂದಿ ದಿವಸ ಆಚರಿಸಬಾರದು ಎಂದು ಆಗ್ರಹಿಸುತ್ತೇನೆ” ಎಂಬುದಾಗಿ ಎಚ್‌ಡಿಕೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಭಾರತವು ಸಾವಿರಾರು ಭಾಷೆ ಹಾಗೂ ಉಪ ಭಾಷೆಗಳನ್ನು ಒಳಗೊಂಡ, ೫೬೦ಕ್ಕೂ ಹೆಚ್ಚು ಸಂಸ್ಥಾನಗಳು ಒಪ್ಪಿ ಸೇರಿದ ಮತ್ತು ಸಾಮಾಜಿಕ, ಸಾಂಸ್ಕೃತಿಕವಾಗಿ ಭಿನ್ನ ಆಚರಣೆಗಳನ್ನು ಹೊಂದಿರುವ ಒಂದು ಮಹಾನ್ ಒಕ್ಕೂಟವಾಗಿದೆ. ಇಂತಹ ನಾಡಿನಲ್ಲಿ ಕೇವಲ ಒಂದು ಭಾಷೆಯನ್ನು ಮಾತ್ರವೇ ಮೆರೆಸುವುದು ನಿಜಕ್ಕೂ ಜನತೆಗೆ ಎಸಗುವ ಪರಮ ಅನ್ಯಾಯವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ರಾಷ್ಟ್ರೀಯ ಪಕ್ಷಗಳು ಹಿಂದಿನಿಂದಲೂ ಹಿಂದಿ ಭಾಷೆಯನ್ನು ದೇಶದ ಹಿಂದಿಯೇತರ ರಾಜ್ಯಗಳ ಮೇಲೆ ಹೇರಿಕೆ ಮಾಡುತ್ತಾ ಬಂದಿವೆ, ಈ ನಿಲುವನ್ನು ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳ ಬಲವಾಗಿ ವಿರೋಧಿಸುತ್ತದೆ. ಬಲವಂತವಾಗಿ ಯಾವುದೇ ಒಂದು ಭಾಷೆಯನ್ನು ಹೇರಿಕೆ ಮಾಡುವುದು ಪ್ರಾದೇಶಿಕ ಅಸಮಾನತೆಯ ಸಂಕೇತ” ಎಂದೂ ತಿಳಿಸಿದ್ದಾರೆ.
ದೇಶದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ೧೪ರಂದು ಹಿಂದಿ ದಿವಸ ಆಚರಣೆ ಮಾಡಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರವು ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುತ್ತಿದೆ ಎಂಬುದು ಹಲವು ವರ್ಷಗಳ ಆರೋಪವಾಗಿದೆ. ಹಾಗೆಯೇ, ರಾಜ್ಯದಲ್ಲಿ ಈ ಬಾರಿ ಹಿಂದಿ ದಿವಸ ಆಚರಿಸಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಈಗಾಗಲೇ ಆಗ್ರಹಿಸಿದೆ. ಸೆ.೧೪ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಸೇರಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಿಂದಿ ದಿವಸ ವಿರೋಧಿಸಿ ಪ್ರತಿಭಟನೆಗೂ ಕರವೇ ತೀರ್ಮಾನಿಸಿದೆ.
ಇದನ್ನೂ ಓದಿ | ಮೋದಿ ಫ್ಲೆಕ್ಸ್‌ನಲ್ಲಿ ಹಿಂದಿ; ಮಸಿ ಬಳಿದ ಕರವೇ ಕಾರ್ಯಕರ್ತರು ಪೊಲೀಸರ ವಶಕ್ಕೆ