ರಾಯಚೂರು: ಪಂಚರತ್ನ ರಥಯಾತ್ರೆ ನಡುವೆ ಮಾಜಿ ಸಿಎಂ ಕುಮಾರಸ್ವಾಮಿ (H D Kumarswamy) ಹಾಗೂ ಅನಿತಾ ಕುಮಾರಸ್ವಾಮಿ ದಂಪತಿ, ಭಾನುವಾರ ಮಂತ್ರಾಲಯಕ್ಕೆ ತೆರಳಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು. ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳ ಆಶೀರ್ವಾದ ಪಡೆದರು.
ಈ ವೇಳೆ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ತಿಳಿಸಿದರು. ಬಳಿಕ ಶ್ರೀಗಳೊಂದಿಗೆ ಗೋಶಾಲೆ, ಅನ್ನಪೂರ್ಣ ಪ್ರಸಾದ ನಿಲಯ, ಸಂಸ್ಕೃತ ವಿದ್ಯಾಪೀಠ, ಪರಿಮಳ ಪ್ರಸಾದ ಪಾಕಶಾಲೆಗೆ ಭೇಟಿ ನೀಡಿ ವೀಕ್ಷಿಸಿದರು.
ನಂತರ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು, ಹಲವು ವರ್ಷಗಳಿಂದ ಕ್ಷೇತ್ರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ರಾಯಚೂರಿನಲ್ಲಿ ಪಂಚರತ್ನ ಕಾರ್ಯಕ್ರಮ ನಡೆಯುತ್ತಿದೆ. ರಥಯಾತ್ರೆ ಯಶಸ್ಸಿಗೆ ಹಲವಾರು ವರ್ಷಗಳ ಬಳಿಕ, ರಾಯರೇ ನನ್ನನ್ನು ಕರೆಸಿಕೊಂಡಿದ್ದಾರೆ. ಸ್ವತಂತ್ರ ಸರ್ಕಾರವೇ ನನ್ನ ಗುರಿ. ಹೀಗಾಗಿ ರಾಯರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ಅನುಗ್ರಹ ನೀಡುವಂತೆ ಕೇಳಿಕೊಂಡಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ | JDS Politics : ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ನಿರ್ಧಾರವೇ ಅಂತಿಮ, ನಮ್ಮಿಬ್ಬರನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದ ರೇವಣ್ಣ
ಶಾಸಕಿ ಅನಿತಾ ಕುಮಾರಸ್ವಾಮಿ ಮಾಡನಾಡಿ, ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು ಎಂದು ಕೇಳಿಕೊಂಡಿದ್ದೇನೆ. ಜೀವನದಲ್ಲಿ ನನಗೆ ಒಳ್ಳೆಯದಾಗಿದ್ದರೆ ಅದು ರಾಯರ ಇಚ್ಛೆಯಾಗಿದೆ ಎಂದು ಹೇಳಿದರು.
ಹಾಸನ ಟಿಕೆಟ್ ವಿಚಾರದಲ್ಲಿ ದೇವೇಗೌಡರ ಕುಟುಂಬದಲ್ಲಿ ವೈಮನಸ್ಸು ಉಂಟಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಸಂಕಷ್ಟ ನಿವಾರಣೆಗಾಗಿ ಮಾಜಿ ಸಿಎಂ, ರಾಘವೇಂದ್ರ ಸ್ವಾಮಿಗಳ ಮೊರೆ ಹೋಗಿದ್ದಾರೆ ಎನ್ನಲಾಗಿದೆ.