Site icon Vistara News

H R Keshavamurthy | ಖ್ಯಾತ ಗಮಕ ಕಲಾವಿದ, ಪದ್ಮಶ್ರೀ ಎಚ್.ಆರ್.ಕೇಶವಮೂರ್ತಿ ಇನ್ನಿಲ್ಲ

H R Keshavamurthy

ಶಿವಮೊಗ್ಗ: ಖ್ಯಾತ ಗಮಕ ಕಲಾವಿದ, ಪದ್ಮಶ್ರೀ ಎಚ್.ಆರ್.ಕೇಶವಮೂರ್ತಿ (88) ಅವರು ವಯೋಸಹಜ ಕಾಯಿಲೆಯಿಂದ ಶಿವಮೊಗ್ಗ ಸಮೀಪದ ಹೊಸಳ್ಳಿಯಲ್ಲಿಯ ನಿವಾಸದಲ್ಲಿ ಬುಧವಾರ ನಿಧನರಾದರು. ಗಮಕ ಕಲಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಾಗಿ ಇವರು (H R Keshavamurthy) ಭಾರತ ಸರ್ಕಾರದ 2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.

ಎಚ್.ಆರ್.ಕೇಶವಮೂರ್ತಿ ಅವರದು ಶಿವಮೊಗ್ಗ ಸಮೀಪದ ಮತ್ತೂರು ಹೊಸಳ್ಳಿ. ರಾಮಸ್ವಾಮಿ ಶಾಸ್ತ್ರಿ–ಲಕ್ಷ್ಮೀದೇವಮ್ಮ ದಂಪತಿ ಪುತ್ರರಾದ ಇವರು, 1934ರ ಫೆಬ್ರವರಿ 22ಂದು ಜನಿಸಿದರು. ಬಾಲ್ಯದಿಂದಲೇ ಗಮಕ ಕಲೆ ಕರಗತ ಮಾಡಿಕೊಂಡಿದ್ದರು. ತಂದೆ, ತಾಯಿ ರಾಗವಾಗಿ ಹಾಡುತ್ತಿದ್ದ ಪುರಾಣಗಳಿಂದ ಉತ್ತೇಜಿತರಾದ ಅವರು 16ನೇ ವಯಸ್ಸಿನಲ್ಲೇ ಗ್ರಾಮದ ವೆಂಕಟೇಶಯ್ಯ ಅವರ ಬಳಿ ಗಮಕ ವಾಚನ ಅಧ್ಯಯನ ಆರಂಭಿಸಿದ್ದರು. ರಾಮಾಯಣ, ಮಹಾಭಾರತ, ಕನ್ನಡ ಹಾಗೂ ಸಂಸ್ಕೃತದ ಕಾವ್ಯಗಳನ್ನು ಹಲವು ರಾಗಗಳಲ್ಲಿ ವಾಚನ ಮಾಡುವುದನ್ನು ರೂಢಿಸಿಕೊಂಡರು. 100ಕ್ಕೂ ಹೆಚ್ಚು ವಿಭಿನ್ನ ರಾಗಗಳಲ್ಲಿ ವಾಚನ ಮಾಡುವ ಮೂಲಕ ʼಶತರಾಗಿʼ ಎಂಬ ಬಿರುದಿಗೂ ಪಾತ್ರರಾಗಿದ್ದಾರೆ.

ರಾಜ್ಯ, ದೇಶದ ಹಲವೆಡೆ ನಡೆದ ಕಾರ್ಯಕ್ರಮಗಳಲ್ಲಿ ಗಮಕ ವಾಚನದ ಮೂಲಕ ಗಮನ ಸೆಳೆದಿರುವ ಅವರ ಸಾಧನೆಗೆ ಪ್ರತಿಷ್ಠಿತ ಪದ್ಮಶ್ರೀ, ಕುಮಾರವ್ಯಾಸ, ರಾಜ್ಯೋತ್ಸವ ಸೇರಿ ಹಲವು ಪ್ರಶಸ್ತಿಗಳು ಸಂದಿವೆ. ಎಚ್.ಆರ್.ಕೇಶವಮೂರ್ತಿ ಅವರು ಗಮಕ ಕಲೆಗೆ ತಮ್ಮ ಜೀವನವನ್ನೇ ಮುಡಿಪಾಗಿರಿಸಿದ್ದು, ನೂರಾರು ವಿದ್ಯಾರ್ಥಿಗಳಿಗೆ ಗಮಕ ಕಲೆಯನ್ನು ಉಚಿತವಾಗಿ ಕಲಿಸುವ ಮೂಲಕ ಮಾದರಿಯಾಗಿದ್ದಾರೆ. ಅವರ ಶೈಲಿಯು ಕೇಶವಮೂರ್ತಿ ಘರಾನಾ ಎಂದೇ ಖ್ಯಾತವಾಗಿದೆ.

ಎಚ್.ಆರ್.ಕೇಶವಮೂರ್ತಿ ಅವರು ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಸುಮಾರು ೪೦ಕ್ಕೂ ಹೆಚ್ಚು ವರ್ಷಗಳಿಂದ ನಿರಂತರವಾಗಿ ಗಮಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದರು. ಹಿರಿಯ ವ್ಯಾಖ್ಯಾನಕಾರರಾಗಿದ್ದ ವ್ಯಾಖ್ಯಾನ ವಾಚಸ್ಪತಿ ಮತ್ತೂರು ಲಕ್ಷ್ಮೀಕೇಶವ ಶಾಸ್ತ್ರಿ ಅವರ ವ್ಯಾಖ್ಯಾನದೊಂದಿಗೆ ಸಮಗ್ರ ಕುಮಾರವ್ಯಾಸ ಭಾರತದ 135 ಧ್ವನಿ ಸುರುಳಿಗಳು, ಮಾರ್ಕಂಡೇಯ ಅವಧಾನಿ ಅವರ ವ್ಯಾಖ್ಯಾನದೊಂದಿಗೆ 35 ಧ್ವನಿ ಸುರುಳಿಗಳಲ್ಲಿ ಜೈಮಿನಿ ಭಾರತ ಹೊರ ಬಂದಿದೆ. ಡಾ. ಮತ್ತೂರು ಕೃಷ್ಣಮೂರ್ತಿ ಮತ್ತು ಕೇಶವಮೂರ್ತಿಗಳ ಜೋಡಿ ಜಗತ್ಪ್ರಸಿದ್ಧವಾಗಿದೆ. ಇವರಿಬ್ಬರ ವಾಚನ ವ್ಯಾಖ್ಯಾನದಲ್ಲಿ ಕುಮಾರವ್ಯಾಸ ಭಾರತದ 200 ಕ್ಯಾಸೆಟ್‌ಗಳು ಬಿಡುಗಡೆಯಾಗಿವೆ.

ಎಚ್.ಆರ್.ಕೇಶವಮೂರ್ತಿ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಮತ್ತಿತರ ರಾಜಕೀಯ ನಾಯಕರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ
ವಿಶಿಷ್ಟ ಗಮಕ ಕಲೆಯ ಮೂಲಕ ನಾಡಿನ ವಿದ್ವತ್ ಪರಂಪರೆ, ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿದಿದ್ದ ಶಿವಮೊಗ್ಗದ ಹಿರಿಯ ಗಮಕ ಕಲಾವಿದ ಪದ್ಮಶ್ರೀ ಎಚ್. ಆರ್. ಕೇಶವಮೂರ್ತಿ ನಿಧನರಾದ ವಿಷಯ ತಿಳಿದು ದುಃಖವಾಯಿತು. ಅವರ ಆತ್ಮಕ್ಕೆ ಸದ್ಗತಿ ಸಿಗಲಿ, ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಪ್ರಾರ್ಥಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ದತ್ತಾತ್ರೇಯ ಹೊಸಬಾಳೆ ಸಂತಾಪ
ಸುಪ್ರಸಿದ್ಧ ಗಮಕ ಕಲಾವಿದ, ಪದ್ಮಶ್ರೀ ಪುರಸ್ಕೃತ ಹಿರಿಯ ವಿದ್ವಾಂಸರಾದ ಶಿವಮೊಗ್ಗದ ಹೊಸ‌ಳ್ಳಿಯ ಕೆ.ಆರ್. ಕೇಶವಮೂರ್ತಿ ಅವರ ನಿಧನದ ಸುದ್ದಿ ಅತೀವ ದುಃಖಕರ. ಭಾರತೀಯ ಪರಂಪರಾಗತ ಗಮಕ ಕಲೆಯನ್ನು ಜೀವನದ ಉ‌ಸಿರಾಗಿಸಿಕೊಂಡಿದ್ದ ಅವರದ್ದು ಒಬ್ಬ ಕಲಾತಪಸ್ವಿಯ ಬದುಕು‌. ಗಮಕ ಕಲೆಯ ಮೂಲಕ ನಾಡಿನ ವಿದ್ವತ್ ಪರಂಪರೆ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿದ ಅಧ್ವರ್ಯು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಮೇರು ಸಾಧಕರಾದ ಅವರ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ನೀಡಲಿ, ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರಿಗೆ, ಶಿಷ್ಯಕೋಟಿಗಳಿಗೆ, ಅಪಾರ ಅಭಿಮಾನಿಗಳಿಗೆ ಭಗವಂತನು ನೀಡಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ | ಅಯೋಧ್ಯೆ ಮಾದರಿಯಲ್ಲಿ ರಾಮದೇವರ ಬೆಟ್ಟ ಅಭಿವೃದ್ಧಿ: ಸಿಎಂಗೆ ಸಚಿವ ಅಶ್ವತ್ಥನಾರಾಯಣ ಪತ್ರ

Exit mobile version