Site icon Vistara News

ಎಚ್‌ಎಸ್‌ವಿಯವರ ʼಬುದ್ಧಚರಣʼ ಕುರಿತ ಬರಹಗಳ ಕೃತಿ ‘ಬುದ್ಧಚರಣ ಸ್ಪಂದನ’ ಲೋಕಾರ್ಪಣೆ

book launch

ಬೆಂಗಳೂರು: ಸಾಹಿತಿ ಎಚ್‌ ಎಸ್‌ ವೆಂಕಟೇಶಮೂರ್ತಿ ಅವರ “ಬುದ್ಧಚರಣʼ ಮಹಾಕಾವ್ಯದ ಕುರಿತ ಬರಹಗಳ ಕೃತಿ “ಬುದ್ಧಚರಣ ಸ್ಪಂದನʼ ಶನಿವಾರ ಬಿಡುಗಡೆಯಾಗಿದೆ.

ಎಚ್‌ಎಸ್‌ವಿಯವರ ನಿವಾಸ ʼಸಖಿʼಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಈ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್‌, ಡಾ. ಆರ್‌ ಲಕ್ಷ್ಮೀನಾರಾಯಣ, ಕಲಾವಿದ ಶ್ರೀನಿವಾಸ ಪ್ರಭು ಉಪಸ್ಥಿತರಿದ್ದರು. ಹಿರಿಯ ಸಾಹಿತಿಗಳಾದ ಬಿ ಆರ್ ಲಕ್ಷ್ಮಣ್‌ ರಾವ್, ಜಯಂತ ಕಾಯ್ಕಿಣಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕವಿ ಎಚ್‌ಎಸ್‌ವಿ “”ಬುದ್ಧ ಚರಣ ಅನೇಕ ವರ್ಷಗಳ ಪರಿಶ್ರಮದಿಂದ ‌ಪರಿಶ್ರಮ ಕಾಣದಂತೆ ಉದ್ಭವಿಸಿದ ಕಾವ್ಯ. ಅದು ಮಹಾಕಾವ್ಯವೋ ಅಲ್ಲವೋ ಕಾಲ ನಿರ್ಣಯ ಮಾಡುತ್ತದೆʼʼ ಎಂದರು.

“”ನನ್ನನ್ನು ಗಾಢವಾಗಿ ಆವರಿಸಿದ್ದು ಬುದ್ಧನ ಮಾನವೀಯತೆ, ಮನುಷ್ಯತ್ವ. ಬೇರೆ ಅವತಾರ ಪುರುಷರಂತೆ ಬುದ್ಧ ದೇವನಾಗಲಿಲ್ಲ, ಅವನು ಮನುಷ್ಯನಾದ. ಮನುಷ್ಯ ಮನುಷ್ಯನಾಗೋದೇ ದೊಡ್ಡ ಸಾಹಸ. ಬೇರೆಯವರಿಗಾಗಿ ಶೋಕ ಪಡೋದನ್ನ ಲೋಕಶೋಕ ಅಂತಾರೆ. ಆ‌ ಶೋಕ ಬುದ್ಧನಿಗೆ ಇತ್ತು.‌ ಅದನ್ನು ನಿವಾರಿಸೋ ಗುಣ ಆತನಲ್ಲಿತ್ತು. ಶೋಕವನ್ನು, ಸಾವನ್ನು ಧೈರ್ಯವಾಗಿ ಎದುರಿಸಬಹುದು ಅಂತ ಬುದ್ಧ ತೋರಿಸಿದ. ಬುದ್ಧನ‌ ಈ‌ ಗುಣವೇ ನನ್ನನ್ನು ಅವನತ್ತ ಸೆಳೆದು ಈ ಕಾವ್ಯಕ್ಕೆ ಕಾರಣವಾಯಿತುʼʼ ಎಂದು ಎಚ್‌ಎಸ್‌ವಿ “ಬುದ್ಧಚರಣʼ ಮಹಾಕಾವ್ಯವನ್ನು ಬರೆಯಲು ಸಿಕ್ಕ ಪ್ರೇರಣೆಯ ಕುರಿತು ವಿವರಿಸಿದರು.

“”ಬುದ್ಧ ಎನ್ನುವುದೊಂದು ವಿಶ್ವವ್ಯಾಪಿಯಾದ ಮಹಾಮಾನವತೆಯ ಪ್ರತಿಮೆ. ಎಷ್ಟು ನಿಟ್ಟಿನಿಂದ ನೋಡಿಯೂ ಆತನ ಸಮ್ಯ ಗ್ದರ್ಶನ ಕೇವಲ ಕನಸು. ನನಗೆ ಮುಖ್ಯವೆನಿಸಿದ್ದು ಬುದ್ಧಚಾರಿತ್ರ್ಯ ಮತ್ತು ಬುದ್ಧವಾಣಿಯ ತಿರುಳು. ಬುದ್ಧನಿಗೆ ಸಂಪೂರ್ಣ ಶರಣಾಗದೆ ಅದು ದಕ್ಕುವಂತಿರಲಿಲ್ಲ. ಬಸವನಾಗಿ, ಗಾಂಧಿಯಾಗಿ, ವಿನೋಬ ಆಗಿ, ಅಂಬೇಡ್ಕರ್ ಆಗಿ ಬುದ್ಧನ ವ್ಯಕ್ತಿತ್ವದ ವರ್ಣಿಕೆಗಳು ಭಾರತದಲ್ಲಿ ಮತ್ತೆ ಮತ್ತೆ ಸಂಭವಿಸುತ್ತಲೇ ಇವೆ. ಮುಂದೆಯೂ ಸಂಭವಿಸುವುವು ಎನ್ನುವುದು ನನ್ನ ದೃಢವಾದ ನಂಬಿಕೆಯಾಗಿದೆʼʼ ಎಂದು ಎಚ್‌ಎಸ್‌ವಿ ಬುದ್ಧಚರಣದಲ್ಲಿ ಹೇಳಿದ್ದಾರೆ.

ಈ ಕೃತಿಯಲ್ಲಿನ ಬುದ್ಧಚರಣ ಕಾವ್ಯ ಕುರಿತ ಲೇಖನಗಳನ್ನು ಮಾಲಿನಿ ಗುರುಪ್ರಸನ್ನ, ಸಿಂಧುರಾವ್‌ ಟಿ ಸಂಪಾದಿಸಿದ್ದಾರೆ. ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್‌ ಅವರು ಪ್ರಧಾನ ಸಂಪಾದಕರಾಗಿದ್ದಾರೆ. ಬುದ್ಧಚರಣ ಪ್ರಕಟಿಸಿದ ಅಂಕಿತ ಪುಸ್ತಕ ಪ್ರಕಾಶನವೇ ಈ ಕೃತಿಯನ್ನೂ ಹೊರತಂದಿದೆ. ಕಾರ್ಯಕ್ರಮದಲ್ಲಿ ಎಚ್‌ಎಸ್‌ವಿಯವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ|ಕವಿ ಎಚ್ಚೆಸ್ವಿ ಜನ್ಮದಿನ: ತೂಗುಮಂಚದ ಕವಿಯ ಓದಬೇಕಾದ 7 ಕವನಗಳು

Exit mobile version