Site icon Vistara News

H3N2 Virus: ಎಚ್‌3ಎನ್‌2 ವೈರಸ್‌ನ ಮೂಲ ಪತ್ತೆಗಾಗಿ ಕ್ಲಿನಿಕಲ್ ಆಡಿಟ್‌ಗೆ ಮುಂದಾದ ಆರೋಗ್ಯ ಇಲಾಖೆ

H3N2

H3N2

ಬೆಂಗಳೂರು: ಕೋವಿಡ್‌ ಸೋಂಕಿನ ಬಳಿಕ ಎಚ್‌3ಎನ್‌2 (H3N2 Virus) ವೈರಸ್‌ ಭೀತಿ ಹಿನ್ನೆಲೆಯಲ್ಲಿ ICMR ಹೈ ಅಲರ್ಟ್‌ ಘೋಷಣೆ ಮಾಡಿತ್ತು. ಇತ್ತೀಚೆಗೆ ಕರ್ನಾಟಕ‌ ಮತ್ತು ಹರಿಯಾಣದಲ್ಲಿ H3N2 ವೈರಸ್‌ನಿಂದ ತಲಾ ಒಂದೊಂದು ಸಾವಾಗಿದೆ. ರಾಜ್ಯದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ವೈರಸ್‌ನ ಮೂಲ ಪತ್ತೆ ಹಚ್ಚಿ, ಸೋಂಕಿನ ತೀವ್ರತೆಯನ್ನು ನಿಯಂತ್ರಿಸಲು ಕ್ಲಿನಿಕಲ್ ಆಡಿಟ್ (Clinical Audit) ಆರಂಭಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ನಿಗಾವಹಿಸಲು ನಿರ್ಧರಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸಾ ಕೇಂದ್ರ, ಸರ್ಕಾರಿ ಜನರಲ್ ಆಸ್ಪತ್ರೆ, ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಆಡಿಟ್‌ಗೆ ಸೂಚಿಸಲಾಗಿದೆ. ವಯೋಮಾನ ಆಧಾರದಲ್ಲಿ ರೋಗಿಗಳ ರೋಗ ಲಕ್ಷಣ ಏನಿದೆ‌? ಯಾವಾಗಿನಿಂದ ರೋಗ ಲಕ್ಷಣವಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ.

ಜತೆಗೆ 50 ವರ್ಷ ಮೇಲ್ಪಟ್ಟವರ ಪರಿಸ್ಥಿತಿ ಹೇಗಿದೆ ಎಂಬುದರ ಕುರಿತ ಆಡಿಟ್ ರಿಪೋರ್ಟ್ ಮಾಡಲು ತೀರ್ಮಾನಿಸಲಾಗಿದೆ. ಈ ಆಡಿಟ್ ಈಗಾಗಲೇ ಆರಂಭವಾಗಿದ್ದು, ರಿಪೋರ್ಟ್ ಆಧರಿಸಿ ಮುನ್ನೆಚ್ಚರಿಕಾ ಕ್ರಮ ಹೇಗಿರಬೇಕು ಎಂಬುದನ್ನು ತಿಳಿಸಲು ತಾಂತ್ರಿಕ ‌ಸಲಹಾ ಸಮಿತಿ ಮುಂದೆ ವರದಿಯನ್ನು ಸಲ್ಲಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ತಿಳಿಸಿದ್ದಾರೆ.

ಹಾಸನದ ವೃದ್ಧನಲ್ಲಿ ಪತ್ತೆ ಆಗಿತ್ತು ಎಚ್‌3ಎನ್‌2 ವೈರಸ್‌

ಹಾಸನ ಜಿಲ್ಲೆ ಆಲೂರು ತಾಲೂಕಿನ ಮೂಲದ 78 ವರ್ಷದ ಹಿರಿಯ ನಾಗರಿಕರೊಬ್ಬರು ಮಾರ್ಚ್ 1ರಂದು ಆಲೂರಿನಲ್ಲಿ ಮೃತಪಟ್ಟಿದ್ದರು. ಇವರಿಗೆ H3N2 ಪಾಸಿಟಿವ್‌ ಇದ್ದಿದ್ದು ದೃಢವಾಗಿತ್ತು. ಜ್ಚರ, ಗಂಟಲುನೋವು, ಕೆಮ್ಮಿನಿಂದ ಇವರು ಬಳಲುತ್ತಿದ್ದರು. ಮೃತರಿಗೆ H3N2 ಇರುವುದನ್ನು ಆರೋಗ್ಯ ಇಲಾಖೆ ದೃಢಪಡಿಸಿತ್ತು. H3N2 ವೈರಸ್‌ನಿಂದ ರಾಜ್ಯದಲ್ಲಿ ಆಗುತ್ತಿರುವ ಮೊದಲ ಸಾವು ಇದಾಗಿದೆಯಲ್ಲದೆ, ದೇಶದಲ್ಲಿಯೇ ಮೊದಲ ಸಾವು ಕೂಡ ಆಗಿದೆ. ಕೋವಿಡ್‌ ವೈರಸ್‌ನ ಮೊದಲ ಸಾವು ಕೂಡ ಕರ್ನಾಟಕದ ಕಲಬುರಗಿಯಲ್ಲಿ ಆಗಿತ್ತು.

ಭಯ ಬೇಡ ಇರಲಿ ಎಚ್ಚರ

ಎಚ್‌3ಎನ್‌2 (H3N2 Influenza) ಎಂಬುದು ಶೀತಜ್ವರದ ಹೊಸ ರೂಪಾಂತರಿಯಾಗಿದ್ದು, ರಾಜ್ಯದಲ್ಲಿ ಈವರೆಗೆ 26 ಕೇಸ್‌ಗಳು ಪತ್ತೆ ಆಗಿದೆ. ಸಾಂಕ್ರಾಮಿಕವಾಗಿ ಬಹುಬೇಗ ಹರಡಲಿದೆಯಾದರೂ ಹೆಚ್ಚಿನ ಅಪಾಯವನ್ನು ಹೊಂದಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಹಿಸುವುದು ಅಗತ್ಯವಾಗಿದೆ.

ವಾತಾವರಣದಲ್ಲಿ ಹಿಟ್ ವೇವ್ ಹೆಚ್ಚಿದ್ದು, ಜನರು ಬಿಸಿಲಿನಲ್ಲಿ ಅನಗತ್ಯವಾಗಿ ಓಡಾಟ ಮಾಡುವುದನ್ನು ನಿಲ್ಲಿಸಬೇಕು. ಮುಖ್ಯವಾಗಿ 11ರಿಂದ 3 ಗಂಟೆವರೆಗೆ ಬಿಸಿಲಿಗೆ ಹೋಗುವುದು ಕಮ್ಮಿ ಮಾಡಬೇಕು. ಕನಿಷ್ಠ 2-3 ಲೀಟರ್‌ ನೀರು, ಮಜ್ಜಿಗೆ, ಎಳನೀರು, ಶರಬತ್‌ ಕುಡಿಯುವುದೊಳಿತು. ದೇಹದಲ್ಲಿ ನೀರು ಕಡಿಮೆ ಆಗದಂತೆ ಎಚ್ಚರ ವಹಿಸಬೇಕು.

ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಾಗ ವೈದ್ಯರ ಸಲಹೆ ಇಲ್ಲದೆ ಯಾವುದೇ ಕಾರಣಕ್ಕೂ ಆ್ಯಂಟಿ ಬಯೋಟಿಕ್ ತೆಗೆದುಕೊಳ್ಳಬಾರದು. ಬೇಸಿಗೆ ಕಾಲವಾಗಿರುವುದರಿಂದ ಇದು ಅಪಾಯಕಾರಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರಲಿದ್ದು, ಶಾಲೆಯಲ್ಲಿದ್ದಾಗ ಹಲವರ ಸಂಪರ್ಕಕ್ಕೆ ಬರುತ್ತಾರೆ. ಅದರಲ್ಲೂ 15 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿಯರಿಗೆ ಸುಲಭವಾಗಿ H3N2 ಸೋಂಕು ಹರಡುವ ಸಾಧ್ಯತೆ ಇದೆ. 60 ವರ್ಷ ಮೇಲ್ಪಟ್ಟವರು ರೋಗ ಲಕ್ಷಣದ ಕುರಿತು ಎಚ್ಚರ ವಹಿಸಬೇಕು.

H3N2 ಲಕ್ಷಣಗಳು ಏನು?

ದೀರ್ಘಕಾಲದ ಕೆಮ್ಮು, ವಾಕರಿಕೆ, ವಾಂತಿ, ಗಂಟಲು ನೋವು ಹಾಗೂ ಸ್ನಾಯು ಸೆಳೆತ ಕಂಡು ಬರುತ್ತದೆ.

ಇದನ್ನೂ ಓದಿ: Family Dispute: ಕಾಟ ಕೊಡ್ತಾಳೆ ನನ್ನ ಹೆಂಡ್ತಿ, ಊಟ ಕೊಡಲ್ಲ ಮಾರಾಯ್ತಿ; ಅವಳು ಏಳೋದೂ ಲೇಟು: ಇದು ಗಂಡನ ಕಂಪ್ಲೇಂಟು

ಸುರಕ್ಷತೆ ಹೇಗಿರಬೇಕು?

ಆಗಾಗ ಕೈಗಳನ್ನು ತೊಳೆಯಬೇಕು, ಮಾಸ್ಕ್ ಧರಿಸಿ, ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಓಡಾಟ ಬೇಡ, ಪದೇಪದೆ ಮೂಗು, ಬಾಯಿ ಮುಟ್ಟಬೇಡಿ, ನೀರನ್ನು ಜಾಸ್ತಿ ಸೇವಿಸಿ, ಜ್ವರ, ಮೈ-ಕೈ ನೋವು ಇದ್ದರೆ ನಿರ್ಲಕ್ಷ್ಯ ಮಾಡದೇ ವೈದ್ಯರ ಬಳಿ ತಪಾಸಣೆ ಮಾಡಿಸಿ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version