ಕಾರವಾರ: ವಿವಾಹಿತ ಮಹಿಳೆಯ ಫೋಟೋಗಳನ್ನು ಎಡಿಟ್ ಮಾಡಿ ಆಕೆಯ ಸ್ನೇಹಿತರಿಗೆ ಕಳುಹಿಸುವ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದ ಹೊನ್ನಾವರ ಮೂಲದ ಹ್ಯಾಕರ್‌ನನ್ನು (Hacker Arrested) ಹರಿಯಾಣ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.
ಹೊನ್ನಾವರ ತಾಲೂಕಿನ ಚಂದಾವರ ಗ್ರಾಮದ ಇಮಾದ್ ಮುಲ್ಲಾ ಎಂಬಾತನೇ ಪೊಲೀಸರು ವಶಪಡಿಸಿಕೊಂಡ ವ್ಯಕ್ತಿ. ಹರಿಯಾಣ ಪೊಲೀಸರು ಹೊನ್ನಾವರ ಪೊಲೀಸರ ಸಹಕಾರದಲ್ಲಿ ಆತನ ಮನೆಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದರು. ಆತನಿಂದ ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಏನಿದು ಪ್ರಕರಣ?
ವೈಯಕ್ತಿಕ ದ್ವೇಷದಿಂದ ಅಮೆರಿಕ ಮೂಲದ ಮಹಿಳೆಯೊಬ್ಬಳು ಹರಿಯಾಣದ ಗುರುಗ್ರಾಮ ಮೂಲದ ವಿವಾಹಿತ ಮಹಿಳೆಯ ಚಾರಿತ್ರ್ಯ ಹಾಳು ಮಾಡಲು ಸಂಚು ಹೂಡಿದ್ದಳು ಎನ್ನಲಾಗಿದೆ. ಅದಕ್ಕಾಗಿ ಹ್ಯಾಕರ್‌ಗಳನ್ನು ಹುಡುಕುತ್ತಾ ಅಪ್ ವರ್ಕ್ ಡಾಟ್ ಕಾಮ್ ವೆಬ್‌ಸೈಟ್ ಮೂಲಕ ಇಮಾದ್ ಮುಲ್ಲಾನನ್ನು ಸಂಪರ್ಕ ಮಾಡಿದ್ದಳು. ತಾನು ಸೂಚಿಸಿದ ಮಹಿಳೆಯ ಮೊಬೈಲ್ ಅನ್ನು ಹ್ಯಾಕ್ ಮಾಡಿ, ಆಕೆಯ ನಂಬರ್‌ನಿಂದ ಬೇರೆಯವರಿಗೆ ಆಕೆಯ ನಗ್ನ ವಿಡಿಯೋ ಹಾಗೂ ಫೋಟೋಗಳನ್ನು ಕಳುಹಿಸುವಂತೆ ಇಮಾದ್ ಮುಲ್ಲಾನಿಗೆ ಆಕೆ ಸುಪಾರಿ ಕೊಟ್ಟಿದ್ದಳು ಎನ್ನಲಾಗಿದೆ.
ಸುಪಾರಿ ಪಡೆದಿದ್ದ ಇಮಾದ್, ಮಹಿಳೆಯ ಮೊಬೈಲ್ ಅನ್ನು ಹ್ಯಾಕ್ ಮಾಡಿ, ಆಕೆಯ ಫೋಟೋಗಳನ್ನು ಮೊಬೈಲ್‌ನಿಂದ ತೆಗೆದುಕೊಂಡಿದ್ದ. ಆಕೆಯ ಫೋಟೋವನ್ನು ಬೆತ್ತಲಾಗಿರುವಂತೆ ಎಡಿಟ್ ಮಾಡಿದ್ದ. ಆಕೆಯ ಫೋಟೋಗಳನ್ನು ಬಳಸಿ ನಕಲಿ ಅಶ್ಲೀಲ ವಿಡಿಯೋಗಳನ್ನು ತಯಾರಿಸಿ, ಆಕೆಯ ನಂಬರ್‌ನಿಂದಲೇ ಆಕೆಯ ಸಂಪರ್ಕದಲ್ಲಿದ್ದ ಇತರೆ ನಂಬರ್‌ಗಳಿಗೆ ನಿತ್ಯ ಬೆಳಗ್ಗೆ, ರಾತ್ರಿ ಫೋಟೊ ಹಾಗೂ ವಿಡಿಯೋಗಳನ್ನು ಕಳುಹಿಸುತ್ತಿದ್ದ!
ಇದನ್ನೂ ಓದಿ | Coronavirus | ಜನರು ಇನ್ನು ಕೋವಿಡ್ ಲಸಿಕೆಯ 2ನೇ ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಪ್ರಾರಂಭಿಸಲಿ ಎಂದ ಕೇಂದ್ರ ಆರೋಗ್ಯ ಸಚಿವ
ವಿಷಯ ತಿಳಿದ ಮಹಿಳೆ ತನ್ನದೇ ನಂಬರ್‌ನಿಂದ ವಿಡಿಯೋ, ಫೋಟೋಗಳು ಶೇರ್ ಆಗುತ್ತಿರುವುದರಿಂದ ಗಾಬರಿಗೊಂಡು, ಮಾನಸಿಕ ಹಿಂಸೆಗೆ ಸಹ ಗುರಿಯಾಗಿದ್ದಳು. ಅಲ್ಲದೇ ಇದು ಆಕೆಯ ಸಾಂಸಾರಿಕ ಜೀವನದಲ್ಲೂ ಸಾಕಷ್ಟು ಒಡಕಿಗೆ ಕಾರಣವಾಗಿತ್ತು. ಇದರಿಂದ ಬೇಸತ್ತ ಮಹಿಳೆ ಗುರುಗ್ರಾಮ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಹರಿಯಾಣ ಪೊಲೀಸರು, ಮೊಬೈಲ್ ಹ್ಯಾಕ್ ಆಗಿರುವ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸುತ್ತಿರುವಾಗ ಅಮೆರಿಕ ಮೂಲದ ಮಹಿಳೆಯ ಜೊತೆ ಈ ದೂರುದಾರ ಮಹಿಳೆಗೆ ವೈಯಕ್ತಿಕ ದ್ವೇಷವಿರುವುದು ಕಂಡು ಬಂದಿತ್ತು. ಬಳಿಕ ಹೆಚ್ಚಿನ ಮಾಹಿತಿ ಕಲೆ ಹಾಕಿದಾಗ ಈ ಪ್ರಕರಣದಲ್ಲಿ ಹೊನ್ನಾವರ ತಾಲೂಕಿನ ಚಂದಾವರ ಮೂಲದ ಹ್ಯಾಕರ್‌ನ ಕೈವಾಡ ಇರುವ ಬಗ್ಗೆ ತಿಳಿದು ಬಂದಿತ್ತು. ತಕ್ಷಣ ಹೊನ್ನಾವರಕ್ಕೆ ಬಂದ ಹರಿಯಾಣ ಪೊಲೀಸರ ತಂಡ, ಆರೋಪಿಯನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ಹ್ಯಾಕರ್ ಇಮಾದ್ ಮುಲ್ಲಾ ಇನ್ನೂ ಹಲವರ ಮೊಬೈಲ್ ಹ್ಯಾಕ್ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Ghol fish | ಉಡುಪಿಯಲ್ಲಿ ಬಲೆಗೆ ಬಿತ್ತು 2 ಲಕ್ಷ ರೂ. ಬೆಲೆಯ ಮೀನು!