Site icon Vistara News

Ananth Namana: ಅನಂತ ಕುಮಾರ್ ಇದ್ದಿದ್ದರೆ ಕಾವೇರಿ ಇಷ್ಟರ ಮಟ್ಟಿಗೆ ವಿವಾದ ಆಗುತ್ತಿರಲಿಲ್ಲ ಎಂದ ಡಿಕೆಶಿ

Book release in Ananth Namana Programme

ಬೆಂಗಳೂರು: ಕೇಂದ್ರ ಮಾಜಿ ಸಚಿವ ಅನಂತ ಕುಮಾರ್ (Ananth Namana) ಅಜಾತಶತ್ರು. ರಾಜ್ಯದ ಹಿತಾಸಕ್ತಿಗೆ ಯಾವುದೇ ತೊಂದರೆ ತೆಗೆದುಕೊಳ್ಳಲು ಅವರು ಸದಾ ಸಿದ್ಧರಾಗಿರುತ್ತಿದ್ದರು. ಅವರು ಈಗ ಇದ್ದಿದ್ದರೇ ಯಾವುದೇ ಕಾರಣಕ್ಕೂ ಕಾವೇರಿ ವಿವಾದ ಇಷ್ಟರಮಟ್ಟಿಗೆ ಹೋಗಲು ಬಿಡುತ್ತಿರಲಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಬೆಂಗಳೂರಿನಲ್ಲಿ ಶನಿವಾರ ನಡೆದ ಅನಂತ ನಮನ -64 (Ananth Namana) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನಂತಕುಮಾರ್ ಕೇಂದ್ರ ಸಚಿವರಾಗಿದ್ದಾಗ ಕಾವೇರಿ ನೀರಿನ ಬಗ್ಗೆ ರಾತ್ರೋರಾತ್ರಿ ಅಫೀಡವಿಟ್ ಬದಲಾಯಿಸಿ ಕರ್ನಾಟಕದ ಪರವಾಗಿ ನಿಂತಿದ್ದರು ಎಂದು ಸ್ಮರಿಸಿದರು.

ತೇಜಸ್ವಿನಿ ರಾಜಕೀಯದಲ್ಲಿ ಮುನ್ನುಗ್ಗಬೇಕು

1985ರಲ್ಲಿ ನನಗೆ ಮೊದಲ ಬಾರಿಗೆ ವಿಧಾನಸಭೆ ಟಿಕೆಟ್ ಸಿಕ್ಕಿದಾಗ, ಅನಂತ್‌ಕುಮಾರ್ ರಹಸ್ಯವಾಗಿ 5 ಸಾವಿರ ರೂ. ಹಣ ನೀಡಿದ್ದರು. ರಾಜ್ಯದ ಪರವಾಗಿ ನಿಲ್ಲುತ್ತಿದ್ದ ಅವರನ್ನು ಸರ್ವಪಕ್ಷ ಸಭೆಯಲ್ಲಿ ಎಲ್ಲರೂ ನೆನಪಿಸಿಕೊಂಡರು. ನನ್ನ ಸಹೋದರಿ ತೇಜಸ್ವಿನಿ ಧೈರ್ಯ ಮಾಡಿ ರಾಜಕೀಯದಲ್ಲಿ ಮುನ್ನುಗ್ಗಬೇಕು. ಅನಂತ ಕುಮಾರ್ ಅವರ ಜತೆ ಸಂಸಾರ ಮಾಡಿ ನಿಮ್ಮದೇ ಆದ ರಾಜಕೀಯ ಜ್ಞಾನವಿದೆ, ನೀವು ರಾಜಕೀಯಕ್ಕೆ ಬರಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ | CM Siddaramaiah : ಶಾಸಕ, ಸಂಸದರಿಗೆ Good News; ಇನ್ನು ಮುಂದೆ ಪ್ರತಿ ಶನಿವಾರ ಸಿಎಂ ಸಿದ್ದರಾಮಯ್ಯ ನಿಮ್ಮನ್ನು ಭೇಟಿಯಾಗ್ತಾರೆ!

ಎಷ್ಟೋ ಹಸುಗಳು ಹುಟ್ಟುತ್ತವೆ, ಆದರೆ ಎಲ್ಲವೂ ಬಸವ ಆಗಲು ಸಾಧ್ಯವಿಲ್ಲ. ನೀವು ಇಲ್ಲೇ ಅಡುಗೆ ಮನೆಯಲ್ಲಿ ಅದಮ್ಯ ಚೇತನದ ಜತೆಯಲ್ಲೇ ಇರಬೇಕಾಗುತ್ತದೆ. ನಿಮ್ಮ ಹಿಂದೆ ದೊಡ್ಡ ಪಡೆ ಇದೆ, ಸಮಾಜವಿದೆ. ಮುನ್ನುಗ್ಗಿ, ನಿಮ್ಮನ್ನು ನಂಬಿಕೊಂಡಿರುವ ಹಿಂಬಾಲಕರನ್ನು ರಕ್ಷಣೆ ಮಾಡಿ. ತೇಜಸ್ವಿನಿ ಅವರೇ ನೀವು ಮುನ್ನುಗ್ಗಬೇಕು‌, ಹೊಲವನ್ನು ಉಳುಮೆ ಮಾಡದಿದ್ದರೆ ಮಟ್ಟ ಆಗುವುದಿಲ್ಲ. ಶಿಲೆ ಶಿಲ್ಪಿ ಕೈಗೆ ಸಿಗದಿದ್ದರೆ ಕಲೆ ಅರಳುವುದಿಲ್ಲ, ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಈ ಕಾರಣಕ್ಕೆ ನೀವು ರಾಜಕಾರಣದಲ್ಲಿ ಇರಬೇಕು ಎಂದು ಸಲಹೆ ‌ನೀಡುತ್ತೇನೆ ಎಂದರು.

ಮೆಟ್ರೋ ರೈಲು ಬರಲು ಅನಂತ ಕುಮಾರ್ ಕಾರಣ

ನಿಮ್ಮ ಇತಿಹಾಸವನ್ನು ಯಾರೂ ಬದಲಾವಣೆ ಮಾಡಲು, ಮುಚ್ಚಿಹಾಕಲು ಆಗುವುದಿಲ್ಲ. ಒಳ್ಳೆ ಕೆಲಸ ಮಾಡಿ ನಿಮ್ಮದೇ ಆದ ಛಾಪನ್ನು ಮೂಡಿಸಿಕೊಂಡಿದ್ದೀರಿ. ನಿಮ್ಮ ಜತೆ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಆದರೆ ನಿಮ್ಮ ಬಳಿ ಮೃದು ಹೃದಯವಿದೆ. ಅನಂತ ಕುಮಾರ್ ಅವರು ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ,‌ ನೀವು ಹೆಜ್ಜೆ ಗುರುತು ಮೂಡಿಸಿ. ರಾಜ್ಯದಲ್ಲಿ ಮೆಟ್ರೋ ಬರಲು ಎಸ್.ಎಂ. ಕೃಷ್ಣ ಮತ್ತು ಅನಂತ ಕುಮಾರ್ ಅವರೇ ಕಾರಣ ಎಂದು ಹೇಳಿದರು.

ನಾನು ಎಸ್‌.ಎಂ.ಕೃಷ್ಣ ಅವರ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವನಾಗಿದ್ದೆ. ಕೇಂದ್ರದಲ್ಲಿ ಅನಂತ ಕುಮಾರ್ ನಗರಾಭಿವೃದ್ಧಿ ಸಚಿವರಾಗಿದ್ದರು. ಹಿಂದಿನ ಜೆ.ಎಚ್.ಪಟೇಲ್ ಸರ್ಕಾರ ಮೋನೊ ರೈಲಿಗೆ ಒಪ್ಪಿಗೆ ನೀಡಿತ್ತು. ಹುಡ್ಕೋ ಸಂಸ್ಥೆಯಿಂದ ನನ್ನನ್ನು ಹಾಗೂ ಇತರೇ ಸ್ನೇಹಿತರನ್ನು ವಿದೇಶಕ್ಕೆ ಮೆಟ್ರೊ ಕಾರ್ಯಾಚರಣೆ ಬಗ್ಗೆ ಅಧ್ಯಯನ ಮಾಡಲು ಪ್ರವಾಸ ಕಳುಹಿಸಿದ್ದರು. ಶ್ರೀಧರನ್ ಅವರು ಜತೆಯಲ್ಲಿ ಇದ್ದರು. ನಾವು ಮೆಟ್ರೋ ಇದ್ದರೆ ಅನುಕೂಲ ಎಂದು ಎಸ್‌.ಎಂ.ಕೃಷ್ಣ ಅವರಿಗೆ ವರದಿ ನೀಡಿದೆವು. ಅವರು ಅನಂತಕುಮಾರ್ ಅವರನ್ನು ಭೇಟಿಯಾಗಲು ಹೇಳಿದರು. ಕೇವಲ ಒಂದೇ ದಿನದಲ್ಲಿ ಪ್ರಧಾನಿಗಳಾದ ವಾಜಪೇಯಿ ಅವರನ್ನು ಭೇಟಿ ಮಾಡಿಸಿ, ನಿಮ್ಮ ಸಮಿತಿಯ ವರದಿ ಸರಿಯಾಗಿದೆ ಎಂದು ಹೇಳಿ, ಕೇಂದ್ರದಿಂದ ಒಪ್ಪಿಗೆ ಕೊಡಿಸಿದರು ಎಂದು ಸ್ಮರಿಸಿದರು.

ಯಾರು ಏನೇ ಹೇಳಿದರೂ ಬೆಂಗಳೂರು ಮೆಟ್ರೋ ಅನಂತ ಕುಮಾರ್ ಹಾಗೂ ಕೃಷ್ಣ ಅವರ ಕೊಡುಗೆ. ನಾನು ದೇವರು ಹಾಗೂ ಧರ್ಮದ ಬಗ್ಗೆ ನಂಬಿಕೆ ಇರುವವನು. ಬಿಟ್ಟು ಹೋಗುವುದಕ್ಕಿಂತ ಕೊಟ್ಟು ಹೋಗುವುದು ಲೇಸಯ್ಯ ಎನ್ನುವ ಪುರಂದರದಾಸರ ಮಾತಿನಂತೆ ಬದುಕಿದವರು ಅನಂತ್‌ಕುಮಾರ್. ಆದರೆ ಅವರ ವಿಚಾರದಲ್ಲಿ ದೇವರು ಕ್ರೂರಿಯಾಗಿಬಿಟ್ಟ. ಯಾವಾಗಲೂ ಅವರು ಎಲ್ಲರನ್ನೂ ನಗಿಸುತ್ತಾ ಇದ್ದವರು ಎಂದು ತಿಳಿಸಿದರು.

ಸ್ವಂತಕ್ಕೆ ಏನೂ ಮಾಡಿಕೊಂಡಿಲ್ಲ

ಡಿವಿಜಿ ಅವರ ನಗುವು ಸಹಜ ಧರ್ಮ, ನಗಿಸುವುದು ಪರಧರ್ಮ, ನಗುವ ಕೇಳುತ ನಗುವುದತಿಶಯದ ಧರ್ಮ, ನಗುವ ನಗಿಸುವ ನಗಿಸಿ ನಗುತ ಬಾಳುವ ಎಂಬ ಕಗ್ಗದಂತೆ ಬಾಳಿದವವರು ಅನಂತಕುಮಾರ್. ಪರೋಪಕಾರಾಯ ವಹಂತಿ ನದ್ಯಃ ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮ್ ಇದಂ ಶರೀರಮ್. ಮರ- ಗಿಡಗಳು, ಹಸುಗಳು, ನದಿಗಳು ಸ್ವಂತಕ್ಕೆ ಏನನ್ನೂ ಕೇಳುವುದಿಲ್ಲ,‌ ಇವುಗಳು ಇರುವುದೇ ಪ್ರಕೃತಿಯ ಸೇವೆಗೆ, ಅದೇ ರೀತಿ ಅನಂತಕುಮಾರ್ ಅವರು ಸ್ವಂತಕ್ಕೆ ಏನೂ ಮಾಡಿಕೊಂಡಿಲ್ಲ, ಅವರು ಸೇವೆ ಮಾಡಿರುವುದೇ ಸಮಾಜಕ್ಕೆ ಎಂದರು.

ಇದನ್ನೂ ಓದಿ | Pradeep Eshwar: ಪೌರಕಾರ್ಮಿಕರಿಗೆ ಪಾದ ಪೂಜೆ ಮಾಡಿದ ಶಾಸಕ ಪ್ರದೀಪ್‌ ಈಶ್ವರ್‌

40 ವರ್ಷಗಳಲ್ಲಿ ನೂರಾರು ನಾಯಕರನ್ನು ತಯಾರು ಮಾಡಿ, ಅವರನ್ನು ಅನಾಥರನ್ನಾಗಿ ಮಾಡಿ ಹೋಗಿದ್ದಾರೆ‌. ಅವರು ಕೇವಲ ತೇಜಸ್ವಿನಿ ಅವರನ್ನು ಮಾತ್ರ ಬಿಟ್ಟು ಹೋಗಿಲ್ಲ. ನನಗೆ ವಿದ್ಯಾರ್ಥಿ ದೆಸೆಯಿಂದಲೂ ಅನಂತ್‌ಕುಮಾರ್ ಅವರು ತುಂಬಾ ಆತ್ಮೀಯರು. ಅವರು ಎಬಿವಿಪಿ ನಾಯಕರಾಗಿದ್ದರು, ಆಗಾಗ್ಗೆ ಜನರಲ್ ಹಾಸ್ಟೆಲ್‌ಗೆ ಬಂದು ಕಾಲ ಕಳೆಯುತ್ತಿದ್ದರು. ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ, ಪದುಮನಾಭನ ಪಾದ ಭಜನೆ ಪರಮ ಸುಖವಯ್ಯ, ಎಂಬ ಮಾತಿನಂತೆ ಇಂದು ನಾವೆಲ್ಲ ಅನಂತಪದುಮನಾಭ ಅವರನ್ನು ನೆನಪಿಸಿಕೊಂಡಿದ್ದೇವೆ. ಅವರ ಕನಸುಗಳನ್ನು ನನಸಾಗಿಸೋಣ ಎಂದು ಕರೆ ನೀಡಿದರು.

Exit mobile version