Site icon Vistara News

Mk III Helicopter | ಕೋಸ್ಟ್ ಗಾರ್ಡ್‌ಗೆ ಕೊನೆಯ Mk III ಕಾಪ್ಟರ್ ಹಸ್ತಾಂತರಿಸಿದ ಎಚ್ಎಎಲ್, ಮತ್ತೆ 9ಕ್ಕೆ ಆರ್ಡರ್!

HAL

ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(HAL) ತಾನು ಪಡೆದುಕೊಂಡಿದ್ದ ಆರ್ಡರ್‌ನ ಕೊನೆಯ Mk III ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್(ALHs) ಅನ್ನು ಭಾರತೀಯ ಕರಾವಳಿ ಕಾವಲು ಪಡೆಗೆ ಹಸ್ತಾಂತರಿಸಿದೆ. ಕೋಸ್ಟ್ ಗಾರ್ಡ್ ಎಚ್ಎಎಲ್‌ಗೆ ಒಟ್ಟು 16 ಕಾಪ್ಟರ್‌ಗಳಿಗೆ ಆರ್ಡರ್ ಕೊಟ್ಟಿತ್ತು. ಈ ಪೈಕಿ ಮೊದಲನೇ ಹಂತದಲ್ಲಿ ಕಳೆದ ವರ್ಷ ಜೂನ್‌ನಲ್ಲಿ ಮೂರು ಕಾಪ್ಟರ್‌ಗಳನ್ನು ಎಚ್ಎಎಲ್ ನೀಡಿತ್ತು. ಈಗ ಕೊನೆಯ ಕಾಪ್ಟರ್ ಹಸ್ತಾಂತರಿಸಿದೆ. ಈ ಹೆಲಿಕಾಪ್ಟರ್‌ಗಳ ಪೂರೈಕೆಗಾಗಿ ಕೋಸ್ಟ್ ಗಾರ್ಡ್ ಎಚ್ಎಎಲ್‌ನೊಂದಿಗೆ 2017 ಮಾರ್ಚ್‌ನಲ್ಲಿ ಒಡಂಬಡಿಕೆ ಮಾಡಿಕೊಂಡಿತ್ತು. ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಇಂಡಿಯನ್ ಕೋಸ್ಟ್ ಗಾರ್ಡ್‌ನ ಪ್ರಧಾನ ನಿರ್ದೇಶಕ ವಿ ಎಸ್ ಪಠಾನಿಯಾ ಹಾಗೂ ರಕ್ಷಣಾ ಇಲಾಖೆ, ಎಚ್ಎಎಲ್‍ನ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿ.ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ನಾವು ಹೆಮ್ಮೆ ಪಡುತ್ತೇವೆ. ಇನ್ನೂ ಒಂಬತ್ತು ಹೆಲಿಕಾಪ್ಟರ್‌ಗಳಿಗೆ ಲೆಟರ್ ಆಫ್ ಇಂಟೆಂಟ್ (ಎಲ್‌ಒಐ) ನೀಡಲು ಸಂತೋಷವಾಗುತ್ತಿದೆ. ಕೋವಿಡ್-19ರ ಹೊರತಾಗಿಯೂ, ತಡೆರಹಿತ ಉತ್ಪಾದನಾ ಚಟುವಟಿಕೆಗಳೊಂದಿಗೆ ಎಚ್ಎಎಲ್ ಎಲ್ಲಾ ಹೆಲಿಕಾಪ್ಟರ್‌ಗಳನ್ನು ಕಡಿಮೆ ಸಮಯದಲ್ಲಿ ಪೂರೈಸಿದೆ. ಇದು ಭಾರತದ ಕಡಲ ಭದ್ರತೆಯನ್ನು ಬಲಪಡಿಸಲು ನಮಗೆ ಬಲವನ್ನು ತಂದುಕೊಡಲಿದೆ ಎಂದು ಡಿಜಿ ಪಠಾನಿಯಾ ಅವರು ಹೇಳಿದರು.

ಇದೇ ವೇಳೆ ಮಾತನಾಡಿದ ಎಚ್ಎಎಲ್ ಸಿಎಂಡಿ ಸಿ ಬಿ ಅನಂತಕೃಷ್ಣನ್ ಅವರು, ಇದು ನಮ್ಮ ಎಲ್ಲಾ ಭವಿಷ್ಯದ ಒಪ್ಪಂದಗಳಿಗೆ ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ. ನಮ್ಮ ಎಲ್ಲಾ ಗ್ರಾಹಕರ ಹಿತದೃಷ್ಟಿಯಿಂದ ಕೆಲಸವನ್ನು ವೇಗಗೊಳಿಸಲು ಮತ್ತು ರಕ್ಷಣಾ ಪರಿಸರ ವ್ಯವಸ್ಥೆಯಲ್ಲಿ ಮೇಕ್-ಇನ್-ಇಂಡಿಯಾ ಚಟುವಟಿಕೆಗಳನ್ನು ಬಲಪಡಿಸಲು ಸಹಾಯಕವಾಗಲಿದೆ. ಇದರ ಜತೆಗೇ ಖಾಸಗಿ ಪಾಲುದಾರರೊಂದಿಗೆ ಕೆಲಸ ಮಾಡುವ ನಮ್ಮ ಸಂಕಲ್ಪವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಅವರು ತಿಳಿಸಿದರು.

ಎಚ್ಎಎಲ್ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್‌ಗಳನ್ನು ಸ್ವದೇಶಿಯವಾಗಿ ವಿನ್ಯಾಸಗೊಳಿಸಿದೆ. ಅಭಿವೃದ್ಧಿಪಡಿಸಿ ಮತ್ತು ಉತ್ಪಾದಿಸಿದೆ. ಎಚ್ಎಎಲ್ ಈವರೆಗೆ 330 ಈ ಹೆಲಿಕಾಪ್ಟರ್‌ಗಳನ್ನು ತಯಾರಿಸಿದೆ.

ಇದನ್ನೂ ಓದಿ | Modi in Bengaluru | ಎಂಟೇ ವರ್ಷದಲ್ಲಿ ದೇಶದ ವಿಮಾನ ನಿಲ್ದಾಣಗಳ ಸಂಖ್ಯೆ ಡಬಲ್‌: ನರೇಂದ್ರ ಮೋದಿ

Exit mobile version